ಬೆಂಗಳೂರು, ಅ.2- ಆಹಾರ ಮತ್ತು ಔಷಧಗಳ ಗುಣಮಟ್ಟ ಪರೀಕ್ಷೆಯಲ್ಲಿ ಖಾಸಗಿ ಲ್ಯಾಬ್ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರದ ವತಿಯಿಂದಲೇ ಅತ್ಯಾಧುನಿಕ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆಯಾಗುತ್ತಿದೆ.ನಕಲಿ ಹಾಗೂ ಕಳಪೆ ಗುಣಮಟ್ಟದ ಔಷಧಗಳ ಮಾರಾಟದ ವಿರುದ್ಧ ಕ್ರಮ ತೀವ್ರಗೊಳಿಸಿರುವ ಬೆನ್ನಲ್ಲೇ ಈ ಮಹತ್ವದ ಯೋಜನೆ ಜಾರಿಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಮುಂದಾಗಿದೆ.
ಇತ್ತೀಚೆಗೆ ರಾಜ್ಯದಲ್ಲಿ ಪತ್ತೆಯಾದ ನಕಲಿ ಔಷಧ ಪ್ರಕರಣದ ಹಿನ್ನೆಲೆಯಲ್ಲಿ, ಔಷಧ ಮಾದರಿಗಳನ್ನು ಕಾರ್ಖಾನೆಗಳು, ಆಸ್ಪತ್ರೆಗಳು ಹಾಗೂ ಫಾರ್ಮಸಿಗಳಿಂದ ಸಂಗ್ರಹಿಸಿ ಯಾದೃಚ್ಛಿಕವಾಗಿ ಗುಣಮಟ್ಟ ಪರೀಕ್ಷೆ ನಡೆಸಲು ಹೈಟೆಕ್ ಲ್ಯಾಬ್ ಸ್ಥಾಪಿಸುವ ಅಥವಾ ಅಸ್ತಿತ್ವದಲ್ಲಿರುವ ಅತ್ಯಾಧುನಿಕ ಲ್ಯಾಬ್ನೊಂದಿಗೆ ಸಹಭಾಗಿತ್ವ ಸಾಧಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಅನುಮಾನಾಸ್ಪದ ಆಹಾರ ಅಥವಾ ಔಷಧ ಕಂಡುಬಂದರೆ ವಿಳಂಬವಿಲ್ಲದೆ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸುವುದು ಉದ್ದೇಶವಾಗಿದೆ. ಔಷಧದ ಗುಣಮಟ್ಟದಲ್ಲಿ ಸಣ್ಣ ಪ್ರಮಾಣದ ವ್ಯತ್ಯಾಸ ಕಂಡುಬಂದರೂ ಅಧಿಕಾರಿಗಳು ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸುವ ವ್ಯವಸ್ಥೆ ರೂಪಿಸುವ ಚಿಂತನೆಯಿದೆ.ದೊಡ್ಡ ಔಷಧ ಕಂಪನಿಗಳ ಉತ್ಪನ್ನಗಳನ್ನೂ ಇದರಿಂದ ಹೊರತಾಗಿಸದೆ, ಫಾರ್ಮಸಿಗಳು ಹಾಗೂ ಆಸ್ಪತ್ರೆಗಳಿಂದ ನೇರವಾಗಿ ಮಾದರಿ ಸಂಗ್ರಹಿಸಿ ಪರೀಕ್ಷಿಸುವ ಸಾಧ್ಯತೆ ಇದೆ.
ಯಾವುದೇ ಕಂಪನಿಯ ಉತ್ಪನ್ನದ ಗುಣಮಟ್ಟದ ಬಗ್ಗೆ ಅನುಮಾನ ಬಂದಾಗ ಸ್ವತಂತ್ರವಾಗಿ ಪರೀಕ್ಷಿಸುವ ಸಾಮರ್ಥ್ಯವನ್ನು ಹೊಂದಬೇಕು ಎಂಬ ಉದ್ದೇಶ ಇದಾಗಿದೆ.ಖಾಸಗಿ ಲ್ಯಾಬ್ ವರದಿ ಮೇಲಿನ ಅವಲಂಬನೆ ಕಡಿಮೆ:ಕೆಲವು ಖಾಸಗಿ ಲ್ಯಾಬ್ಗಳು ಪ್ರತಿಷ್ಠಿತ ಕಂಪನಿಗಳ ಪರವಾಗಿ ವರದಿ ನೀಡುತ್ತಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಸರ್ಕಾರದ ಸ್ವಂತ ಪ್ರಯೋಗಾಲಯದ ಅಗತ್ಯತೆ ಬಗ್ಗೆ ಚರ್ಚೆ ನಡೆದಿದೆ. ಖಾಸಗಿ ಲ್ಯಾಬ್ಗಳ ವರದಿಯನ್ನೇ ಸಂಪೂರ್ಣವಾಗಿ ಅವಲಂಬಿಸುವ ಬದಲು ಸರ್ಕಾರದ ಮಟ್ಟದಲ್ಲೇ ಮಾದರಿ ಪರೀಕ್ಷೆ ನಡೆಸಿದರೆ ನಿಯಂತ್ರಣ ವ್ಯವಸ್ಥೆ ಮತ್ತಷ್ಟು ಬಲಪಡಿಸಬಹುದಾಗಿದೆ.
ವಿಶೇಷವಾಗಿ ಔಷಧಗಳ ಗುಣಮಟ್ಟದ ಕುರಿತ ಪ್ರಕರಣಗಳು ನ್ಯಾಯಾಲಯದವರೆಗೂ ಹೋದಾಗ ಪರೀಕ್ಷಾ ವರದಿಯ ವೈಜ್ಞಾನಿಕ ವಿಶ್ವಾಸಾರ್ಹತೆ ಮತ್ತು ಕಾನೂನುಬದ್ಧ ಮಾನ್ಯತೆ ಮಹತ್ವ ಪಡೆಯುತ್ತದೆ. ಹೀಗಾಗಿ ನ್ಯಾಯಾಲಯದಲ್ಲೂ ಪರಿಗಣಿಸಬಹುದಾದ ಗುಣಮಟ್ಟದ ಪರೀಕ್ಷಾ ವರದಿಗಳನ್ನು ಸಿದ್ಧಪಡಿಸುವ ಸಾಮರ್ಥ್ಯ ಹೊಂದಿರುವ ಪ್ರಯೋಗಾಲಯ ನಿರ್ಮಿಸುವ ಉದ್ದೇಶವಿದೆ.
ನಕಲಿ ಔಷಧ ಪ್ರಕರಣದ ಬೆನ್ನಲ್ಲೇ ವೇಗ; ಬಿಡದಿಯಲ್ಲಿ ನಡೆದ ದಾಳಿಯಲ್ಲಿ 5 ಕೋಟಿಗೂ ಅಧಿಕ ಮೌಲ್ಯದ ನಕಲಿ ಔಷಧಗಳು ಪತ್ತೆಯಾದ ಪ್ರಕರಣದ ಬಳಿಕ ಸರ್ಕಾರ ಕ್ರಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ. ಈ ಪ್ರಕರಣದ ತನಿಖೆಗೆ ರಚಿಸಲಾಗಿದ್ದು, ಔಷಧ ನಿಯಂತ್ರಣ ಇಲಾಖೆ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳೂ ತನಿಖೆಯಲ್ಲಿ ಭಾಗಿಯಾಗಿದ್ದಾರೆ.
ಇದೇ ಪ್ರಕರಣದ ಮುಂದುವರಿದ ಕ್ರಮವಾಗಿ ರಾಜ್ಯದಲ್ಲಿ 16 ಔಷಧ ಪರವಾನಗಿಗಳನ್ನು ರದ್ದುಗೊಳಿಸಿ, ಎಂಟು ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.ಆಹಾರ ಪರೀಕ್ಷೆಯಲ್ಲೂ ರಾಜ್ಯದಲ್ಲಿ ಮಾನ್ಯತೆ ಪಡೆದ ಪ್ರಯೋಗಾಲಯಗಳ ವ್ಯವಸ್ಥೆ ಈಗಾಗಲೇ ಇದೆ. ಪ್ರಕಾರ ಆಹಾರ ಮಾದರಿಗಳ ವಿಶ್ಲೇಷಣೆಗೆ ಮಾನ್ಯತೆ ಪಡೆದ ಪ್ರಯೋಗಾಲಯಗಳನ್ನು ಗುರುತಿಸಲಾಗುತ್ತದೆ.ಹೊಸ ಹೈಟೆಕ್ ಲ್ಯಾಬ್ ಕಾರ್ಯರೂಪಕ್ಕೆ ಬಂದರೆ ಆಹಾರ ಮತ್ತು ಔಷಧಗಳ ಗುಣಮಟ್ಟದ ಮೇಲೆ ಸರ್ಕಾರದ ನೇರ ನಿಗಾ ಹೆಚ್ಚಲಿದ್ದು, ಕಳಪೆ ಅಥವಾ ನಕಲಿ ಉತ್ಪನ್ನಗಳ ವಿರುದ್ಧದ ಕ್ರಮಕ್ಕೆ ಮತ್ತಷ್ಟು ವೈಜ್ಞಾನಿಕ ಬಲ ಸಿಗುವ ನಿರೀಕ್ಷೆಯಿದೆ.
