Homeರಾಜ್ಯಬರ ಪರಿಸ್ಥಿತಿ : ರಾಜ್ಯದಲ್ಲಿ 50 ರಿಂದ 60 ಸಾವಿರ ಕೋಟಿ ರೂ. ನಷ್ಟ

ಬರ ಪರಿಸ್ಥಿತಿ : ರಾಜ್ಯದಲ್ಲಿ 50 ರಿಂದ 60 ಸಾವಿರ ಕೋಟಿ ರೂ. ನಷ್ಟ

ಬೆಮಗಳೂರು, ಅ.3- ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಅಂದಾಜು 50 ಸಾವಿರ ಕೋಟಿಯಿಂದ 60 ಸಾವಿರ ಕೋಟಿ ರೂ.ಗಳವರೆಗೆ ತಲುಪುವ ಸಾಧ್ಯತೆಯಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಬರ ಪರಿಹಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ತಿಳಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 217 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಈ ಪೈಕಿ 177 ತಾಲ್ಲೂಕುಗಳಲ್ಲಿ ಉಂಟಾಗಿರುವ ನಷ್ಟದ ಅಂದಾಜು ಮಾಡಲಾಗಿದ್ದು, ಸುಮಾರು 46,000 ಕೋಟಿ ರೂ. ನಷ್ಟವಾಗಿದೆ ಎಂದು ಕೇಂದ್ರಕ್ಕೆ ಸಲ್ಲಿಸಿರುವ ಎರಡನೇ ಮೆಮೊರಾಂಡಂನಲ್ಲಿ ತಿಳಿಸಲಾಗಿದೆ.

ಅಕ್ಟೋಬರ್‌ 1ರಂದು ಘೋಷಿಸಲಾದ ಇನ್ನೂ 40 ತಾಲ್ಲೂಕುಗಳಲ್ಲಿನ ನಷ್ಟದ ಅಂದಾಜು ಪ್ರಕ್ರಿಯೆಯೂ ನಡೆಯುತ್ತಿದೆ. ಈ ಎಲ್ಲ ತಾಲೂಕುಗಳ ನಷ್ಟದ ಅಂದಾಜನ್ನು ಒಟ್ಟುಗೂಡಿಸಿದಾಗ 50 ಸಾವಿರ ಕೋಟಿಯಿಂದ 60 ಸಾವಿರ ಕೋಟಿ ರೂ.ಗಳವರೆಗೆ ನಷ್ಟವಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ರಾಜ್ಯಕ್ಕೆ ಬರಬೇಕಾದ ಪರಿಹಾರವನ್ನು ಕೋರಲಾಗುವುದು ಎಂದು ಹೇಳಿದರು.

ಇನ್ನೂ ಘೋಷಣೆಯಾಗದ 22 ತಾಲ್ಲೂಕುಗಳ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆ ತಾಲೂಕುಗಳಲ್ಲಿಯೂ ಗ್ರೌಂಡ್‌ ಟ್ರೂಥಿಂಗ್‌ ನಡೆಸಲಾಗುವುದು. ಪರಿಶೀಲನೆಯ ವೇಳೆ ಒಂದೆರಡು ಅಥವಾ ಮೂರು ತಾಲ್ಲೂಕುಗಳು ಬರಪೀಡಿತ ಎಂದು ಕಂಡುಬರಬಹುದು. ಕರಾವಳಿ ಭಾಗದ ಕೆಲವು ತಾಲ್ಲೂಕುಗಳಲ್ಲಿ ಅಂತಹ ಪರಿಸ್ಥಿತಿ ಇಲ್ಲ.

ಪರಿಶೀಲನೆಯ ನಂತರ ವಾಸ್ತವ ಸ್ಥಿತಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಇತ್ತೀಚೆಗೆ ಸುರಿದ ಮಳೆಯಿಂದ ಬರ ಪರಿಹಾರದ ಪರಿಶೀಲನೆಗೆ ಯಾವುದೇ ನಕಾರಾತಕ ಪರಿಣಾಮ ಉಂಟಾಗುವುದಿಲ್ಲ. ಈ ಮಳೆಯಿಂದ ಕುಡಿಯುವ ನೀರಿನ ಲಭ್ಯತೆಗೆ ಸ್ವಲ್ಪ ಅನುಕೂಲವಾಗಬಹುದೇ ಹೊರತು ಬೆಳೆಗಳಿಗೆ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಕೇಂದ್ರದ ತಂಡಗಳಿಗೆ ಮೇ, ಜೂನ್‌, ಜುಲೈ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳುಗಳಲ್ಲಿನ ಮಳೆ ಹಾಗೂ ಬರ ಪರಿಸ್ಥಿತಿಯನ್ನು ವಿವರಿಸಲಾಗುವುದು. ಈ ಅವಧಿಯ ಪರಿಸ್ಥಿತಿಯನ್ನೇ ಮೆಮೊರಾಂಡಂನಲ್ಲಿ ದಾಖಲಿಸಲಾಗಿದೆ. ಇತ್ತೀಚಿನ ಮಳೆಯನ್ನು ಮಾತ್ರ ಆಧರಿಸಿ ಬರ ಪರಿಸ್ಥಿತಿಯನ್ನು ನಿರ್ಧರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರದಿಂದ ಕೃಷಿ ಸಚಿವಾಲಯ, ಪರಿಸರ ಸಚಿವಾಲಯ ಸೇರಿದಂತೆ ವಿವಿಧ ಸಚಿವಾಲಯಗಳ ಜಂಟಿ ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡ ಮೂರು ತಂಡಗಳು ರಾಜ್ಯಕ್ಕೆ ಆಗಮಿಸುತ್ತಿವೆ. ಈ ತಂಡಗಳು ರಾಜ್ಯದ ಮೂರು ಕಡೆಗಳಿಗೆ ತೆರಳಿ ಮಳೆ ಮತ್ತು ಬೆಳೆ ನಷ್ಟದ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲಿವೆ. ಇಂದು ನಾವು ಬ್ರೀಫಿಂಗ್‌ ಮಾಡಿದ ಬಳಿಕ ತಂಡಗಳು ತಮ ಪರಿಶೀಲನೆಗೆ ತೆರಳಲಿವೆ. ಈಗಾಗಲೇ ಕೆಲವು ಕಡೆಗಳಲ್ಲಿ ಪ್ರತ್ಯೇಕ ತಂಡಗಳು ಪರಿಶೀಲನೆ ಆರಂಭಿಸಿವೆ ಎಂದು ತಿಳಿಸಿದರು.

ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಈಗಾಗಲೇ ಎರಡು ಮೆಮೊರಾಂಡಂಗಳನ್ನು ಸಲ್ಲಿಸಲಾಗಿದೆ. ಎರಡನೇ ಮೆಮೊರಾಂಡಂನಲ್ಲಿ 177 ತಾಲೂಕುಗಳ ಸುಮಾರು 46,000 ಕೋಟಿ ರೂ. ನಷ್ಟದ ಅಂದಾಜನ್ನು ನೀಡಲಾಗಿದೆ. ಕೇಂದ್ರದ ತಂಡಗಳ ಪರಿಶೀಲನೆ ಹಾಗೂ ಉಳಿದ ತಾಲ್ಲೂಕುಗಳ ನಷ್ಟದ ಅಂದಾಜು ಪೂರ್ಣಗೊಂಡ ಬಳಿಕ ಒಟ್ಟು 217 ತಾಲ್ಲೂಕುಗಳ ಪರಿಸ್ಥಿತಿಯನ್ನು ಒಳಗೊಂಡ ಮೂರನೇ ಹಾಗೂ ಅಂತಿಮ ಮೆಮೊರಾಂಡಂ ಸಲ್ಲಿಸಲಾಗುವುದು ಎಂದು ಹೇಳಿದರು.

RELATED ARTICLES
spot_img

Latest News