Friday, November 22, 2024
Homeರಾಜ್ಯಗ್ಯಾರಂಟಿ ಯೋಜನೆಗಳನ್ನು ಮತವಾಗಿ ಪರಿವರ್ತಿಸಲು ಡಿಕೆಶಿ ಕರೆ

ಗ್ಯಾರಂಟಿ ಯೋಜನೆಗಳನ್ನು ಮತವಾಗಿ ಪರಿವರ್ತಿಸಲು ಡಿಕೆಶಿ ಕರೆ

ಬೆಂಗಳೂರು, ಮಾ.23- ಕಾಂಗ್ರೆಸ್ ಪಕ್ಷದ ಪಂಚಖಾತ್ರಿ ಯೋಜನೆಗಳನ್ನು ಮನೆಮನೆಗೆ ತಲುಪಿಸಿ ಅವನ್ನು ಮತವನ್ನಾಗಿ ಪರಿವರ್ತಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ. ನಗರದ ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಮತ್ತು ಪಕ್ಷ ನಿಮ್ಮನ್ನು ನಂಬಿದೆ.

ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಅನುಷ್ಠಾನ ಸಮಿತಿಗಳನ್ನು ರಚಿಸಲಾಗಿದೆ. ರಾಜ್ಯಮಟ್ಟದ ಸಮಿತಿಯ ಅಧ್ಯಕ್ಷರಿಗೆ, ಸದಸ್ಯರಿಗೆ ಸಂಪುಟದ ಸ್ಥಾನಮಾನ ನೀಡಲಾಗಿದೆ. ಜಿಲ್ಲಾ ಸಮಿತಿಯವರಿಗೆ 50 ಸಾವಿರ ರೂ. ವೇತನ ನೀಡಲಾಗುತ್ತಿದೆ. ಹಾಗೆಯೇ ಜಿಲ್ಲಾ ಸಮಿತಿಯವರಿಗೆ ಜಿಲ್ಲಾ ಪಂಚಾಯಿತಿಯಲ್ಲಿ, ತಾಲೂಕು ಸಮಿತಿಯವರಿಗೆ ತಾಲ್ಲೂಕು ಪಂಚಾಯಿತಿಗಳಲ್ಲಿ ಕಚೇರಿಗಳನ್ನು ನೀಡಲಾಗಿದೆ. ಪ್ರತಿ ತಾಲ್ಲೂಕಿಗೂ 15 ಸಮಿತಿ ಸದಸ್ಯರಿದ್ದಾರೆ ಎಂದು ಹೇಳಿದರು.

15 ಮಂದಿಯೂ ತಮ್ಮ ತಾಲ್ಲೂಕಿನ ಪ್ರತಿ ಪಂಚಾಯಿತಿಗೆ ಇಬ್ಬರಂತೆ ಹಂಚಿಕೆ ಮಾಡಿಕೊಂಡು ಬೂತ್ಗಳಲ್ಲಿ ಎಲ್ಲಾ ಸಮುದಾಯ ಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಳೀಯ ನಾಯಕರ ಜೊತೆ ಸೌಹಾರ್ದತೆಯಿಂದ ಚುನಾವಣೆ ನಡೆಸಬೇಕು. ಕಾಂಗ್ರೆಸ್ಗೆ ಲೀಡ್ ಕೊಡಿ¸ ಬೇಕು ಎಂದು ಸೂಚಿಸಿದರು.

ಸರ್ಕಾರ ನನಗೆ ಉಪಮುಖ್ಯಮಂತ್ರಿ ಎಂದು ಗುರುತಿನ ಚೀಟಿ ನೀಡಿದೆ. ಅದಕ್ಕಿಂತಲೂ ಪ್ರಖರವಾದಂತಹ ಗುರುತಿನ ಚೀಟಿಗಳನ್ನು ಸರ್ಕಾರದ ಚಿಹ್ನೆ ಹಾಗೂ ಸದಸ್ಯರ ಅಧ್ಯಕ್ಷರ ಫೋಟೋಗಳೊಂದಿಗೆ ತಯಾರಿಸಲಾಗಿದೆ. ಅದನ್ನು ಕೊರಳಿಗೆ ಹಾಕಿಕೊಂಡು ನೀವು ವಿಧಾನಸೌಧಕ್ಕೂ ಮುಕ್ತವಾಗಿ ಪ್ರವೇಶಿಸಬಹುದು. ಈ ಕಾರ್ಡ್ ಅಥವಾ ಹುದ್ದೆಗಳನ್ನು ದುರುಪಯೋಗಪಡಿಸಿಕೊಂಡರೆ ಮುಲಾಜಿಲ್ಲದೆ ವಜಾಗೊಳಿಸಲಾಗುತ್ತದೆ. ನೀವು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಸರ್ಕಾರದ ಪ್ರತಿನಿಧಿಗಳು ಎಂಬುದನ್ನು ಮರೆಯಬಾರದು. ಯಾರಾದರೂ ಒಬ್ಬರು ಕೆಟ್ಟ ಹೆಸರನ್ನು ತಂದರೂ ಅದನ್ನು ಸಹಿಸುವುದಿಲ್ಲ ಎಂದು ಹೇಳಿದರು.

ಆರಾಧನಾ, ಆಶಯ, ಆಸ್ಪತ್ರೆ, ಜೆಡಿಪಿ ಸಮಿತಿಗಳ ಸದಸ್ಯರ ಜೊತೆಗೆ ಸಹಕಾರ ಸಂಸ್ಥೆಗಳಲ್ಲಿ ತಲಾ ಮೂವರು ಸದಸ್ಯರ ನೇಮಕಾತಿಗೆ ಅವಕಾಶ ಮಾಡಿಕೊಡಲಾಗಿದೆ. ಚುನಾವಣಾ ನೀತಿ ಸಂಹಿತೆ ಕಾರಣಕ್ಕಾಗಿ ಒಂದೆರಡು ತಾಲ್ಲೂಕುಗಳ ನೇಮಕಾತಿಗೆ ಹಿನ್ನಡೆಯಾಗಿರಬಹುದು. ಆದರೆ ಈಗ ಎಲ್ಲಾ ನೇಮಕಾತಿಗೂ ಶಿಫಾರಸು ಮಾಡಿದ್ದೇವೆ, ಮುಖ್ಯಮಂತ್ರಿಯವರು ಸಹಿ ಹಾಕಿದ್ದಾರೆ. ಕಾರ್ಯಕರ್ತರಿಗೆ ಸೂಕ್ತ ಸಮಯದಲ್ಲಿ ಆದೇಶಗಳು ರವಾನೆಯಾಗುತ್ತವೆ ಎಂದರು.

ಪ್ರಧಾನಮಂತ್ರಿ ಸೇರಿದಂತೆ ಬಿಜೆಪಿಯವರು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದರು. ಆದರೆ ಈಗ ಅವರೇ ಮೋದಿ ಗ್ಯಾರಂಟಿ ಎಂದು ಹೇಳಿಕೊಂಡು ಹೊರಟಿದ್ದಾರೆ. ಚುನಾವಣೆಯಲ್ಲಿ ಮತ ಪಡೆಯಲು ಬಿಜೆಪಿ-ಜೆಡಿಎಸ್ನವರು 400, 500 ರೂ. ಹಣ ಕೊಡಬಹುದು. ಆದರೆ ನಾವು ಸರ್ಕಾರದಿಂದ ತಿಂಗಳಿಗೆ 2 ಸಾವಿರ ರೂ. ನೀಡುವ ಗೃಹಲಕ್ಷ್ಮಿಯೋಜನೆ, ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆಯಡಿ ನಾಲ್ಕೈದು ಸಾವಿರ ರೂ.ಗಳನ್ನು ಪ್ರತಿ ಕುಟುಂಬಕ್ಕೆ ತಿಂಗಳಿಗೆ ನೀಡುತ್ತಿದ್ದೇವೆ. ಚುನಾವಣೆ ಕಾಲಕ್ಕೆ ರಾಜಕೀಯ ಪಕ್ಷಗಳು ನೀಡುವ 500-600 ರೂ.ಗಳು ಲೆಕ್ಕಕ್ಕಿಲ್ಲ. ಸರ್ಕಾರದ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸಿ, ಜನರಿಗೆ ತಿಳಿವಳಿಕೆ ಮೂಡಿಸುವುದು ಅನುಷ್ಠಾನ ಸಮಿತಿಯ ಪದಾಧಿಕಾರಿಗಳ ಜವಾಬ್ದಾರಿ ಎಂದರು.

ಪ್ರತಿ ಸದಸ್ಯರು ಮನೆಮನೆಗೆ ಭೇಟಿ ನೀಡಿದ ಮಾಹಿತಿಯನ್ನು ವಾರ್ಡ್ ರೂಂಗೆ ವಿಡಿಯೋ ಸಮೇತ ಪುರಾವೆ ಕಳುಹಿಸಬೇಕು. ಎಷ್ಟು ಮನೆಗೆ ಭೇಟಿ ನೀಡಿದ್ದೀರ ಎಂಬ ಕರಾರುವಾಕ್ಕಾದ ಲೆಕ್ಕದ ಕಡೆ ನಾವು ನಿಗಾ ವಹಿಸುತ್ತೇವೆ ಎಂದು ಎಚ್ಚರಿಸಿದರು. ಚುನಾವಣೆ ನಂತರ ನಾವು ಇವುಗಳ ಪ್ರಗತಿಪರಿಶೀಲನೆ ನಡೆಸುವುದಾಗಿ ಹೇಳಿದರು.

ಸಣ್ಣಪುಟ್ಟ ದೇವಸ್ಥಾನಗಳಿಗೆ ಧಾರ್ಮಿಕ ದತ್ತಿ ನಿಧಿ ಬಳಸುವ ವಿಧೇಯಕವನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ. ಜೂನ್ ವೇಳೆಗೆ ವಿಧಾನಪರಿಷತ್ನಲ್ಲಿ ನಮಗೆ ಬಹುಮತ ಬರುತ್ತದೆ. ಆಗ ಮತ್ತೊಮ್ಮೆ ಇದೇ ವಿಧೇಯಕವನ್ನು ಅಂಗೀಕಾರ ಮಾಡಿಕೊಳ್ಳುತ್ತೇವೆ. ಬಿಜೆಪಿಯವರು ವಿಧೇಯಕದ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಅವರು ಮಾತ್ರ ಹಿಂದೂಗಳೇ? ನಾವೇನು ಹಿಂದೂಗಳಲ್ಲವೇ? ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News