Homeರಾಷ್ಟ್ರೀಯಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ಗೆ ‘ಪದ್ಮಭೂಷಣ’ ನೀಡಲು ಬಿಜೆಪಿ ಆಗ್ರಹ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ಗೆ ‘ಪದ್ಮಭೂಷಣ’ ನೀಡಲು ಬಿಜೆಪಿ ಆಗ್ರಹ

ನವದೆಹಲಿ-ಪಶ್ಚಿಮ ಬಂಗಾಳದಲ್ಲಿ ಅಕ್ರಮ ಬಾಂಗ್ಲಾದೇಶಿ ನುಸುಳುಕೋರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆರವುಗೊಳಿಸಿ, ಹಿಂಸಾಚಾರ ರಹಿತ ಚುನಾವಣೆಗೆ ಹಾದಿಮಾಡಿಕೊಟ್ಟ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಭೂಷಣ’ ನೀಡಿ ಗೌರವಿಸಬೇಕು ಎಂದು ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಪ್ರತಿಪಾದಿಸಿದ್ದಾರೆ.

ಚುನಾವಣಾ ಆಯೋಗದ (ECI) ಕಾರ್ಯವೈಖರಿ ಮತ್ತು ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಸುತ್ತ ದೇಶಾದ್ಯಂತ ರಾಜಕೀಯ ಗದ್ದಲ ತೀವ್ರಗೊಂಡಿರುವ ಬೆನ್ನಲ್ಲೇ ಬಿಜೆಪಿ ಈ ಬಲವಾದ ಬೆಂಬಲ ವ್ಯಕ್ತಪಡಿಸಿದೆ. ಗಡಿ ರಾಜ್ಯವಾದ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಲ್ಲಿದ್ದ ಅಕ್ರಮ ಬಾಂಗ್ಲಾದೇಶಿ ನುಸುಳುಕೋರರ ಹೆಸರುಗಳನ್ನು ತೆಗೆದುಹಾಕಲು ಜ್ಞಾನೇಶ್ ಕುಮಾರ್ ದಿಟ್ಟ ಕ್ರಮ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಬಹುಕಾಲದ ನಂತರ ಭೀತಿ ಮತ್ತು ಕೊಲೆ-ಹಿಂಸಾಚಾರಗಳಿಲ್ಲದೆ ಸಾರ್ವಜನಿಕರು ಮುಕ್ತವಾಗಿ ಮತ ಚಲಾಯಿಸಲು ಅವಕಾಶ ಸಿಕ್ಕಿದೆ.

ವಿಪಕ್ಷಗಳ ವಾಗ್ದಾಳಿಗೆ ತಿರುಗೇಟು:

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಸಿಇಸಿ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ತಳ್ಳಿಹಾಕಿದ ಭಟ್ಟಾಚಾರ್ಯ, ಚುನಾವಣೆಗಳಲ್ಲಿ ಅಕ್ರಮ ಎಸಗಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಹಾಳುಮಾಡಿದ್ದಕ್ಕಾಗಿ ವಿಪಕ್ಷಗಳೇ ತನಿಖೆ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ‘SIR’ ಪ್ರಕ್ರಿಯೆಯ ಸಮಯದಲ್ಲಿ ಇಬ್ಬರು ಚುನಾವಣಾ ಆಯುಕ್ತರ ಸಮ್ಮತಿಯಿಲ್ಲದೆ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ವರದಿಗಳ ನಂತರ ವಿಪಕ್ಷಗಳು ಕಟು ಟೀಕೆ ವ್ಯಕ್ತಪಡಿಸುತ್ತಿವೆ.ಸಿಇಸಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಹಾಗೂ ಕಾಕ್ರೋಚ್ ಜನತಾ ಪಕ್ಷ (CJP) ಸೇರಿದಂತೆ ವಿವಿಧ ವಿಪಕ್ಷಗಳು ಸೆಪ್ಟೆಂಬರ್ 25 ರಂದು ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆಸಿದ್ದು, 48 ಗಂಟೆಗಳ ಗಡುವು ನೀಡಿದ್ದವು.

ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ:

ಚುನಾವಣಾ ಆಯೋಗದ ತಂತ್ರಾಂಶ ಬದಲಾವಣೆ ಮತ್ತು ಆದೇಶಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.ಬಿಜೆಪಿಯ ಸ್ಪಷ್ಟನೆ: ಆಯೋಗದ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳ ವರದಿಗಳನ್ನು ಉಲ್ಲೇಖಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ, ಇದು ಚುನಾವಣಾ ಆಯೋಗದ ಪ್ರಜಾಸತ್ತಾತ್ಮಕ ಕಾರ್ಯವೈಖರಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ

ಎಸ್‌ಐಆರ್ ಸುತ್ತ ವಿವಾದ
ಆದರೆ, ಭಟ್ಟಾಚಾರ್ಯ ಅವರ ಈ ಪ್ರಶಂಸೆ ಚುನಾವಣಾ ಆಯೋಗದ ಆಂತರಿಕ ಕಾರ್ಯವೈಖರಿ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಹೊರಬಂದಿದೆ. ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ಕೈಗೊಂಡ ಕೆಲವು ನಿರ್ಧಾರಗಳು ಹಾಗೂ ಚುನಾವಣಾ ಸಂಬಂಧಿತ ಆದೇಶಗಳು, ಸಾಫ್ಟ್‌ವೇರ್ ಬದಲಾವಣೆಗಳ ಕುರಿತು ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.

ಮುಖ್ಯ ಚುನಾವಣಾ ಆಯುಕ್ತರು ಸೇರಿದಂತೆ ಮೂವರು ಚುನಾವಣಾ ಆಯುಕ್ತರ ನಡುವೆ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು ಎಂಬ ವರದಿಗಳ ಹಿನ್ನೆಲೆಯಲ್ಲಿ, ಆಯೋಗದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯ ಸ್ವರೂಪದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಇದೇ ವಿಚಾರವನ್ನು ಉಲ್ಲೇಖಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ, ಅಧಿಕೃತ ಚರ್ಚೆಗಳಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿರುವುದು ಆಯೋಗದಲ್ಲಿ ಚರ್ಚೆ ನಡೆಯುತ್ತಿರುವುದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.

ಮತದಾರರ ಪಟ್ಟಿಯ ಪರಿಷ್ಕರಣೆಯ ಉದ್ದೇಶ ಅರ್ಹ ಮತದಾರರ ಹಕ್ಕನ್ನು ರಕ್ಷಿಸುವುದೇ ಅಥವಾ ನಿರ್ದಿಷ್ಟ ವರ್ಗದ ಮತದಾರರನ್ನು ಹೊರಗಿಡುವುದೇ ಎಂಬ ವಿಚಾರ ಇದೀಗ ರಾಜಕೀಯ ಚರ್ಚೆಯ ಪ್ರಮುಖ ಅಂಶವಾಗಿದೆ. ‘ಅಕ್ರಮ ವಲಸಿಗರು’ ಎಂಬ ಆರೋಪದ ಆಧಾರ, ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆಯ ಕಾನೂನುಬದ್ಧ ವಿಧಾನ ಹಾಗೂ ಅಂತಿಮವಾಗಿ ಅರ್ಹ ಮತದಾರರಿಗೆ ತಮ್ಮ ಹೆಸರು ಮರುಸೇರಿಸಿಕೊಳ್ಳಲು ನೀಡಲಾಗುವ ಅವಕಾಶಗಳು ಈ ಚರ್ಚೆಯಲ್ಲಿ ನಿರ್ಣಾಯಕವಾಗಿವೆ.

ಈ ಬೆಳವಣಿಗೆಗಳ ನಡುವೆಯೇ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ), ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ, ಜ್ಞಾನೇಶ್ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ. 48 ಗಂಟೆಗಳ ಗಡುವು ನೀಡಿರುವುದಾಗಿ ಸಂಘಟನೆ ಹೇಳಿದ್ದು, ಗಡುವಿನ ಬಳಿಕವೂ ಅವರು ಹುದ್ದೆಯಲ್ಲಿ ಮುಂದುವರಿದರೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.

ಕಾಂಗ್ರೆಸ್ ಕೂಡ ಸೆಪ್ಟೆಂಬರ್ 25ರಂದು ದೇಶದ ವಿವಿಧೆಡೆ ಪ್ರತಿಭಟನೆ ನಡೆಸಿ, ಸಿಇಸಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಚುನಾವಣಾ ಆಯೋಗದ ಕಾರ್ಯವೈಖರಿ, ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಕುರಿತು ವಿರೋಧ ಪಕ್ಷಗಳು ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿವೆ.

RELATED ARTICLES
spot_img

Latest News