Homeರಾಜ್ಯ"ತಿಂಗಳಿಗೆ 1 ಲಕ್ಷಕ್ಕಿಂತ ಕಡಿಮೆ ಆದಾಯವಿದ್ದರೆ ಬೆಂಗಳೂರಿಗೆ ಬರಬೇಡಿ" : ಭಾರೀ ಚರ್ಚೆಗೆ ಕಾರಣವಾಯ್ತು ಟೆಕ್ಕಿ...

“ತಿಂಗಳಿಗೆ 1 ಲಕ್ಷಕ್ಕಿಂತ ಕಡಿಮೆ ಆದಾಯವಿದ್ದರೆ ಬೆಂಗಳೂರಿಗೆ ಬರಬೇಡಿ” : ಭಾರೀ ಚರ್ಚೆಗೆ ಕಾರಣವಾಯ್ತು ಟೆಕ್ಕಿ ಹೇಳಿಕೆ

ಬೆಂಗಳೂರು, ಅ.2: ಭಾರತದ ಐಟಿ ರಾಜಧಾನಿ ಹಾಗೂ ಉದ್ಯೋಗಾಕಾಂಕ್ಷಿಗಳ ನೆಚ್ಚಿನ ತಾಣವಾಗಿರುವ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜೀವನ ವೆಚ್ಚ ಹಾಗೂ ದುಬಾರಿ ದಿನಚರಿ ಕುರಿತು ಚರ್ಚೆ ನಡೆದಿದೆ. ಐಟಿ ಉದ್ಯೋಗಿ ಶಿವಾಂಕ್‌ ಗೋಯೆಲ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಬೆಂಗಳೂರಿನ ಜೀವನಶೈಲಿ ಹಾಗೂ ವೆಚ್ಚಗಳ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ನಗರದಲ್ಲಿ ಹೊರಗೆ ಊಟ ಮಾಡುವುದು, ಕೆಫೆಗಳಿಗೆ ಭೇಟಿ ನೀಡುವುದು, ಕಾರ್ಯಕ್ರಮಗಳಿಗೆ ಹಾಜರಾಗುವುದು ಮತ್ತು ವಿವಿಧ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಸೇರಿದಂತೆ ಹಲವು ಚಟುವಟಿಕೆಗಳು ನಿರಂತರ ಖರ್ಚಿಗೆ ಕಾರಣವಾಗುತ್ತವೆ ಎಂದು ಅವರು ಹೇಳಿದ್ದಾರೆ.

‘ನಿಮ್ಮ ಮಾಸಿಕ ಆದಾಯ ಅಥವಾ ಸಂಬಳ ₹1 ಲಕ್ಷಕ್ಕಿಂತ ಕಡಿಮೆಯಿದ್ದರೆ ಬೆಂಗಳೂರಿಗೆ ಸ್ಥಳಾಂತರಗೊಳ್ಳುವುದನ್ನು ಮರುಪರಿಶೀಲಿಸಿ’ ಎಂಬ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪ್ರಾಡಕ್ಟ್‌ ಮ್ಯಾನೇಜರ್‌ ಆಗಿರುವ ಶಿವಾಂಕ್‌ ಗೋಯೆಲ್‌ ಅವರು ಬೆಂಗಳೂರಿನ ಅತಿಯಾದ ವಾಣಿಜ್ಯೀಕರಣ ಮತ್ತು ದೈನಂದಿನ ವೆಚ್ಚಗಳ ಕುರಿತು ಕಳವಳ ವ್ಯಕ್ತಪಡಿಸಿದ್ದು, ನಗರದ ಜೀವನ ವೆಚ್ಚವು ಉದ್ಯೋಗಿಗಳ ಖರ್ಚು ಮಾಡುವ ಸಾಮರ್ಥ್ಯವನ್ನು ಗಮನಾರ್ಹವಾಗಿ ಕುಗ್ಗಿಸುತ್ತಿದೆ ಎಂದು ಹೇಳಿದ್ದಾರೆ.

ನಗರವು ಎಷ್ಟರಮಟ್ಟಿಗೆ ವಾಣಿಜ್ಯೀಕರಣಗೊಂಡಿದೆ ಎಂದರೆ, ವರ್ಷಕ್ಕೆ ₹12 ಲಕ್ಷ (12 ಎಲ್‌ಪಿಎ) ಗಳಿಸುವ ವ್ಯಕ್ತಿಯ ಜೀವನಮಟ್ಟ ಅಥವಾ ಖರ್ಚು ಮಾಡುವ ಸಾಮರ್ಥ್ಯ ಕೇವಲ ₹4 ಲಕ್ಷ (4 ಎಲ್‌ಪಿಎ) ಗಳಿಸುವ ವ್ಯಕ್ತಿಯಂತೆ ಭಾಸವಾಗುತ್ತದೆ. ಇಲ್ಲಿ ಮನೆಯಿಂದ ಹೊರಗೆ ಹೆಜ್ಜೆ ಇಟ್ಟರೆ ಸಾಕು ದೊಡ್ಡ ಮೊತ್ತದ ಬಿಲ್‌ ಕೈಗೆ ಬರುತ್ತದೆ ಎಂದು ಅವರು ಹೇಳಿದ್ದಾರೆ.

ನಗರದಲ್ಲಿ ಮೋಜು-ಮಂದಾರ ಎಂದರೆ ಅತಿಯಾದ ಖರ್ಚು ಮಾಡುವುದು ಮತ್ತು ಕೆಫೆ ಸಂಸ್ಕೃತಿಯ ಭಾಗವಾಗುವುದಾಗಿದೆ. ಪ್ರತಿಯೊಂದು ಕಾರ್ಯಕ್ರಮಕ್ಕೂ ಟಿಕೆಟ್‌ ಖರೀದಿಸಬೇಕಿದ್ದು, ಪ್ರತಿಯೊಂದು ಹವ್ಯಾಸವೂ ಚಂದಾದಾರಿಕೆಯ ರೂಪದಲ್ಲಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ವಾಸಿಸುವ ಜನರು ಎದುರಿಸುವ ಪ್ರಮುಖ ಎರಡು ಸಮಸ್ಯೆಗಳೆಂದರೆ ವಸತಿ ಬಾಡಿಗೆ ಮತ್ತು ಸಂಚಾರ ದಟ್ಟಣೆ. ನಗರದಲ್ಲಿ ಮನೆ ಹುಡುಕುವಾಗ ಯಾವುದೇ ಪ್ರಶ್ನೆಯಿಲ್ಲದೆ ₹2 ಲಕ್ಷದವರೆಗೆ ಅಡ್ವಾನ್ಸ್‌ ಅಥವಾ ಸೆಕ್ಯುರಿಟಿ ಡೆಪಾಸಿಟ್‌ ಪಾವತಿಸುವುದು ಸಾಮಾನ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಸಂಚಾರ ದಟ್ಟಣೆಯಿಂದಾಗಿ ಕೆಲವೇ ಕಿಲೋಮೀಟರ್‌ ಪ್ರಯಾಣಕ್ಕೂ ಭಾರಿ ಮೊತ್ತ ತೆರಬೇಕಾಗಿದೆ. ಒಂದು ಗಂಟೆ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವ ಕೇವಲ 5 ಕಿ.ಮೀ. ಕ್ಯಾಬ್‌ ಪ್ರಯಾಣಕ್ಕೆ ₹600 ನೀಡುವುದು ಇಲ್ಲಿ ಸಾಮಾನ್ಯವಾಗಿದೆ ಎಂದು ಅವರು ಗಮನಸೆಳೆದಿದ್ದಾರೆ.

ನಗರದಲ್ಲಿ ಕೈಗೆಟುಕುವ ಮನರಂಜನೆಗಾಗಿ ಕಬ್ಬನ್‌ ಪಾರ್ಕ್‌ನಂತಹ ಉಚಿತ ಸಾರ್ವಜನಿಕ ಸ್ಥಳಗಳಿಗೆ ಹೋಗುವುದೂ ಸುಲಭವಲ್ಲ. ಕಬ್ಬನ್‌ ಪಾರ್ಕ್‌ಗೆ ಹೋಗಲು ಒಂದು ದಿನ ಮುಂಚಿತವಾಗಿ ಯೋಜನೆ ರೂಪಿಸಬೇಕಿದ್ದು, ದಿನದ ನಾಲ್ಕು ಗಂಟೆಗಳು ಪ್ರಯಾಣದಲ್ಲೇ ನಷ್ಟವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಿಶ್ರ ಪ್ರತಿಕ್ರಿಯೆ

ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಹಾಗೂ ಇತರ ಪ್ರಮುಖ ನಗರಗಳ ನಿವಾಸಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ‘ನಾನು ಬೆಂಗಳೂರಿಗೆ 10 ದಿನಗಳ ಕಾಲ ಹೋದರೆ ಸಾಕು, ನನ್ನ ಇಡೀ ತಿಂಗಳ ಸಂಬಳ ಖರ್ಚಾಗುತ್ತದೆ’ ಎಂದು ಒಬ್ಬ ಬಳಕೆದಾರರು ಕಾಮೆಂಟ್‌ ಮಾಡಿದ್ದಾರೆ.

ಈ ಸಮಸ್ಯೆ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಲ್ಲ. ದೇಶದ ಬಹುತೇಕ ಮೆಟ್ರೊ ನಗರಗಳಲ್ಲಿ ಇಂದು ಇದೇ ಪರಿಸ್ಥಿತಿ ಇದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಇನ್ನು ಕೆಲವರು ಬೆಂಗಳೂರನ್ನು ಮುಂಬೈಗೆ ಹೋಲಿಸಿದ್ದು, ಮುಂಬೈನಲ್ಲಿ ನೆಮ್ಮದಿಯಿಂದ ವಾಸಿಸಲು ತಿಂಗಳಿಗೆ ಕನಿಷ್ಠ ₹3 ಲಕ್ಷ ಸಂಬಳ ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಿದ್ದರೂ, ಅದೇ ಪ್ರಮಾಣದಲ್ಲಿ ಮೂಲಸೌಕರ್ಯ ಕೊರತೆ ಹಾಗೂ ಹೆಚ್ಚುತ್ತಿರುವ ದೈನಂದಿನ ವೆಚ್ಚಗಳು ವೃತ್ತಿಪರರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿರುವ ಕುರಿತು ಈ ಚರ್ಚೆ ಗಮನ ಸೆಳೆದಿದೆ.

RELATED ARTICLES
spot_img

Latest News