ಬೆಂಗಳೂರು,ಮಾ.24-ಅಕ್ರಮ ಗಣಿಗಾರಿಕೆ ಆರೋಪದ ಹಿನ್ನಲೆಯಲ್ಲಿ ಬಿಜೆಪಿಯಿಂದ ಅಮಾನತುಗೊಂಡಿದ್ದ ಕೆಕೆಪಿಆರ್ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಶಾಸಕ ಗಾಲಿ ಜನಾರ್ಧನ ರೆಡ್ಡಿ ಪುನಃ ಮಾತೃ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.ನಾಳೆ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಮತ್ತಿತರ ಪ್ರಮುಖರ ಸಮ್ಮುಖದಲ್ಲಿ ಜನಾರ್ಧನ ರೆಡ್ಡಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.
ರೆಡ್ಡಿ ಸೇರ್ಪಡೆಗೆ ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೇ ಹಸಿರುನಿಶಾನೆ ತೋರಿದ್ದು, ಯಾವುದೇ ಷರತ್ತುಗಳು ಇಲ್ಲದೆ ಪಕ್ಷದ ನಾಯಕತ್ವ ಮತ್ತು ಸಿದ್ದಾಂತಕ್ಕೆ ಬದ್ದವಾಗಿ ಪಕ್ಷ ಸೇರ್ಪಡೆಗೆ ಸಮ್ಮತಿಸಿದ್ದಾರೆ ಎಂದು ಗೊತ್ತಾಗಿದೆ.
ಜನಾರ್ಧನ ರೆಡ್ಡಿ ಪಕ್ಷ ಸೇರ್ಪಡೆಯಿಂದಾಗಿ ಬಳ್ಳಾರಿ, ಕೊಪ್ಪಳ, ರಾಯಚೂರು, ಗದಗ, ಹಾವೇರಿ ಜಿಲ್ಲೆಗಳಲ್ಲಿ ಬಿಜೆಪಿಗೆ ಆನೆ ಬಲ ಬಂದಂತಾಗಿದೆ.ಕಳೆದ ವಾರವಷ್ಟೇ ರೆಡ್ಡಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಪಕ್ಷ ಸೇರ್ಪಡೆಯ ಇಂಗಿತವನ್ನು ವ್ಯಕ್ತಪಡಿಸಿದರು. ನಾನು ಯಾವುದೇ ಷರತ್ತು ಇಲ್ಲದೆ ಬಿಜೆಪಿಗೆ ಬರುತ್ತೇನೆ. ರಾಜ್ಯ ಘಟಕಕ್ಕೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದರು.
ಈ ಹಿನ್ನಲೆಯಲ್ಲಿ ಅಮಿತ್ ಷಾ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಮತ್ತಿತರರ ಜೊತೆ ಮಾತನಾಡಿ, ರೆಡ್ಡಿ ಸೇರ್ಪಡೆಗೆ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸುವಂತೆ ಸೂಚಿಸಿದ್ದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬರಲು ಮುಂದಾಗಿದ್ದ ಜನಾರ್ಧನ ರೆಡ್ಡಿಗೆ ವರಿಷ್ಠರು ಹಸಿರುನಿಶಾನೆ ತೋರಲಿಲ್ಲ. ಅಕ್ರಮ ಗಣಿಗಾರಿಕೆ ಹಿನ್ನಲೆಯಲ್ಲಿ ಕಾಂಗ್ರೆಸ್ ಇದನ್ನೇ ಅಸ್ತ್ರ ಮಾಡಿಕೊಳ್ಳಬಹುದೆಂಬ ಕಾರಣಕ್ಕಾಗಿ ಹಿಂದೇಟು ಹಾಕಿದ್ದರು.
ಆದರೆ ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಜನಾರ್ಧನ ರೆಡ್ಡಿ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದರು. ಒಂದು ವೇಳೆ ಚುನಾವಣಾ ಪ್ರಚಾರದಲ್ಲಿ ರೆಡ್ಡಿ ಪ್ರಕರಣವನ್ನು ಕಾಂಗ್ರೆಸ್ ನಾಯಕರು ಕೆದಕಿದರೆ ತಿರುಗೇಟು ನೀಡಲು ಬಿಜೆಪಿ ಸಜ್ಜಾಗಿದೆ ಎಂದು ತಿಳಿದುಬಂದಿದೆ.ಒಂದು ಕಾಲದಲ್ಲಿ ಕರ್ನಾಟಕದ ರಾಜ್ಯ ರಾಜಕಾರಣದ ದಿಕ್ಕು ದೆಸೆಯನ್ನೆ ತೀರ್ಮಾನಿಸುವ ಹಂತಕ್ಕೆ ಬೆಳೆದಿದ್ದ ಜನಾರ್ಧನ ರೆಡ್ಡಿಯನ್ನು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ 2011ರ ಸೆಪ್ಟೆಂಬರ್ 5ರಂದು ಬಂಧಿಸಿತ್ತು.
ಈ ಪ್ರಕರಣದ ನಂತರ ರೆಡ್ಡಿ ರಾಜಕೀಯ ಭವಿಷ್ಯವೇ ಮುಳುಗಿ ಹೋಗಿತ್ತು. ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ ಬಳಿಕ ಜೈಲಿನಿಂದ ಆಚೆ ಬಂದ ನಂತರ ಸಕ್ರಿಯ ರಾಜಕಾರಣಕ್ಕೆ ಮರಳಿದ್ದರು. ಈಗಲೂ ಕೂಡ ಜನಾರ್ಧನ ರೆಡ್ಡಿ ತವರು ಜಿಲ್ಲೆ ಬಳ್ಳಾರಿ ಪ್ರವೇಶಕ್ಕೆ ನಿರ್ಬಂಧವಿದೆ. ಇದೀಗ ಬಿಜೆಪಿಗೆ ಆಗಮನವಾಗುತ್ತಿರುವುದರಿಂದ ಬಳ್ಳಾರಿಯಲ್ಲಿ ರಾಜಕೀಯ ಏರಿಳಿತಗಳು ಉಂಟಾಗುವ ಸಂಭವವಿದೆ.