ನವದೆಹಲಿ, ಅ.3- ಕರ್ನಾಟಕ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ಹಾಗೂ ತುರ್ತಾಗಿ ಮಧ್ಯಪ್ರವೇಶಿಸಿ ರಾಜ್ಯಕ್ಕೆ ಅಗತ್ಯ ನೆರವು ಒದಗಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಗಂಭೀರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಸೆಪ್ಟೆಂಬರ್ ವೇಳೆಗೆ ಶೇ.58ರಷ್ಟು ಮಳೆ ಕೊರತೆ ದಾಖಲಾಗಿದೆ. ವ್ಯಾಪಕ ಬೆಳೆ ಹಾನಿಯಿಂದ ಲಕ್ಷಾಂತರ ರೈತ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ ಎಂದು ಪ್ರಧಾನಿಯವರಿಗೆ ಬರೆದಿರುವ ಸುಧೀರ್ಘ ಪತ್ರದಲ್ಲಿ ಖರ್ಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಬರದಿಂದ ಅಂದಾಜು 18,748.23 ಕೋಟಿ ರೂ. ನಷ್ಟ ಉಂಟಾಗಿದ್ದು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾನದಂಡಗಳಡಿ ಕರ್ನಾಟಕ 3,705.30 ಕೋಟಿ ರೂ. ಮಧ್ಯಂತರ ನೆರವು ಕೋರಿದೆ ಎಂದು ಅವರು ವಿವರಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರದಿಂದ ಉಂಟಾಗಿರುವ ಹಾನಿಯನ್ನು ಸ್ಥಳದಲ್ಲೇ ಪರಿಶೀಲಿಸಲು ಯಾವುದೇ ವಿಳಂಬವಿಲ್ಲದೆ ವಿಶೇಷ ಕೇಂದ್ರ ತಂಡವನ್ನು ಕಳುಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕರ್ನಾಟಕ ಕೋರಿರುವ 3,705.30 ಕೋಟಿ ರೂ.ಗಳ ಸಂಪೂರ್ಣ ಮೊತ್ತವನ್ನು ಯಾವುದೇ ಅನಿಯಂತ್ರಿತ ಕಡಿತವಿಲ್ಲದೆ ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾನದಂಡಗಳ ಅನ್ವಯ ಮಂಜೂರು ಮಾಡಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ರೈತರಿಗೆ ನೀಡುವ ಒಳಸಹಾಯಧನವನ್ನು ಹಳೆಯ 2015-16ರ ಕೃಷಿ ಗಣತಿಯ ಬದಲಿಗೆ ಕರ್ನಾಟಕದ ನವೀಕರಿಸಿದ ಭೂಮಿ ಭೂದಾಖಲೆಗಳ ಆಧಾರದ ಮೇಲೆ ಲೆಕ್ಕ ಹಾಕಬೇಕು.
ಇದರಿಂದ ಅರ್ಹ ರೈತರು ನೆರವಿನಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಖರ್ಗೆ ಒತ್ತಾಯಿಸಿದ್ದಾರೆ. ಪ್ರಸ್ತುತ ಸ್ಥಳ ಪರಿಶೀಲನೆ ನಡೆಯುತ್ತಿರುವ 11 ಹೆಚ್ಚುವರಿ ತಾಲ್ಲೂಕುಗಳು ಹಾಗೂ ಮುಂದೆ ಅರ್ಹತೆ ಪಡೆಯುವ ಇತರ ತಾಲ್ಲೂಕುಗಳನ್ನೂ ಒಂದೇ ನಿರಂತರ ಬರ ಪರಿಸ್ಥಿತಿಯ ಭಾಗವಾಗಿ ಪರಿಗಣಿಸಿ ಕೇಂದ್ರದ ನೆರವಿಗೆ ಒಳಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
