Wednesday, May 1, 2024
Homeರಾಜ್ಯ3 ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆ ಫೈನಲ್, ಸುಮಲತಾ ರಾಜಕೀಯ ಭವಿಷ್ಯ ಅತಂತ್ರ

3 ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆ ಫೈನಲ್, ಸುಮಲತಾ ರಾಜಕೀಯ ಭವಿಷ್ಯ ಅತಂತ್ರ

ಬೆಂಗಳೂರು,ಮಾ.23- ತೀವ್ರ ಕಗ್ಗಂಟಾಗಿ ಪರಿಣಮಿಸಿದ್ದ ಜೆಡಿಎಸ್-ಬಿಜೆಪಿ ನಡುವಿನ ಸೀಟು ಹಂಚಿಕೆಗೆ ಕೊನೆಗೂ ತೆರೆಬಿದ್ದಿದ್ದು, ದಳಪತಿಗಳಿಗೆ ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರಗಳು ಅಂತಿಮವಾಗಿದ್ದು, ಸಂಸದೆ ಸುಮಲತಾ ಅಂಬರೀಶ್ ರಾಜಕೀಯ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ. ಕೊನೆ ಕ್ಷಣದವರೆಗೂ ಮಂಡ್ಯ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಪಡೆಯಲು ದೆಹಲಿ ಮಟ್ಟದಲ್ಲಿ ನಡೆಸಿದ ಪ್ರಯತ್ನಗಳು ಕೈಗೂಡಲಿಲ್ಲ.

ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳು ಜೆಡಿಎಸ್ ಪಾಲಾಗಿದ್ದು, ಹಾಲಿ ಸಂಸದೆ ಸುಮಲತಾ ಅಂಬರೀಶ್ ನಡೆ ಈಗ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಕಳೆದ ಬಾರಿಯಂತೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆಯೇ ಇಲ್ಲವೇ ಸಕ್ರಿಯ ರಾಜಕಾರಣದಿಂದ ದೂರ ಇರುತ್ತಾರೆಯೇ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಸುಮಲತಾ ಅಂಬರೀಶ್ ಅವರು ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಷಾ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕರನ್ನು ಭೇಟಿಯಾಗಿ ಮಂಡ್ಯ ಕ್ಷೇತ್ರದಿಂದ ತಮಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ.

ಆದರೆ ಈ ಬೇಡಿಕೆಗೆ ಸೊಪ್ಪು ಹಾಕದ ವರಿಷ್ಠರು ಮೈತ್ರಿ ಧರ್ಮವನ್ನು ಪಾಲನೆ ಮಾಡಬೇಕಾದ ಇಕ್ಕಟ್ಟಿಗೆ ಸಿಲುಕಿರುವ ಕಾರಣ ಮಂಡ್ಯ ಕ್ಷೇತ್ರವು ದಳಪತಿಗಳ ಪಾಲಾಗಿದೆ. ಇದೇ ರೀತಿ ಕೋಲಾರದಿಂದ ಬಿಜೆಪಿ ಅಭ್ಯರ್ಥಿಯಾಗಿ 2ನೇ ಬಾರಿಗೆ ಕಣಕ್ಕಿಳಿಯಲು ತುದಿಗಾಲಲ್ಲಿ ನಿಂತಿದ್ದ ಸಂಸದ ಮುನಿಸ್ವಾಮಿ ರಾಜಕೀಯ ಭವಿಷ್ಯವೂ ಕೂಡ ಅಡಕತ್ತರಿಗೆ ಸಿಲುಕಿದೆ.

ಬೆಂಗಳೂರಿನಲ್ಲಿ ಈ ಬಗ್ಗೆ ಸುಳಿವು ನೀಡಿರುವ ಬಿಜೆಪಿ ಲೋಕಸಭಾ ಚುನಾವಣಾ ಉಸ್ತುವಾರಿ ರಾಧಾಮೋಹನ್ದಾಸ್ ಅಗರವಾಲ್ ಅವರು, ನಾವು ಮೈತ್ರಿಯಂತೆ ಮೂರು ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದೇವೆ. ಈ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರು ಅವರ ಅಭ್ಯರ್ಥಿಗಳಿಗೆ ಪಕ್ಷಬೇಧ ಮರೆತು ಗೆಲುವಿಗೆ ಶ್ರಮಿಸಬೇಕೆಂದು ಸೂಚನೆ ನೀಡಿದರು.

ಅರಮನೆ ಮೈದಾನದ ವೃಕ್ಷ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ರಾಧಾಮೋಹನ್ದಾಸ್, ಜೆಡಿಎಸ್, ಎನ್ಡಿಎ ಮೈತ್ರಿ ಭಾಗವಾಗಿರುವುದರಿಂದ ಹಾಸನ, ಮಂಡ್ಯ, ಕೋಲಾರ ಲೋಕಸಭಾ ಕ್ಷೇತ್ರವನ್ನು ಅವರಿಗೆ ಬಿಟ್ಟುಕೊಟ್ಟಿದ್ದೇವೆ. ಎರಡೂ ಪಕ್ಷದ ಕಾರ್ಯಕರ್ತರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಅಧಿಕೃತ ಟಿಕೆಟ್ ಘೋಷಣೆಯಾದ ಬಳಿಕ ನನ್ನ ನಿರ್ಧಾರ ಎಂಬ ಸುಮಲತಾ ಅಂಬರೀಶ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ರಾಧಾ ಮೋಹನ್ದಾಸ್ ಹೇಳಿಕೆಗೆ ದನಿಗೂಡಿಸಿರುವ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಸುಮಲತಾ ಅಂಬರೀಶ್ ಕೇಂದ್ರ ನಾಯಕರನ್ನು ಭೇಟಿ ಮಾಡಿದ್ದಾರೆ. ಅಲ್ಲಿಯೇ ಅವರ ವಿಚಾರ ತೀರ್ಮಾನವಾಗಲಿದೆ. ಚೆಂಡು ಕೇಂದ್ರದ ಅಂಗಳದಲ್ಲಿದೆ ಎಂದು ಹೇಳುವ ಮೂಲಕ ಸುಮಲತಾ ಅಂಬರೀಶ್ಗೆ ಟಿಕೆಟ್ ಕೈ ತಪ್ಪುವುದು ಗ್ಯಾರಂಟಿ ಎಂಬ ಸುಳಿವು ನೀಡಿದರು.

ಇಂದು ರಾತ್ರಿ ಅಥವಾ ನಾಳೆ ಉಳಿದ ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆಯಾಗಬಹುದು. ಎರಡೂ ಪಕ್ಷದವರು ಹಾಲುಜೇನಿನಂತೆ ಒಟ್ಟಾಗಿ ಕೆಲಸ ಮಾಡುತ್ತೇವೆ. 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ದಾಖಲೆ ಸೃಷ್ಟಿಸುವುದು ನಮ್ಮ ಗುರಿಯಾಗಿದೆ ಎಂದರು. ಕೋಲಾರ, ಹಾಸನ, ಮಂಡ್ಯ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿ. ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಪ್ರಧಾನಿ ಮೋದಿಗಾಗಿ ಮೂರು ಕ್ಷೇತ್ರದ ಕಾರ್ಯಕರ್ತರೂ ಒಗ್ಗಟ್ಟಾಗಿ ಕೆಲಸ ಮಾಡಿ. ನಿಮ್ಮ ವೈಯಕ್ತಿಕ ಮುನಿಸು ಏನೇ ಇದ್ದರೂ ಬಿಟ್ಟು ಪಕ್ಷದ ಪರವಾಗಿ ಕೆಲಸ ಮಾಡಬೇಕೆಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.

ಚರ್ಚೆಗೆ ಗ್ರಾಸವಾಯ್ತು ಸಿಎಂ ಕುರಿತು ಶಾಸಕ ಶ್ರೀನಿವಾಸ್ ‘ರಾಜೀನಾಮೆ’ ಹೇಳಿಕೆ

25 ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಜೆಡಿಎಸ್ ಎಲ್ಲೂ ಹಸ್ತಕ್ಷೇಪ ಮಾಡಿಲ್ಲ. ಜೆಡಿಎಸ್ಗೆ ಮೂರು ಸೀಟು ಬಿಟ್ಟು ಕೊಟ್ಟಿದ್ದೇವೆ. ಕೋಲಾರ, ಮಂಡ್ಯ, ಹಾಸನಗಳಲ್ಲಿ ನಮ್ಮ ಕಾರ್ಯಕರ್ತರು ಪೂರ್ತಿ ಶ್ರದ್ಧೆ, ಮನಃಪೂರ್ವಕವಾಗಿ ಕೆಲಸ ಮಾಡಬೇಕು. ಅಲ್ಲಿ ಯಾರು ಅಭ್ಯರ್ಥಿ ಎಂಬುದು ಮುಖ್ಯ ಅಲ್ಲ. ಮನಃಪೂರ್ವಕವಾಗಿ ಕೆಲಸ ಮಾಡಿ ಎಂದು ಮನವಿ ಮಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಕೇಂದ್ರದಲ್ಲಿ ಯಾವುದೇ ಸರ್ಕಾರ ಆಡಳಿತ ನಡೆಸಿದರೆ 10 ವರ್ಷಗಳ ಬಳಿಕ ಆಡಳಿತ ವಿರೋಧಿ ಅಲೆ ಇರುತ್ತದೆ. ಆದರೆ ಈ ಬಾರಿ ಅಂತಹ ಅಲೆ ಎಲ್ಲಿಯೂ ಕಾಣುತ್ತಿಲ್ಲ ಎಂದು ಹೇಳಿದರು.

ಈಗಾಗಲೇ ಚುನಾವಣೆ ದಿನಾಂಕ ಘೋಷಣೆ ಆಗಿದೆ. ಸಾಕಷ್ಟು ಚುನಾವಣೆ ಜವಬ್ದಾರಿ ತೆಗೆದುಕೊಂಡಿರುವವರಿಗೆ ಮತ್ತೆ ಜವಾಬ್ದಾರಿ ಕೊಡಲಾಗಿದೆ. ಚುನಾವಣೆ ಮತದಾನ ಆಗುವ ಕೊನೆ ಕ್ಷಣದ ವರೆಗೂ ನಿಮಗೆ ಜವಾಬ್ದಾರಿ ಇರಲಿದೆ. ರಾಜ್ಯ, ಜಿಲ್ಲಾ, ಮಂಡಲ ಹಾಗೂ ಬೂತ್ ಮಟ್ಟದಲ್ಲಿ ನಿರ್ವಹಣಾ ಸಮಿತಿ ವಿಸ್ತರಣೆ ಮಾಡಿ ಕಾರ್ಯರೂಪಕ್ಕೆ ತರಬೇಕು ಎಂದು ಕೋರಿದರು.

RELATED ARTICLES

Latest News