ನವದೆಹಲಿ,ಅ.2- ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಮತ್ತು ಮತದಾರರ ಸಾಮೂಹಿಕ ಅಳಿಸುವಿಕೆ ಆರೋಪವನ್ನು ಮುನ್ನೆಲೆಗೆ ತಂದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ಆಮ್ ಆದಿ ಪಾರ್ಟಿ (ಎಎಪಿ), ವಿವಿಧ ವಿದ್ಯಾರ್ಥಿ ಸಂಘಟನೆಗಳು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳು ಹಮಿಕೊಂಡಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ನವದೆಹಲಿ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಭದ್ರತೆಯನ್ನು ತೀವ್ರಗೊಳಿಸಲಾಗಿದೆ.ಜಂತರ್ ಮಂತರ್‌ಗೆ ಪ್ರತಿಭಟನೆಗಾಗಿ ಆಗಮಿಸಿದ ಎಎಪಿ ಪ್ರಮುಖ ನಾಯಕರಾದ ಸಂಜೀವ್ ಝಾ ಮತ್ತು ಸೌರಭ್ ಭಾರದ್ವಾಜ್ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು.ಇವರೊಂದಿಗೆ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.
ಬಂಧನದ ವೇಳೆ ಮಾತನಾಡಿದ ಸೌರಭ್ ಭಾರದ್ವಾಜ್, ಆರು ದಿನಗಳ ಹಿಂದೆಯೇ ಶಾಂತಿಯುತ ಪ್ರತಿಭಟನೆಗೆ ಎಎಪಿ ಅಧಿಕೃತ ಅನುಮತಿ ಕೋರಿತ್ತು. ಅನುಮತಿ ನಿರಾಕರಿಸಲಾಗಿದ್ದರೂ, ಚುನಾವಣಾ ಆಯೋಗದ ಉತ್ತರದಾಯಿತ್ವವನ್ನು ಪ್ರಶ್ನಿಸಿ ಯುವಕರು, ಮಹಿಳೆಯರು ಮತ್ತು ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಧ್ವನಿ ಎತ್ತಲಿದ್ದಾರೆ, ಎಂದು ಹೇಳಿದರು.
ಇಂಟರ್ನೆಟ್ ನಿಷೇಧ:
ಅನುಮತಿಯಿಲ್ಲದೆ ಪ್ರತಿಭಟನೆ ನಡೆಸುವುದನ್ನು ತಡೆಯಲು ದೆಹಲಿ ಪೊಲೀಸರು ಜಂತರ್ ಮಂತರ್ ಸುತ್ತಮುತ್ತ 8 ರಿಂದ 9 ವಲಯಗಳನ್ನು ರಚಿಸಿದ್ದು, ಪ್ರತಿ ವಲಯಕ್ಕೂ ಒಬ್ಬ ಹಿರಿಯ ಐಪಿಎಸ್ ಅಧಿಕಾರಿಯನ್ನು ಉಸ್ತುವಾರಿಯಾಗಿ ನಿಯೋಜಿಸಿದ್ದಾರೆ.ನವದೆಹಲಿ ಜಿಲ್ಲೆಯಾದ್ಯಂತ ಬಿಎನ್‌ಎಸ್‌ಎಸ್ ಸೆಕ್ಷನ್ 163ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಡ್ರೋನ್ ಕ್ಯಾಮೆರಾಗಳ ಮೂಲಕ ಜಂತರ್ ಮಂತರ್, ಜೈ ಸಿಂಗ್ ರಸ್ತೆ, ಅಶೋಕ್ ರಸ್ತೆ, ಫಿರೋಜ್ ಷಾ ರಸ್ತೆ ಹಾಗೂ ಜನಪಥ್ ರಸ್ತೆಗಳಲ್ಲಿ ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದ್ದು, ಸಾಮಾಜಿಕ ಮಾಧ್ಯಮಗಳ ಮೇಲೆಯೂ ಪೊಲೀಸರು ತೀವ್ರ ಕಣ್ಣಿಟ್ಟಿದ್ದಾರೆ.
ಮೆಟ್ರೋ ಬಂದ್ :
ಪ್ರತಿಭಟನೆಯ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ವಾಹನ ಸಂಚಾರ ಸಂಪೂರ್ಣ ಜಟಿಲಗೊಂಡಿದೆ. ಮಂಡಿ ಹೌಸ್ ಸೇರಿದಂತೆ ನವದೆಹಲಿ ಭಾಗದ ಸುಮಾರು 11 ಮೆಟ್ರೋ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಮುಂದಿನ ಆದೇಶದವರೆಗೆ ಮುಚ್ಚಲಾಗಿದೆ.
ಕನ್ನಾಟ್ ಪ್ಲೇಸ್‌ನಿಂದ ಪಟೇಲ್ ಚೌಕ್, ಟಾಲ್‌ಸ್ಟಾಯ್ ಮಾರ್ಗ ಮತ್ತು ಜಂತರ್ ಮಂತರ್ ರಸ್ತೆಗಳಲ್ಲಿ ಸಂಚಾರವನ್ನು ನಿಯಂತ್ರಿಸಿ, ಪರ್ಯಾಯ ಮಾರ್ಗಗಳಿಗೆ ತಿರುಗಿಸಲಾಗಿದೆ. ಸಂಚಾರ ವ್ಯತ್ಯಯವಾಗುವ ಹಿನ್ನೆಲೆಯಲ್ಲಿ ಈ ಮಾರ್ಗಗಳನ್ನು ಬಳಸದಂತೆ ಸಂಚಾರ ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ರಾಜಕೀಯ ನಾಯಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಜಂಟಿಯಾಗಿ ಕರೆ ನೀಡಿದ್ದ ಈ ಪ್ರತಿಭಟನೆಯು ನವದೆಹಲಿಯಲ್ಲಿ ಹೈಡ್ರಾಮಾ ಮತ್ತು ಕಟ್ಟುನಿಟ್ಟಿನ ಪೊಲೀಸ್ ಕಾರ್ಯಾಚರಣೆಗೆ ಕಾರಣವಾಗಿದೆ.
