Homeರಾಜ್ಯಕೇಂದ್ರದ ಬರ ಅಧ್ಯಯನ ತಂಡಕ್ಕೆ ಪ್ರಸ್ತಾವಿತ ವರದಿ ಸಲ್ಲಿಸಿದ ರಾಜ್ಯ ಸರ್ಕಾರ

ಕೇಂದ್ರದ ಬರ ಅಧ್ಯಯನ ತಂಡಕ್ಕೆ ಪ್ರಸ್ತಾವಿತ ವರದಿ ಸಲ್ಲಿಸಿದ ರಾಜ್ಯ ಸರ್ಕಾರ

ಬೆಂಗಳೂರು, ಅ.3- ರಾಜ್ಯದಲ್ಲಿನ ಬರ ಅಧ್ಯಯನಕ್ಕಾಗಿ ಆಗಮಿಸಿರುವ ಕೇಂದ್ರ ಸರ್ಕಾರದ ಅಂತರ್‌ ಸಚಿವಾಲಯದ ಅಧಿಕಾರಿಗಳ ತಂಡದ ಜೊತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಮಾಲೋಚನೆ ನಡೆಸಿ, ಬರ ಪರಿಣಾಮದ ಪ್ರಸ್ತಾವಿತ ವರದಿಯನ್ನು ಸಲ್ಲಿಸಿದ್ದಾರೆ. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್‌ ಕುಮಾರ್‌ ಸಾಹು ನೇತೃತ್ವದ ಕೇಂದ್ರದ ಅಂತರ್‌ಸಚಿವಾಲಯ ತಂಡದೊಂದಿಗೆ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸಮಾಲೋಚನೆ ನಡೆಸಿದರು.

ಇದೇ ವೇಳೆ ಬರ ಪರಿಸ್ಥಿತಿಯಿಂದಾಗಿರುವ ಅಂದಾಜಿನ ನಷ್ಟದ ವರದಿಯನ್ನು ಕೇಂದ್ರ ಸರ್ಕಾರದ ಅಧಿಕಾರಿಗಳ 12 ಜನರ ತಂಡಕ್ಕೆ ನೀಡಲಾಗಿದ್ದು, ಪರಿಸ್ಥಿತಿಯನ್ನು ವಿವರಿಸಲಾಗಿದೆ.
ಮೇ ಯಿಂದ ಆಗಸ್ಟ್‌ ವರೆಗೂ ಕರ್ನಾಟಕದಲ್ಲಿ ಮುಂಗಾರಿನ ಚಟುವಟಿಕೆಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಮಳೆ ಇಲ್ಲದೇ ಇದ್ದಿದ್ದರಿಂದ ಬಿತ್ತಿದ ಬೆಳೆಯೆಲ್ಲಾ ನಷ್ಟವಾಗಿದೆ. ಮೇಲ್ನೋಟಕ್ಕೆ ಹಸಿರಿನ ವಾತಾವರಣ ಇದ್ದರೂ, ಯಾವುದೇ ಫಸಲು ಕೈಗೂಡುವುದಿಲ್ಲ. ಆಗಸ್ಟ್‌ ಕೊನೆ ಮತ್ತು ಅಕ್ಟೋಬರ್‌ನಲ್ಲಿ ಮಳೆಯಾಗಿದ್ದರೂ ಅದರಿಂದ ಕೃಷಿಗೆ ಯಾವುದೇ ಉಪಯೋಗವಿಲ್ಲ.

ತೋಟಗಾರಿಕೆ ಬೆಳೆಗಳ ಇಳುವರಿ ಕೂಡ ಕಡಿಮೆಯಾಗಿದೆ. ಹೀಗಾಗಿ ಅಧ್ಯಯನ ನಡೆಸುವ ಸ್ಥಳಗಳಲ್ಲಿ ಹಸಿರು ಇದ್ದಾಕ್ಷಣ ಬರ ಇಲ್ಲ ಎಂಬ ನಿರ್ಧಾರಕ್ಕೆ ಬರಬಾರದು. ಮಳೆಯ ವಾಸ್ತವಿತ ದತ್ತಾಂಶಗಳು ಹಾಗೂ ಕೃಷಿ ಮಾದರಿಗಳ ವೈಜ್ಞಾನಿಕ ವಿಶ್ಲೇಷಣೆ ನಡೆಯಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆೆ.

ರಾಜ್ಯದಲ್ಲಿ 217 ತಾಲ್ಲೂಕುಗಳಲ್ಲಿ ಬರ ಘೋಷಣೆಯಾಗಿದೆ. ಸರಿ ಸುಮಾರು ಅಂದಾಜು ನಷ್ಟ 50 ಸಾವಿರ ಕೋಟಿ ರೂ. ದಾಟಿದೆ. ಪಶ್ಚಿಮ ಘಟ್ಟದ ಸಾಲವನ್ನು ಹೊರತುಪಡಿಸಿದರೆ, ಉಳಿದೆಲ್ಲೆಡೆಯೂ ಬೆಲೆ ನಷ್ಟವಾಗಿದೆ. ಕುಡಿಯುವ ನೀರಿನ ಸಮಸ್ಯೆ ಕೂಡ ತೀವ್ರವಾಗಿಇತ್ತು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೆಲವು ಕೆರೆ, ಕುಂಟೆಗಳಿಗೆ ನೀರು ಬಂದಿದೆ. ಆದರೆ ಅದು ಈ ವರ್ಷದ ನೀರಿನ ಬೇಡಿಕೆಯನ್ನು ಪೂರ್ಣಗೊಳಿಸಲು ಸಾಲುವುದಿಲ್ಲ. ಮುಂದಿನ ಏಪ್ರಿಲ್‌ವರೆಗೂ ರಾಜ್ಯದಲ್ಲಿನ ಮಳೆ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಸೂಪರ್‌ ಎಲ್‌ ನಿನೋ ಪರಿಣಾಮ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೂ ತೀವ್ರವಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆಯೇ ಮುನ್ಸೂಚನೆ ನೀಡಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವಂತೆ ರಾಜ್ಯ ಸರ್ಕಾರ, ಕೇಂದ್ರ ತಂಡಕ್ಕೆ ಮನವಿ ಮಾಡಿದೆ.

ಕೇಂದ್ರ ತಂಡದಿಂದ ಅಧ್ಯಯನ:
ಕರ್ನಾಟಕದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯನ್ನು ಪರಿಶೀಲಿಸಲು ಆಗಮಿಸಿರುವ ಕೇಂದ್ರ ಸರ್ಕಾರದ ಅಂತರ್‌ ಸಚಿವಾಲಯ ತಂಡಗಳು ಅಕ್ಟೋಬರ್‌ 3ರಿಂದ 6ರವರೆಗೆ ರಾಜ್ಯದಲ್ಲಿ ನಾಲ್ಕು ದಿನಗಳ ಕಾಲ ಕ್ಷೇತ್ರ ಪರಿಶೀಲನೆ ನಡೆಸಲಿವೆ. ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್‌ ಕುಮಾರ್‌ ಸಾಹು ನೇತೃತ್ವದ ಕೇಂದ್ರ ತಂಡವನ್ನು ಮೂರು ಉಪತಂಡಗಳಾಗಿ ವಿಂಗಡಿಸಲಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ, ಬೆಳೆ ಹಾನಿ, ನೀರಿನ ಕೊರತೆ ಹಾಗೂ ರಾಜ್ಯ ಸರ್ಕಾರ ನೀಡಿರುವ ವರದಿಯಲ್ಲಿನ ಅಂಶಗಳನ್ನು ಸ್ಥಳ ಪರಿಶೀಲನೆ ಮೂಲಕ ಪರಿಶೀಲಿಸಲಾಗುವುದು.

ಮೊದಲ ತಂಡ ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಲಿದೆ. ಎರಡನೇ ತಂಡ ಹಾಸನ, ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯ ಕೆಲವು ಭಾಗಗಳಲ್ಲಿ ಪರಿಶೀಲನೆ ನಡೆಸಲಿದೆ. ಮೂರನೇ ತಂಡ ಯಾದಗಿರಿ, ರಾಯಚೂರು, ಬಾಗಲಕೋಟೆ ಹಾಗೂ ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸಲಿದೆ.

ರಾಜ್ಯದಲ್ಲಿ 240 ತಾಲ್ಲೂಕುಗಳ ಪೈಕಿ 217ಕ್ಕೂ ಹೆಚ್ಚು ತಾಲ್ಲೂಕುಗಳು ಬರ ಪರಿಸ್ಥಿತಿಗೆ ಸಿಲುಕಿರುವುದಾಗಿ ರಾಜ್ಯ ಸರ್ಕಾರದ ವರದಿಗಳಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ಹೆಚ್ಚಿನ ಪರಿಹಾರ ಹಾಗೂ ಆರ್ಥಿಕ ನೆರವು ಪಡೆಯಲು ರಾಜ್ಯ ಸರ್ಕಾರ ಸಮಗ್ರ ಮನವಿಯನ್ನು ಸಿದ್ಧಪಡಿಸಿದೆ.

ಕೇಂದ್ರದ ತಂಡಗಳಿಗೆ ಮೇ, ಜೂನ್‌, ಜುಲೈ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳುಗಳಲ್ಲಿನ ಮಳೆ ಪ್ರಮಾಣ, ಮಳೆ ಕೊರತೆ, ಬರ ಪರಿಸ್ಥಿತಿ, ಬೆಳೆ ಹಾನಿ ಹಾಗೂ ನೀರಿನ ಲಭ್ಯತೆಯ ಕುರಿತು ಸಂಪೂರ್ಣ ಮಾಹಿತಿ ನೀಡಲಾಗುವುದು. ಸ್ಥಳ ಪರಿಶೀಲನೆಯ ಬಳಿಕ ಕೇಂದ್ರ ತಂಡ ನೀಡುವ ವರದಿಯ ಆಧಾರದ ಮೇಲೆ ರಾಜ್ಯಕ್ಕೆ ಬರ ಪರಿಹಾರ ಅನುದಾನ ಬಿಡುಗಡೆ ಮಾಡುವ ಕುರಿತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

3,705 ಕೋಟಿ ರೂ. ಬರ ಪರಿಹಾರಕ್ಕೆ ಸಿಎಂ ಡಿಕೆಶಿ ಮನವಿ

ಬೆಂಗಳೂರು, ಅ.3- ಕರ್ನಾಟಕ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರೈತರು ಹಾಗೂ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾನದಂಡಗಳ ಅನ್ವಯ ರಾಜ್ಯಕ್ಕೆ 3,705.30 ಕೋಟಿ ರೂ. ಮಧ್ಯಂತರ ಬರ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೇಂದ್ರ ಬರ ಅಧ್ಯಯನ ತಂಡಕ್ಕೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಆಗಮಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್‌ ಕುಮಾರ್‌ ಸಾಹು ನೇತೃತ್ವದ ಅಂತರ್‌ ಸಚಿವಾಲಯ ತಂಡದೊಂದಿಗೆ ಮುಖ್ಯಮಂತ್ರಿ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಮಾಲೋಚನೆ ನಡೆಸಿದರು.

ರಾಜ್ಯಕ್ಕೆ ನ್ಯಾಯಸಮತ ಪರಿಹಾರ ದೊರಕಿಸಿರಾಜ್ಯದ 240 ತಾಲ್ಲೂಕುಗಳ ಪೈಕಿ 217 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕೇಂದ್ರ ಸರ್ಕಾರದ ವಿಪತ್ತು ನಿರ್ವಹಣಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ವೈಜ್ಞಾನಿಕವಾಗಿ ಮೌಲ್ಯಮಾಪನ ನಡೆಸಿದ ಬಳಿಕವೇ ಬರಪೀಡಿತ ತಾಲ್ಲೂಕುಗಳನ್ನು ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ರೈತರು ಸಂಕಷ್ಟಕ್ಕೆ ಸಿಲುಕಿದರೆ ಇಡೀ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ರಾಜ್ಯದ ರೈತರ ನೆರವಿಗೆ ಧಾವಿಸಬೇಕು ಎಂದು ಅವರು ಮನವಿ ಮಾಡಿದರು.

ತಮ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ಜನರು ಇಷ್ಟೊಂದು ಸಂಕಷ್ಟ ಎದುರಿಸುತ್ತಿರುವುದನ್ನು ಕಂಡಿಲ್ಲ. ರಾಜ್ಯದಲ್ಲಿ ಅತ್ಯಂತ ಆಘಾತಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಜನಪ್ರತಿನಿಧಿಗಳು ಹಾಗೂ ರೈತರ ಸಮಸ್ಯೆಗಳನ್ನು ಅರಿಯಲು ವಿಶೇಷ ಅಧಿವೇಶನ ಕರೆಯಲಾಗಿದ್ದು, 150 ಶಾಸಕರು ತಮ್ಮ ಕ್ಷೇತ್ರಗಳ ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ ಎಂದು ಅವರು ವಿವರಿಸಿದರು.ಕೃಷ್ಣಾ ಜಲಾನಯನ ಪ್ರದೇಶವನ್ನು ಹೊರತುಪಡಿಸಿದರೆ ರಾಜ್ಯದ ಬಹುತೇಕ ಜಲಾಶಯಗಳಿಗೆ ನೀರಿನ ಹರಿವು ಕಡಿಮೆಯಾಗಿದೆ. ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿಯೂ ಮಳೆಯ ಕೊರತೆ ಎದುರಾಗಿದೆ. ನಗರ ಪ್ರದೇಶಗಳಲ್ಲಿಯೂ ನೀರಿನ ಸಮಸ್ಯೆ ಉಂಟಾಗಿದೆ ಎಂದು ಅವರು ತಿಳಿಸಿದರು.

ಕಾವೇರಿ ನದಿಗೆ ನೀರು ಬಿಡುಗಡೆ ಮಾಡುವಂತೆ ಕೇಂದ್ರ ಜಲ ಆಯೋಗದಿಂದ ಆದೇಶ ನೀಡಲಾಗುತ್ತಿದೆ. ರೈತರಿಗೆ ರಾಜ್ಯ ಸರ್ಕಾರದ ವತಿಯಿಂದ ಎಕರೆಗೆ 2,500 ಪರಿಹಾರ ಘೋಷಿಸಲಾಗಿದೆ. ಆದರೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಸಹಕಾರವನ್ನು ರಾಜ್ಯ ನಿರೀಕ್ಷಿಸುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯ ಸರ್ಕಾರದ ಎಲ್ಲ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಅಧಿಕಾರಿಗಳೂ ತಮ ಇಲಾಖೆಗಳ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಬರ ಪರಿಸ್ಥಿತಿಯ ಕುರಿತು ಪ್ರಧಾನಮಂತ್ರಿಯವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುನ್ನೆಚ್ಚರಿಕೆ ನೀಡಿದ್ದರು. ಅದರಂತೆ ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿತ್ತು. ರೈತರಿಗೂ ಬಿತ್ತನೆ ಕುರಿತು ಮಾರ್ಗದರ್ಶನ ನೀಡಲಾಗಿತ್ತು ಎಂದು ಅವರು ವಿವರಿಸಿದರು.

ರೈತರು ತೀವ್ರ ಸಂಕಷ್ಟದಲ್ಲಿದ್ದು, ಕಬ್ಬು ಬೆಳೆಗಾರರು ಹೆಚ್ಚಿನ ಬೆಲೆಗೆ ಒತ್ತಾಯಿಸುತ್ತಿದ್ದಾರೆ. ಹಾಲು ಉತ್ಪಾದಕರು ಕೂಡ ಕನಿಷ್ಠ 10 ರೂ. ದರ ಹೆಚ್ಚಳಕ್ಕೆ ಮನವಿ ಮಾಡುತ್ತಿದ್ದಾರೆ. ಈ ಸವಾಲಿನ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಕರೆ ನೀಡಿದರು.

ವಸ್ತುನಿಷ್ಠ ವರದಿ ಸಲ್ಲಿಸುವ ಭರವೆ:
ಮುಖ್ಯಮಂತ್ರಿಗಳ ಮನವಿಗೆ ಪ್ರತಿಕ್ರಿಯಿಸಿದ ಕೇಂದ್ರ ಬರ ಪರಿಸ್ಥಿತಿ ಅಧ್ಯಯನ ತಂಡದ ಮುಖ್ಯಸ್ಥ ಅಜಿತ್‌ ಕುಮಾರ್‌ ಸಾಹು, ತಂಡವು ಮೂರು ದಿನಗಳ ಕಾಲ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಪ್ರವಾಸ ಮಾಡಿ ವಸ್ತುಸ್ಥಿತಿಯನ್ನು ಪರಿಶೀಲಿಸಲಿದೆ. ರಾಜ್ಯ ಸರ್ಕಾರದ ಅಧಿಕಾರಿಗಳಿಂದ ಅಗತ್ಯ ದತ್ತಾಂಶಗಳನ್ನು ಪಡೆದುಕೊಂಡು ವಸ್ತುನಿಷ್ಠ ವರದಿಯನ್ನು ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಎಲ್‌‍.ಕೆ. ಅತೀಕ್‌, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ಉಮಾ ಮಹಾದೇವನ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌, ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಪ್ರಧಾನ ಕಾರ್ಯದರ್ಶಿ ಮನೋಜ್‌ ಕುಮಾರ್‌ ಮೀನಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
spot_img

Latest News