ಬೆಂಗಳೂರು, ಅ.2- ನಗರದಲ್ಲಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ವಾಹನ ಸಂಚಾರ ಮತ್ತು ಜನತೆಗೆ ಅಡ್ಡಿಪಡಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಪೊಲೀಸರು ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಆಗ್ರಹಿಸಿದರು.
ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯ ಆರಂಭದಲ್ಲಿ ವ್ಯಾಪಕ ಅಕ್ರಮ ಎಸಗಿದ ರಾಜ್ಯ ಕಾಂಗ್ರೆಸ್, ಈಗ ಅದರ ವಿರುದ್ಧ ಮಾತನಾಡುತ್ತಿರುವುದು ನಾಚಿಕೆಗೇಡು. ಸಂಪುಟ ಸಭೆಯನ್ನೇ ಅಲಕ್ಷಿಸಿ ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸದಸ್ಯರು ರಸ್ತೆಯಲ್ಲಿ ಕೂತು ನಡೆಸಿದ ಪ್ರಹಸನ ಹಾಸ್ಯಾಸ್ಪದ ಎಂದು ಅವರು ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪ್ರತಿಭಟನೆ ಮಾಡಲು ಸ್ವಾತಂತ್ರ್ಯ ಉದ್ಯಾನವನಕ್ಕೆ ಹೋಗಬೇಕು. ಕಾಂಗ್ರೆಸ್ ನವರಿಗೆ ಪ್ರತಿಭಟನೆ ಮಾಡಲು ಪೊಲೀಸರು ಹೇಗೆ ಅವಕಾಶ ಮಾಡಿಕೊಟ್ಟರು ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನವರು ನಡೆಸಿದ ಧರಣಿ ಬಗ್ಗೆ ಪೊಲೀಸರು ಎಫ್.ಐ.ಆರ್. ದಾಖಲಿಸಬೇಕು ಎಂದ ಅವರು, ಬಿಡದಿ ಉಪನಗರ ಯೋಜನೆ, ಕೆಪಿಎಸ್‌ಸಿ ಅಕ್ರಮ ನೇಮಕಾತಿ ಹಗರಣ ಮೊದಲಾದ ವಿಚಾರಗಳ ವಿರುದ್ಧ ಹೋರಾಟ ತೀವ್ರವಾಗಿರುವುದರಿಂದ ಆ ವಿಷಯಗಳನ್ನು ಡೈವರ್ಟ್ ಮಾಡಲು ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ವೋಟ್ ಚೋರಿ ಎಂದು ಕಾಂಗ್ರೆಸ್ ಅನಗತ್ಯವಾಗಿ ರಂಪ ಮಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದ ಹಾಗಿದೆ. ಇವರು ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು, ಮನೆಗಳು ಸೇರಿ ನಾನಾ ಕಡೆ ಜನರನ್ನು ಗುಂಪು ಗುಂಪಾಗಿ ಸೇರಿಸಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿಸಿದ್ದನ್ನು ನೋಡಿದ್ದೇವೆ. ಅದರ ವಿರುದ್ಧ ಜೆಡಿಎಸ್ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದರು.
ಅನಂತರ ಎನ್‌ಡಿಎ ಮೈತ್ರಿಕೂಟದ ನಾಯಕರೆಲ್ಲರೂ ಹೋಗಿ ಆಯೋಗಕ್ಕೆ ದೂರು ನೀಡಿದ್ದೇವೆ. ಆದರೂ ಅಕ್ರಮ ಎಸಗಿದ ಕಾಂಗ್ರೆಸ್ ಪಕ್ಷದವರೇ ಅಕ್ರಮ, ಅಕ್ರಮ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ನಾವು ದೂರು ಕೊಟ್ಟಾಗ ಮೌನಕ್ಕೆ ಶರಣಾಗಿದ್ದ ಸರ್ಕಾರ, ಈಗ ಮಾತನಾಡುತ್ತಿದೆ. ದೆಹಲಿ ನಾಯಕರು ಬಿಸಿ ಮುಟ್ಟಿಸಿದ ಮೇಲೆ ಇವರು ಈ ಪ್ರಹಸನ ಆರಂಭ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ನಾನು ನೈಸ್ ಯೋಜನೆ ಬಗ್ಗೆ ಇತ್ತೀಚೆಗೆ ಮಾಧ್ಯಮಗೋಷ್ಠಿ ನಡೆಸಿ, ನೈಸ್ ಕಂಪನಿ ಜತೆ ಶಾಮೀಲಾಗಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬ ಸದಸ್ಯರು ಯೋಜನೆಯ ಭೂಮಿ ಲಪಟಾಯಿಸುವ ಬಗ್ಗೆ ದಾಖಲೆಗಳ ಸಮೇತ ಬಹಿರಂಗ ಮಾಡಿದ್ದೆ. ಆ ವಿಷಯ ರಾಜಕೀಯವಾಗಿ, ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಒಳಗಾಗುತ್ತಿರುವ ಸಂದರ್ಭದಲ್ಲಿ ಜನರ ಗಮನ ಬೇರೆಡೆಗೆ ಸೆಳೆಯಲು ಈ ಎಸ್‌ಐಆರ್ ವಿಷಯ ಮುನ್ನೆಲೆಗೆ ತಂದಿದ್ದಾರೆ ಮುಖ್ಯಮಂತ್ರಿ ಅವರು ಆರೋಪಿಸಿದರು.
