ಬೆಂಗಳೂರು,ಮಾ.26- ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಯಾವುದೇ ವಿಷನ್(ದೂರದೃಷ್ಟಿ) ಇಲ್ಲದ ಪಕ್ಷ ಕಮೀಷನ್ ಕಡೆಯಷ್ಟೇ ಚಿತ್ತಹರಿಸಿದೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಕಾಂಗ್ರೆಸ್ನವರಿಗೆ ಗೊತ್ತಿದೆ. ಅಧಿಕಾರಕ್ಕೆ ಬರುವುದಿರಲಿ ಕಡೆಪಕ್ಷ ಅಧಿಕೃತ ವಿರೋಧ ಪಕ್ಷಕ್ಕೆ ಬೇಕಾದ ಸ್ಥಾನಗಳನ್ನೂ ದೇಶದ ಜನತೆ ನೀಡುವುದಿಲ್ಲ ಎಂದು ಭವಿಷ್ಯ ನುಡಿದರು.
ಸೋಲುವುದು ಗೊತ್ತಿರುವುದರಿಂದಲೇ ಸದ್ಯ ಕಾಂಗ್ರೆಸ್ ಮಾಡುತ್ತಿರುವುದು ಎರಡೇ ಕಾರ್ಯಗಳು. ಸುಳ್ಳು ಮತ್ತು ದ್ವೇಷವನ್ನು ಹಬ್ಬಿಸುವುದು, ಪ್ರಧಾನಿ ನರೇಂದ್ರಮೋದಿ ಮತ್ತು ಬಿಜೆಪಿ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ಕಿಡಿಕಾರಿದರು.
2050ಕ್ಕೆ ಭಾರತ ಹೇಗಿರಬೇಕು ಎಂಬ ದೂರದೃಷ್ಟಿಯೊಂದಿಗೆ ನಮ್ಮ ಪ್ರಧಾನಿಗಳು ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಬಿಜೆಪಿ ಪ್ರಚಂಡ ಬಹುಮತ ಪಡೆದು ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಖಚಿತ. ಇದನ್ನು ಯಾರೂ ಕೂಡ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕೈಲಾಗದವರು ಮೈ ಪರಚಿಕೊಳ್ಳುತ್ತಾರೆ ಅಂತಾರಲ್ಲ, ಹಾಗೇ ಆಗಿದೆ ಕಾಂಗ್ರೆಸ್ ಪರಿಸ್ಥಿತಿ. ಇಂಡಿಯಾ ಮೈತ್ರಿಯ ಅಂಗವಾಗಿರುವ ಸ್ಟಾಲಿನ್, ಉದಯನಿಧಿ ಸ್ಟಾಲಿನ್ವರೆಗೂ ದ್ವೇಷದ ಮಾತುಗಳು ಬರುತ್ತಿದೆ. ಕಾಂಗ್ರೆಸ್ಗೆ ಅಸಹಾಯಕತೆ ಕಾಡುತ್ತಿದೆ ಎಂದು ಟೀಕಿಸಿದರು.