ಬೆಂಗಳೂರು, ಅ.1- ನಂದಿನಿ ಹಾಲಿನ ಬೆಲೆಯ ಹೆಚ್ಚಳ ಕುರಿತಂತೆ ಇಂದು ನಡೆ ಯುವ ಸಚಿವ ಸಂಪುಟದಲ್ಲಿ ಚರ್ಚಿಸು ತ್ತಿರುವ ನಡುವೆಯೇ, ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಹೆಚ್ಚಳ ಕುರಿತಂತೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆ ಇದೆ.
ಈಗಾಗಲೇ ಬೆಲೆ ಏರಿಕೆಯಿಂದ ಕಂಗಲಾಗಿರುವ ಜನ ಸಾಮಾನ್ಯರಿಗೆ ಹಾಲಿನ ದರದ ಜೊತೆಯಲ್ಲಿ ಬಸ್ ಪ್ರಯಾಣ ದರ ಏರಿಕೆಯ ಬರೆ ಗಾಯಕ್ಕೆ ಉಪ್ಪುಸುರಿದಂತಾಗಲಿದೆ. ಸಾರಿಗೆ ಸಚಿವ ಬೈರತಿ ಸುರೇಶ್ ಅವರೇ ಬಸ್ ಪ್ರಯಾಣ ದರದ ಹೆಚ್ಚಳವನ್ನು ಖಚಿತ ಪಡಿಸಿರುವುದು ಜನ ಸಾಮಾನ್ಯರನ್ನು ಕಂಗೆಡುವಂತೆ ಮಾಡಿದೆ.
ರಾಜ್ಯದ 4 ಸಾರಿಗೆ ನಿಗಮಗಳಲ್ಲಿ ನಷ್ಟ ಹಾಗೂ ನಿರ್ವಹಣಾ ವೆಚ್ಚವನ್ನು ಅಧ್ಯಯನ ಮಾಡಿ ಯಾವ ಪ್ರಮಾಣದ ಬೆಲೆ ಹೆಚ್ಚಿಸಬೇಕೆಂಬ ಕುರಿತು ವರದಿ ನೀಡಲು ಅತುಲ್ ತಿವಾರಿ ಎಂಬ ಐಎಎಸ್ ಅಧಿಕಾರಿಯ ನೇತೃತ್ವದಲ್ಲಿ 3 ಜನರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿ ಒಂದೆರಡು ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ನೀಡಲಿದೆ. ಅದನ್ನಾಧರಿಸಿ ಮುಂದಿನ ಸಚಿವ ಸಂಪುಟದಲ್ಲಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವುದಾಗಿ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ಜನ ಸಾಮಾನ್ಯರಿಗೆ ಮತ್ತೊಂದು ಆಘಾತ ಖಚಿತವಾಗಿದೆ. ಕೇಂದ್ರ ಸರ್ಕಾರ 5 ಬಾರಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ. ಪ್ರತಿ ಲೀ. ಡೀಸೆಲ್ ಮೇಲೆ 15 ರಿಂದ 16 ರೂ. ನಷ್ಟು ಏರಿಕೆಯಾಗಿದೆ. ಹೀಗಿರುವಾಗ ರಾಜ್ಯ ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟದಲ್ಲಿವೆ. ನಿಗಮಗಳನ್ನು ನಷ್ಟದಿಂದ ಪಾರುಮಾಡಬೇಕಾದರೆ ಬೆಲೆ ಏರಿಕೆ ಅನಿವಾರ್ಯ ಎಂಬ ಸಂದೇಶವನ್ನು ಸಚಿವರು ನೀಡಿದ್ದಾರೆ.
2025ರಲ್ಲಿ ಬಸ್ ಪ್ರಯಾಣ ದರ ಹೆಚ್ಚಳವಾಗಿದೆ. ಅನಂತರ ಪದೇ ಪದೇ ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದರೂ ನಾವು ಪ್ರಯಾಣದರ ಹೆಚ್ಚಿಸಲಿಲ್ಲ. ಎಂಬುದು ಸಾರಿಗೆ ಸಚಿವರ ಸಮರ್ಥನೆ. ಹೀಗಾಗಿ ಪ್ರಸ್ತುತ ಸಂದರ್ಭದಲ್ಲಿ ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದಾಗಿ ಸಚಿವರು ಖಚಿತವಾಗಿ ಹೇಳಿದ್ದಾರೆ.
ಮೂಲಗಳ ಪ್ರಕಾರ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ.15ರಿಂದ 20ರವರೆಗೆ ಹೆಚ್ಚಿಸುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದೆ.ಸಾರಿಗೆ ನಿಗಮಗಳ ಹೆಚ್ಚುತ್ತಿರುವ ವೆಚ್ಚ ಹಾಗೂ ಇತರೆ ಆರ್ಥಿಕ ಒತ್ತಡಗಳ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರ ಪರಿಷ್ಕರಣೆಯ ಪ್ರಸ್ತಾವನೆ ಮುಂದಿಟ್ಟಿವೆ.
ಹಾಲಿನ ದರ ಏರಿಕೆ?:
ರಾಜ್ಯದಲ್ಲಿ ಹಾಲಿನ ದರ ಏರಿಕೆ ಕುರಿತು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಹಾಲು ಉತ್ಪಾದಕರು ಹಾಗೂ ಸಹಕಾರ ಹಾಲು ಒಕ್ಕೂಟಗಳು ದರ ಪರಿಷ್ಕರಣೆಗೆ ಒತ್ತಾಯಿಸುತ್ತಿರುವ ಬೆನ್ನಲ್ಲೇ ಸರ್ಕಾರ ನಿರ್ಧಾರ ಕೈಗೊಳ್ಳುತ್ತಿದೆ.
ಕಳೆದ ವರ್ಷ ಏಪ್ರಿಲ್ 1ರಂದು ಹಾಲು ಮತ್ತು ಮೊಸರಿನ ದರವನ್ನು ಸರಾಸರಿ ಲೀಟರ್‌ಗೆ 4 ರೂ.ನಷ್ಟು ಹೆಚ್ಚಿಸಲಾಗಿತ್ತು. ಆ ಸಂದರ್ಭದಲ್ಲಿ ಹೆಚ್ಚಳದಿಂದ ಬಂದ ಸಂಪೂರ್ಣ ಮೊತ್ತವನ್ನು ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನವಾಗಿ ನೀಡಲು ಸರ್ಕಾರ ನಿರ್ಧರಿಸಿತ್ತು. ಇದೀಗ ಸುಮಾರು ಒಂದೂವರೆ ವರ್ಷಗಳ ಬಳಿಕ ಮತ್ತೆ ಹಾಲಿನ ದರ ಪರಿಷ್ಕರಣೆ ಸನ್ನಿವೇಶ ಎದುರಾಗಿದೆ.
ಹಾಲು ಉತ್ಪಾದನೆಗೆ ತಗಲುವ ವೆಚ್ಚ ಹೆಚ್ಚಾಗಿರುವುದು, ಜಾನುವಾರುಗಳ ಮೇವಿನ ಬೆಲೆ ಏರಿಕೆ ಹಾಗೂ ಒಟ್ಟಾರೆ ಹಣದುಬ್ಬರದಿಂದ ರೈತರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಉಂಟಾಗಿದೆ. ಹೀಗಾಗಿ ಹಾಲಿನ ದರ ಹೆಚ್ಚಿಸುವ ಮೂಲಕ ಉತ್ಪಾದಕರಿಗೆ ಹೆಚ್ಚಿನ ಬೆಂಬಲ ನೀಡಬೇಕು ಎಂದು ಹಾಲು ಉತ್ಪಾದಕರು ಮತ್ತು ಸಹಕಾರ ಹಾಲು ಒಕ್ಕೂಟಗಳು ಸರ್ಕಾರವನ್ನು ಒತ್ತಾಯಿಸಿವೆ. ರಾಜ್ಯದ ವಿವಿಧ ಹಾಲು ಒಕ್ಕೂಟಗಳ ನಿರ್ದೇಶಕರು ಮತ್ತು ಅಧ್ಯಕ್ಷರು ಹಾಗೂ ಕೆಲವು ಶಾಸಕರು ಕೂಡ ಹಾಲಿನ ದರ ಪರಿಷ್ಕರಣೆಗೆ ಒತ್ತಾಯಿಸುತ್ತಿದ್ದಾರೆ. ಕೆಲವು ಹಾಲು ಒಕ್ಕೂಟಗಳು ಲೀಟರ್‌ಗೆ 8ರಿಂದ 12 ರೂ.ವರೆಗೆ ದರ ಹೆಚ್ಚಳಕ್ಕೆ ಬೇಡಿಕೆ ಸಲ್ಲಿಸಿವೆ.
ಮತ್ತೊಂದೆಡೆ, ಕರ್ನಾಟಕ ಹಾಲು ಮಹಾಮಂಡಳಿ ಹಾಗೂ ಪ್ರಾದೇಶಿಕ ಹಾಲು ಒಕ್ಕೂಟಗಳು ಲೀಟರ್‌ಗೆ 2ರಿಂದ 5 ರೂ.ವರೆಗೆ ದರ ಹೆಚ್ಚಳಕ್ಕೆ ಪ್ರಸ್ತಾವನೆ ಮುಂದಿಟ್ಟಿವೆ.ಪಶುಸಂಗೋಪನಾ ಸಚಿವ ಸಿ.ಪಿ. ಪುಟ್ಟರಂಗಶೆಟ್ಟಿ ಮಾತನಾಡಿ, ಹಾಲು ಉತ್ಪಾದಕರು ಮತ್ತು ಹಾಲು ಒಕ್ಕೂಟಗಳಿಂದ ದರ ಹೆಚ್ಚಳಕ್ಕೆ ಬೇಡಿಕೆ ಬಂದಿದೆ. ಪ್ರಸ್ತುತ ಉತ್ಪಾದಕರಿಗೆ ಸರಾಸರಿ ಲೀಟರ್‌ಗೆ 35 ರೂ.ರವರೆಗೆ ದೊರೆಯುತ್ತಿದೆ. ಹೈನುಗಾರಿಕೆಯನ್ನು ಉತ್ತೇಜಿಸಲು ಒಕ್ಕೂಟಗಳ ಮೂಲಕ ಹೆಚ್ಚುವರಿ ನೆರವು ನೀಡಬಹುದೇ ಎಂಬುದನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಹಾಲಿನ ದರ ಹಾಗೂ ಬಸ್ ಪ್ರಯಾಣ ದರ ಎರಡರಲ್ಲೂ ಏರಿಕೆ ಸಂಭವಿಸಿದರೆ ಸಾಮಾನ್ಯ ಕುಟುಂಬಗಳ ದೈನಂದಿನ ಖರ್ಚಿನ ಮೇಲೆ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ.ಹಾಲಿನ ದರ ಹೆಚ್ಚಳದ ಅಂತಿಮ ನಿರ್ಧಾರವನ್ನು ನೆರೆಯ ರಾಜ್ಯಗಳಲ್ಲಿನ ಹಾಲಿನ ದರಗಳನ್ನು ಪರಿಶೀಲಿಸಿದ ಬಳಿಕ ಸಚಿವ ಸಂಪುಟ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಹಿಂದೆ ತಿಳಿಸಿದ್ದರು.
ಈ ನಡುವೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹಾಲು ಉತ್ಪಾದಕರ ಪ್ರೋತ್ಸಾಹಧನವನ್ನು 7ರೂ.ಗೆಹೆಚ್ಚಿಸುವುದಾಗಿ ಭರವಸೆ ನೀಡಿತ್ತು. ಮೊದಲು ಆ ಭರವಸೆಯನ್ನು ಈಡೇರಿಸಬೇಕು. ಅದರ ಬದಲು ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಹಾಕಬಾರದು ಎಂದು ಅವರು ಹೇಳಿದ್ದಾರೆ.
