ಬೆಂಗಳೂರು, ಅ.4- ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಕೇಂದ್ರ ಚುನಾವಣಾ ಆಯೋಗವೇ ಷಡ್ಯಂತ್ರ ಮಾಡಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ, ಹರಿಯಾಣ, ಪಶ್ಚಿಮಬಂಗಾಳ ಮತ್ತು ಬಿಹಾರದ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಚುನಾವಣಾ ಆಯೋಗ ಎಸ್ಐಆರ್ ಹೆಸರಿನಲ್ಲಿ ಸಂಚು ನಡೆಸಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ದೇಶದಲ್ಲಿ 13 ಕೋಟಿ ಮತದಾರರನ್ನು ಹೊರಗಿಡುವ ಪ್ರಕ್ರಿಯೆಯಲ್ಲಿ ಸರ್ಕಾರದ ಅನುಮತಿ ಪಡೆದಿಲ್ಲ ಎಂಬುದು ಈಗ ಬಹಿರಂಗವಾಗಿದೆ ಎಂದರು.ಅರ್ಜಿ ನಮೂನೆ-6ರಲ್ಲಿ ಬದಲಾವಣೆ ತರಬೇಕಾದರೆ ಆಯೋಗದ ಎಲ್ಲಾ ಆಯುಕ್ತರ ಜೊತೆ ಚರ್ಚೆ ನಡೆಸಿ, ನಂತರ ಸರ್ಕಾರದ ಜೊತೆ ಸಮಾಲೋಚನೆ ನಡೆಸಿ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ ಆ ರೀತಿ ಯಾವುದೇ ಬೆಳವಣಿಗೆಗಳಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನಿನಲ್ಲಿ ಬದಲಾವಣೆ ತರಲು ಗೆಜೆಟ್ ಹೊರಡಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಂಡಿದೆ ಎಂದು ಕಿಡಿಕಾರಿದರು.ಎಸ್ಐಆರ್ನಲ್ಲಿ ಮ್ಯಾಪಿಂಗ್ ಮಾಡಲಾಗಿದೆ. ಮನೆ-ಮನೆಗೆ ಭೇಟಿ ಮಾಡಲಾಗಿದೆ. ಅದಾದ ಬಳಿಕ ಅರ್ಜಿ ನಮೂನೆ-7ರ ಅಡಿ ಹೆಸರುಗಳನ್ನು ಡಿಲಿಟ್ ಮಾಡಲು ಮನವಿ ಮಾಡುವ ಅಗತ್ಯವೇ ಇರಲಿಲ್ಲ ಎಂದರು.
