ಬೆಂಗಳೂರು,ಅ.1- ಖೋಟಾ ನೋಟುಗಳನ್ನು ಮುದ್ರಿಸಿ ನಗರದಲ್ಲಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಚಾಮರಾಜಪೇಟೆ ಠಾಣೆ ಪೊಲೀಸರು ತಮಿಳುನಾಡಿನ ನಾಲ್ವರು ಹಾಗೂ ತೆಲಂಗಾಣದ ಮೂವರು ಸೇರಿದಂತೆ ಒಟ್ಟು ಏಳು ಜನರನ್ನು ಬಂಧಿಸಿದ್ದಾರೆ. ಅವರುಗಳಿಂದ 500 ರೂ. ಮುಖಬೆಲೆಯ 4,337 ನಕಲಿ ನೋಟು, ಒಂದು ಕಾರು, ಎಂಟು ಮೊಬೈಲ್ಗಳನ್ನು ಹಾಗೂ ಕಂಪ್ಯೂಟರ್, ಲ್ಯಾಪ್ಟಾಪ್, ಜೆರಾಕ್್ಸ ಮೆಷಿನ್, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡು ನಿವಾಸಿಗಳಾದ ಮುರುಗನ್ (52), ಗೋವಿಂದನ್ (43), ಬಕ್ರದ್ (38), ಶರವಣನ್ (47) ಮತ್ತು ತೆಲಂಗಾಣದ ಸತ್ಯಂ (47), ಲಕ್ಷ್ಮಣ್ (46) ಮತ್ತು ಕೃಷ್ಣ (43) ಬಂಧಿತ ಆರೋಪಿಗಳು.ಮೈಸೂರು ರಸ್ತೆಯ ಫ್ಲೈ ಓವರ್ ಡೌನ್ರ್ಯಾಂಪ್ ಬಳಿ ಇರುವ ಪೆಟ್ರೋಲ್ ಬಂಕ್ ಒಂದರ ಬಳಿ ಕಾರೊಂದನ್ನು ನಿಲ್ಲಿಸಿಕೊಂಡು ಖೋಟಾ ನೋಟು ಚಲಾವಣೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಚಾಮರಾಜಪೇಟೆ ಪೊಲೀಸರಿಗೆ ಲಭಿಸಿದೆ.
ಆಗ ಪೊಲೀಸರು ದಾಳಿ ಮಾಡಿ ತಮಿಳುನಾಡಿನ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು 500 ರೂ. ಮುಖಬೆಲೆಯ 3,000 ಖೋಟಾನೋಟುಗಳನ್ನು ಮತ್ತು ಕೃತ್ಯಕ್ಕೆ ಬಳಿಸಿರುವ ಕಾರು, ಎರಡು ಮೊಬೈಲ್ಗಳನ್ನು ಜಪ್ತಿ ಮಾಡಿದ್ದಾರೆ.ನಂತರ ಇಬ್ಬರು ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ತೆಲಂಗಾಣ ಮತ್ತು ತಮಿಳುನಾಡಿನ ಒಟ್ಟು ಒಂಬತ್ತು ಮಂದಿ ಸೇರಿಕೊಂಡು ಖೋಟಾನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಕಾರ್ಯಾಚರಣೆ ಮುಂದುವರೆಸಿದ ಪೊಲೀಸರು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಿಂದ ಮೂವರು ವ್ಯಕ್ತಿಗಳನ್ನು ಮತ್ತು ಚೆನ್ನೈನಲ್ಲಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ಒಟ್ಟು ಆರು ಮೊಬೈಲ್ಗಳನ್ನು ಜಪ್ತಿ ಮಾಡಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿರುವ ಆರೋಪಿಯೊಬ್ಬನ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು 500 ರೂ. ಮುಖಬೆಲೆಯ 1,337 ಖೋಟಾನೋಟುಗಳು, ಖೋಟಾನೋಟುಗಳನ್ನು ಮುದ್ರಿಸಲು ಬಳಸುತ್ತಿದ್ದ ಕಂಪ್ಯೂಟರ್, ಲ್ಯಾಪ್ಟಾಪ್, ಲ್ಯಾಮಿನೇಟರ್, ಕಲ್ಲರ್ ಪ್ರಿಂಟರ್, ಕಟ್ಟಿಂಗ್ ಮಿಷನ್, ಹಾಲೋಗ್ರಾಂ, ಜೆರಾಕ್ಸ್ ಮೆಷಿನ್ ಹಾಗೂ ಇತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸುವಲ್ಲಿ ಇನ್್ಸಪೆಕ್ಟರ್ ಕಿರಣ್ ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.
