Friday, November 22, 2024
Homeರಾಜ್ಯಬಿಜೆಪಿಗೆ ಸೋಲಿನ ಭಯ ಶುರುವಾಗಿದೆ : ಪರಮೇಶ್ವರ್

ಬಿಜೆಪಿಗೆ ಸೋಲಿನ ಭಯ ಶುರುವಾಗಿದೆ : ಪರಮೇಶ್ವರ್

ಬೆಂಗಳೂರು,ಮಾ.26- ಬಿಜೆಪಿ ಸೋಲಿನ ಭಯದಿಂದ ಗಾಬರಿಯ ವಾತಾವರಣದಲ್ಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಜನಾರ್ಧನ್ ರೆಡ್ಡಿಯವರನ್ನು ಪಕ್ಷಕ್ಕೆ ಸೇರಿಸಿಕೊಂಡ ಕುರಿತು ಪ್ರತಿಕ್ರಿಯಿಸಿದರು.

ಒಂದು ಕಾಲದಲ್ಲಿ ಜನಾರ್ದನರೆಡ್ಡಿಗೂ ನಮಗೂ ಸಂಬಂಧವಿಲ್ಲ ಎಂದು ದೆಹಲಿಯಿಂದ ಬೆಂಗಳೂರಿನವರೆಗೆ ಎಲ್ಲಾ ಮುಖಂಡರೂ ಹೇಳಿಕೆ ನೀಡಿದ್ದರು. ಈಗ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದ ಮಾತ್ರಕ್ಕೆ ಅವರು ಮಾಡಿದ ಕಾನೂನು ಬಾಹಿರ ಕೆಲಸಗಳು ಮರೆತುಹೋಯಿತೇ? ಬಿಜೆಪಿಗೆ ಸೇರಿದಾಕ್ಷಣ ಎಲ್ಲವೂ ಖುಲಾಸೆಯಾದವೇ? ಎಂದು ಪ್ರಶ್ನಿಸಿದರು.

ಬಿಜೆಪಿಯವರು ಸೋಲಿನ ಭಯದಿಂದ ಗಾಬರಿಯ ವಾತಾವರಣದಲ್ಲಿದ್ದಾರೆ. ಅದಕ್ಕಾಗಿ ಈ ಮೊದಲು ದೂರ ಇಟ್ಟವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಕಳೆದ ಲೋಕಸಭಾ ಚುನಾವಣೆಗೂ ಮುನ್ನ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿಕೆ ನೀಡಿದ್ದರು. ಅದರಂತೆ ನಡೆದುಕೊಂಡಿಲ್ಲ. ಪ್ರಧಾನಿಯವರೇ ಸುಳ್ಳು ಹೇಳಿದ್ದಾರೆ ಎಂದು ನಾವು ಜನರ ಮುಂದೆ ಹೇಳುತ್ತಿದ್ದೇವೆ. ಸಚಿವ ಶಿವರಾಜ ತಂಗಡಗಿ ಮೋದಿ ಮೋದಿ ಎನ್ನುವ ಯುವಕರ ಕಪಾಳಕ್ಕೆ ಬಾರಿಸಬೇಕು ಎಂದು ಯಾವ ಸಂದರ್ಭದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದರು.

ಯಾವುದೇ ಪಕ್ಷದವರಾದರೂ ಕೇಂದ್ರ ಚುನಾವಣಾ ಆಯೋಗದ ನಿಯಮಾವಳಿಗಳನ್ನು ಪಾಲನೆ ಮಾಡಬೇಕು. ನೀತಿಸಂಹಿತೆ ಉಲ್ಲಂಘಿಸಬಾರದು. ಒಂದು ವೇಳೆ ಶಿವರಾಜ ತಂಗಡಗಿ ಹೇಳಿಕೆಯಲ್ಲಿ ಪ್ರಚೋದನಾಕಾರಿ ಅಂಶಗಳಿದ್ದರೆ ಚುನಾವಣಾ ಆಯೋಗವೇ ಗಮನಿಸುತ್ತದೆ. ಅಗತ್ಯ ಕಂಡುಬಂದರೆ ಪ್ರಕರಣಗಳನ್ನು ದಾಖಲಿಸುತ್ತದೆ. ಈಗಾಗಲೇ ಈ ರೀತಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.

ಶಿವರಾಜ ತಂಗಡಗಿ ಹೇಳಿಕೆಯಿಂದ ಗಲಾಟೆಯಾಗುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಿರುವುದರ ಹಿಂದಿನ ಉದ್ದೇಶವೇನು? ಬಹುಶಃ ಅವರೇ ಗಲಾಟೆ ಮಾಡಿಸಲು ಸಿದ್ಧರಾಗಿರಬಹುದು. ಒಂದು ವೇಳೆ ಅಂತಹ ಪ್ರಯತ್ನಗಳಾದರೆ ಅದಕ್ಕೆ ತಕ್ಕ ಕ್ರಮ ಕೈಗೊಳ್ಳಲು ನಮ್ಮ ವ್ಯವಸ್ಥೆ ಸಿದ್ಧವಾಗಿದೆ ಎಂದು ಗೃಹಸಚಿವರು ಎಚ್ಚರಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಮತಗಳಿಲ್ಲ. ಬಹಳಷ್ಟು ಮಂದಿ ಅರ್ಜಿ ಹಾಕಿದ್ದರು. ಹೈಕಮಾಂಡ್ ಒಬ್ಬರಿಗೆ ಮಾತ್ರ ಟಿಕೆಟ್ ಕೊಡಲು ಸಾಧ್ಯ. ಅವಕಾಶ ವಂಚಿತರು ಎರಡು-ಮೂರು ದಿನ ಬೇಸರದಲ್ಲಿರುತ್ತಾರೆ. ಅನಂತರ ಸರಿ ಹೋಗುತ್ತಾರೆ. ತುಮಕೂರಿನಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಲಿಖಿತ್ ರಾಜ್ ಮೌರ್ಯ ಮತ್ತು ಮುರಳೀಧರ ಹಾಲಪ್ಪನವರು ಈಗ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.

ಜಿಲ್ಲೆಯಲ್ಲಿ 8 ಲೋಕಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಒಂದು ಸುತ್ತಿನ ಪ್ರಚಾರ ಕಾರ್ಯ ನಡೆದಿದೆ. ಕಾರ್ಯಕ್ರಮಗಳಲ್ಲಿ ಲಿಖಿತ್ ರಾಜ್ ಮೌರ್ಯ ಮತ್ತು ಮುರಳೀಧರ ಹಾಲಪ್ಪ ಭಾಗವಹಿಸಿ ಭಾಷಣ ಮಾಡಿದ್ದಾರೆ. ಮುದ್ದಹನುಮೇಗೌಡರನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ ಎಂದು ವಿವರಿಸಿದರು. ಬಿಜೆಪಿಯ ನಾಯಕ ಜೆ.ಸಿ.ಮಾಧುಸ್ವಾಮಿ ಅವರು ಬಿಜೆಪಿ ವಿರುದ್ಧ ವ್ಯಕ್ತಪಡಿಸುವ ಅಸಮಾಧಾನದ ಬಗ್ಗೆ ನಾನು ಪ್ರತಿಕ್ರಿಯಿಸಲಾಗುವುದಿಲ್ಲ. ಅವರ ಪರವಾದ ವಕ್ತಾರಿಕೆ ಮಾಡಲು ನಾವು ಸಿದ್ಧರಿಲ್ಲ ಎಂದು ಹೇಳಿದರು.

ಕೋಲಾರ, ಚಾಮರಾಜನಗರ, ಬಳ್ಳಾರಿ, ಚಿಕ್ಕಬಳ್ಳಾಪುರ ಕ್ಷೇತ್ರಗಳ ಅಭ್ಯರ್ಥಿಗಳನ್ನು ಶೀಘ್ರದಲ್ಲೇ ಆಯ್ಕೆ ಮಾಡಲಾಗುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೊಂದಾಣಿಕೆ ಮಾಡುವುದು ಸಾಮಾನ್ಯ. ಆಕಾಂಕ್ಷಿಗಳನ್ನು ನಿರ್ಲಕ್ಷಿಸಿ ಪಕ್ಷ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅದಕ್ಕಾಗಿ ಚರ್ಚೆಗಳು ನಡೆಯುತ್ತಿವೆ ಎಂದರು.

RELATED ARTICLES

Latest News