ಬೆಂಗಳೂರು,ಅ.2- ಮತದಾರರ ಪಟ್ಟಿಯಿಂದ ಕೆಲವೊಂದು ಸಮುದಾಯದವರ ಹೆಸರುಗಳನ್ನು ಅಳಿಸಲಾಗುತ್ತಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಭಾರತದ ಚುನಾವಣಾ ಆಯೋಗವು ನಮೂನೆ 7ರ ನೈಜತೆಯ ಪರಿಶೀಲನೆಗೆ ಮುಂದಾಗಿದೆ.
ದೂರು ಸಲ್ಲಿಸಿ ಸುಳ್ಳು ಘೋಷಣೆ ಮಾಡಿದ ಅರ್ಜಿದಾರರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬು ಕುಮಾರ್ ಅವರು ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾ ಉಪ ಚುನಾವಣಾ ಆಯುಕ್ತರು, ಹೆಚ್ಚುವರಿ ಚುನಾವಣಾಧಿಕಾರಿಗಳು, 224 ವಿಧಾನಸಭಾ ಕ್ಷೇತ್ರಗಳ ಚುನಾವಣಾ ನೋಂದಣಾಧಿಕಾರಿಗಳು, ಜಿಬಿಎ ವ್ಯಾಪ್ತಿಯ ಮುಖ್ಯ ಚುನಾವಣಾ ಆಯುಕ್ತರು, ನಗರ ಪಾಲಿಕೆಗಳ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.
ನಮೂನೆ 7 ಅನ್ನು ಸಲ್ಲಿಕೆ ಮಾಡಿ
ತಪ್ಪು ಮಾಹಿತಿ ನೀಡಿರುವವರ ವಿರುದ್ಧ 1950ರ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಬೇಕು.
ಇದಕ್ಕೂ ಮುನ್ನ 1960ರ ಮತದಾರರ ನೋಂದಣಿ ನಿಯಮಗಳ ನಿಯಮ 20ರಡಿಯಲ್ಲಿ ವಿಚಾರಣೆ ನಡೆಸಬೇಕು ಎಂದು ಸೂಚಿಸಿದ್ದಾರೆ.ನಮೂನೆ 7 ರಡಿ ಬೃಹತ್ ಪ್ರಮಾಣದಲ್ಲಿ ಅರ್ಜಿಗಳನ್ನು ಇಆರ್‌ಓಗಳ ಮುಂದೆ ಸಲ್ಲಿಸಲಾಗಿದೆ ಎಂಬ ದೂರುಗಳು ತಮ ಕಚೇರಿಯ ಗಮನಕ್ಕೆ ಬಂದಿದೆ. ಅಲ್ಲದೆ, ಅವು ನೈಜತೆಯಿಂದ ಕೂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಇದರಿಂದ ಸಂಬಂಧಪಟ್ಟ ಇಆರ್‌ಒಗಳು ಸಲ್ಲಿಕೆಯಾಗಿರುವ ನಮೂನೆಗಳ ನೈಜತೆಯನ್ನು ಪರಿಶೀಲಿಸಬೇಕು ಎಂದು ಅವರು ಹೇಳಿದ್ದಾರೆ.
ಮತದಾರರ ಸಮಗ್ರ ಪರಿಷ್ಕರಣೆ ಸಂದರ್ಭದಲ್ಲಿ ತಪ್ಪು ಮಾಹಿತಿ ನೀಡಿ ಆಕ್ಷೇಪಣೆ ಸಲ್ಲಿಸಿರುವ ಹಾಗೂ ಮತದಾನದ ಹಕ್ಕಿಗಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ತಪ್ಪು ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲು ಅವರು ನಿರ್ದೇಶನ ನೀಡಿದ್ದಾರೆ.ಹೀಗಾಗಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಮೂನೆ 6, ನಮೂನೆ 6 ಎ, ನಮೂನೆ 7 ಹಾಗೂ ನಮೂನೆ 8ರ ಸಲ್ಲಿಕೆಗೆ ಸಂಬಂಧಿಸಿದಂತೆ ನೈಜತೆ ಪರಿಶೀಲನೆ ಮಾಡಲು ಸೂಚಿಸಿದ್ದಾರೆ.
ಇದರ ಬೆನ್ನಲ್ಲೇ ಸಂಬಂಧಪಡದವರು ನಮೂನೆ 7 ಅನ್ನು ಸಲ್ಲಿಸಿ ಬಿಎಲ್‌ಓಗಳಿಗೆ ತಪ್ಪು ಮಾಹಿತಿ ನೀಡಿದ ಆರೋಪವಿರುವ ಹಾಗೂ ಸಾಮೂಹಿಕವಾಗಿ ನಮೂನೆಗಳನ್ನು ಸಲ್ಲಿಸಿದ ಆರೋಪಕ್ಕೆ ಒಳಗಾಗಿರುವವರ ವಿರುದ್ಧ ರಾಜ್ಯದ ಕೆಲವೆಡೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ.
ನಿನ್ನೆ ಕಾಂಗ್ರೆಸ್ ಪಕ್ಷದ ನಾಯಕರು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ಮತದಾರರ ಪಟ್ಟಿಯಿಂದ ಅರ್ಹ ಮತದಾರರನ್ನು ಅಳಿಸಲು ಅರ್ಜಿ ಸಲ್ಲಿಸಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ದೂರು ನೀಡಿದ್ದರು.
ಎಸ್‌ಐಆರ್ ಪ್ರಕ್ರಿಯೆ ಶುರುವಾದ ಸಂದರ್ಭದಲ್ಲಿ ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿ ಮತದಾರರನ್ನು ಸೇರಿಸಿ ಕಾಂಗ್ರೆಸ್ ಪಕ್ಷ ಮುಖಂಡರು ಅರ್ಜಿಗಳನ್ನು ವಿತರಿಸಿದ್ದು, ಅದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಅಲ್ಲದೆ, ಭಾರತದ ಚುನಾವಣಾ ಆಯೋಗಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಎನ್‌ಡಿಎನ ನಾಯಕರು ದೂರು ನೀಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
