ಚೆನ್ನೈ, ಅ.4- ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ ಆನಂದ್ ಚಿತ್ರದ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ (94) ಅವರು ನಿಧನ ಹೊಂದಿದ್ದಾರೆ
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಾದರೂ ಚಿಕಿತ್ಸೆ ಫಲಿಸದೆ ನಿಧನರಾಗಿದ್ದು, ಚಿತ್ರರಂಗವು ಒಬ್ಬ ಮೇರು ನಿರ್ದೇಶಕರನ್ನು ಕಳೆದುಕೊಂಡಿದೆ. ಅವರು ತೆಲುಗು, ಕನ್ನಡ, ತಮಿಳು, ಇಂಗ್ಲಿಷ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಕನ್ನಡದ ನಂಟು:
ಭೌತಶಾಸ್ತ್ರದಲ್ಲಿ ಪದವಿ ಪಡೆದು ಕೆಲವು ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಸಿಂಗೀತಂ ಶ್ರೀನಿವಾಸ್‌ರಾವ್ ಅವರು ತೆಲುಗಿನವರಾದರೂ ಕನ್ನಡ ಚಿತ್ರರಂಗದಲ್ಲೂ ತಮ್ಮದೇ ಛಾಪು ಮೂಡಿಸಿದ್ದರು, ನಿರ್ದೇಶಕ ಕೆ.ವಿ. ರೆಡ್ಡಿ ಅವರೊಂದಿಗೆ ಮಾಯಾಬಜಾರ್‌ನಂತಹ ಉತ್ತಮ ಚಿತ್ರಕ್ಕೆ ಸಹಾಯಕರಾಗಿ ಸಿನಿಮಾ ಪಯಣ ಪ್ರಾರಂಭಿಸಿದರು.
ಸಿಂಗೀತಂ ಶ್ರೀನಿವಾಸ ರಾವ್ ಅವರು ವರನಟ ಡಾ. ರಾಜ್‌ಕುಮಾರ್ ಅವರ ಕಾಂಬಿನೇಷನ್‌ನಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ್ದಾರೆ.
1982ರಲ್ಲಿ ಮೂಡಿಬಂದ ಹಾಲು ಜೇನು , ಚಲಿಸುವ ಮೋಡಗಳು, 1983ರಲ್ಲಿ ಬಿಡುಗಡೆಯಾದ ಎರಡು ನಕ್ಷತ್ರಗಳು ಮತ್ತು 1984ರಲ್ಲಿ ಶ್ರಾವಣ ಬಂತು , ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಕಂಡವು.1986ರಲ್ಲಿ ತೆರೆಕಂಡ ಭಾಗ್ಯದ ಲಕ್ಷ್ಮಿ ಬಾರಮ್ಮ ಪಕ್ಕಾ ಹಾಸ್ಯಮಯ ಕಥಾಹಂದರ ಹೊಂದಿದ್ದು, ಸಿಂಗೀತಂ ಅವರಿಗೆ ಅತ್ಯುತ್ತಮ ಚಿತ್ರಕಥೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಒಲಿದು ಬಂದಿತ್ತು.
ಡಾ.ರಾಜ್ ಕುಮಾರ್ ಚಿತ್ರಗಳಲ್ಲದೆ,ಶಿವರಾಜ್‌ಕುಮಾರ್ ಅಭಿನಯದ ಆನಂದ್, ಸಂಯುಕ್ತ , ರಾಘವೇಂದ್ರ ರಾಜ್‌ಕುಮಾರ್ ನಟನೆಯ ಚಿರಂಜೀವಿ ಸುಧಾಕರ, ಟುವ್ವಿ ಟುವ್ವಿ ಟುವ್ವಿ, ಕುಮಾರ್ ಬಂಗಾರಪ್ಪ ಅವರ ಕ್ಷೀರಸಾಗರ, ಬೆಳ್ಳಿಯಪ್ಪ ಬಂಗಾರಪ್ಪ, ಜಗ್ಗೇಶ್ ಅಭಿನಯದ ಮೇಕಪ್ ಮುಂತಾದ ಸಿನಿಮಾಗಳನ್ನು ಸಿಂಗೀತಂ ಶ್ರೀನಿವಾಸ ರಾವ್ ಅವರು ನಿರ್ದೇಶನ ಮಾಡಿದ್ದರು.
ನಿರ್ಮಾಣದಲ್ಲೂ ಒಲವು:
ಸಿಂಗೀತಂ ಶ್ರೀನಿವಾಸ್ ನಿರ್ಮಿಸಿ ಕಮಲ್ ಹಾಸನ್ ಅಭಿನಯದ ಮೂಕಿ ಸಿನಿಮಾ ಪುಷ್ಪಕ ವಿಮಾನ (1987) ನಿರ್ಮಾಣಗೊಂಡಿದ್ದು ಮತ್ತು ಪ್ರದರ್ಶನಗೊಂಡಿದ್ದು ಬೆಂಗಳೂರಿನಲ್ಲೇ ಎಂಬುದು ವಿಶೇಷ.
ಸಂಗೀತಕ್ಕೂ ಸೈ:
ನಿರ್ದೇಶಕರಾಗಿ ಅಲ್ಲದೆ ಸಂಗೀತ ಸಂಯೋಜನೆ, ಚಿತ್ರಕಥೆ ಬರೆಯುವಲ್ಲೂ ನಿಪುಣರಾಗಿದ್ದ ಸಿಂಗೀತಂ ಶ್ರೀನಿವಾಸ್ ಅವರು, ಭಾಗ್ಯದ ಲಕ್ಷ್ಮಿ ಬಾರಮ್ಮ, ಸಂಯುಕ್ತ, ತೆಲುಗಿನ ವೆಲ್ ಕಮ್ ಒಬಾಮಾ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ, ಅಲ್ಲದೆ ಖ್ಯಾತ ಗೀತರಚನೆಕಾರ, ಚಿತ್ರ ಸಾಹಿತಿ ಚಿ.ಉದಯ್‌ಶಂಕರ್ ಜೊತೆಗೂಡಿ ಭಾಗ್ಯದಲಕ್ಷ್ಮಿ ಬಾರಮ್ಮ ಸಿನಿಮಾದ ಚಿತ್ರಕಥೆ ಬರೆಯುವಲ್ಲೂ ಕೈಜೋಡಿಸಿದ್ದರು.
ನಟನೆಯಲ್ಲೂ ಮಿಂಚು:
ಕಮಲ್ ಹಾಸನ್ ಅವರ ಯಶಸ್ವಿ ಚಿತ್ರಗಳಲ್ಲಿ ಒಂದಾದ ಮೈಕೇಲ್ ಮದನಕಾಮರಾಜ, ತೆಲುಗಿನ ಪಂತುಲಮ್ಮ, ಆಂಧ್ರ ಕೇಸರಿ, ವರುಡು, ಚಿನ್ನಿ ಚಿನ್ನಿ ಆಸಾ, ಕೆಂಚೆ, ಭಲೇ ಉನ್ವಾಡು ಚಿತ್ರಗಳಲ್ಲಿ ಸಿಂಗೀತಂ ಶ್ರೀನಿವಾಸ್‌ರಾವ್ ನಟಿಸಿದ್ದಾರೆ.
ಒಲಿದು ಬಂದ ಪ್ರಶಸ್ತಿಗಳು:
60ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದ ಸಿಂಗೀತಂ ಶ್ರೀನಿವಾಸ ರಾವ್, 2 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 3 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಆಂಧ್ರಪ್ರದೇಶದ ನಂದಿ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
