Homeರಾಷ್ಟ್ರೀಯಪತ್ರಕರ್ತರೊಂದಿಗೆ ದೆಹಲಿ ಪೊಲೀಸರ ವರ್ತನೆಗೆ ಭಾರತೀಯ ಪ್ರೆಸ್‌‍ಕ್ಲಬ್‌ ಆಕ್ಷೇಪ

ಪತ್ರಕರ್ತರೊಂದಿಗೆ ದೆಹಲಿ ಪೊಲೀಸರ ವರ್ತನೆಗೆ ಭಾರತೀಯ ಪ್ರೆಸ್‌‍ಕ್ಲಬ್‌ ಆಕ್ಷೇಪ

ನವದೆಹಲಿ, ಅ.4- ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಜಂತರ್‌ ಮಂತರ್‌ನಲ್ಲಿ ಶುಕ್ರವಾರ ಮತ್ತು ಶನಿವಾರ ನಡೆದ ಪ್ರತಿಭಟನೆ ವೇಳೆ ಪತ್ರಕರ್ತರೊಂದಿಗೆ ದೆಹಲಿ ಪೊಲೀಸರು ನಡೆದುಕೊಂಡ ರೀತಿಗೆ ಭಾರತೀಯ ಪ್ರೆಸ್‌ ಕ್ಲಬ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಪತ್ರಕರ್ತರ ವಿರುದ್ಧ ಪೊಲೀಸರ ಕ್ರಮ ಮತ್ತು ವರ್ತನೆಯಿಂದ ಆಘಾತ ಹಾಗೂ ಬೇಸರವಾಗಿದೆ ಎಂದು ಪ್ರೆಸ್‌ ಕ್ಲಬ್‌ ಆಫ್‌ ಇಂಡಿಯಾ ಹೇಳಿದೆ. ಪ್ರತಿಭಟನೆಯ ವರದಿ ಮಾಡಲು ತೆರಳಿದ್ದ ಹಲವು ಸ್ವತಂತ್ರ ಮಾಧ್ಯಮ ಸಂಸ್ಥೆಗಳು ಹಾಗೂ ಸುದ್ದಿತಾಣಗಳ ಪತ್ರಕರ್ತರು ತಮ್ಮ ಪತ್ರಿಕಾ ಗುರುತಿನ ಚೀಟಿಗಳನ್ನು ಹೊಂದಿದ್ದರೂ, ತಾವು ಮಾಧ್ಯಮ ಪ್ರತಿನಿಧಿಗಳು ಎಂದು ಪದೇಪದೇ ತಿಳಿಸಿದ್ದರೂ ಪೊಲೀಸರು ಆಕ್ರಮಣಕಾರಿ ಹಾಗೂ ಹಿಂಸಾತ್ಮಕವಾಗಿ ವರ್ತಿಸಿದ್ದಾರೆ ಎಂದು ಪತ್ರಕರ್ತರು ಆರೋಪಿಸಿರುವುದಾಗಿ ಪ್ರೆಸ್‌ ಕ್ಲಬ್‌ ತಿಳಿಸಿದೆ.

ಕೆಲವು ಪತ್ರಕರ್ತರನ್ನು ಪ್ರತಿಭಟನಾಕಾರರೊಂದಿಗೆ ವಶಕ್ಕೆ ಪಡೆಯಲಾಗಿದೆ. ಪತ್ರಕರ್ತೆಯೊಬ್ಬರು ಸಹಾಯಕ ಪೊಲೀಸ್‌ ಆಯುಕ್ತರೊಬ್ಬರು ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿ, ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ದೂರು ದಾಖಲಿಸಲು ಶುಕ್ರವಾರ ರಾತ್ರಿ ಸಂಸತ್‌ ಮಾರ್ಗ ಪೊಲೀಸ್‌ ಠಾಣೆಯಲ್ಲಿ ಹಲವು ಗಂಟೆಗಳ ಕಾಲ ಕಾಯಬೇಕಾಯಿತು. ಆದರೆ, ಈವರೆಗೂ ಪೊಲೀಸರು ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರೆಸ್‌ ಕ್ಲಬ್‌ ಆಕ್ಷೇಪ ವ್ಯಕ್ತಪಡಿಸಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ವರ್ತನೆಯನ್ನು ಸಾಮಾನ್ಯಗೊಳಿಸಲು ಸಾಧ್ಯವಿಲ್ಲ. ಪತ್ರಕರ್ತರು ಯಾವುದೇ ಭಯವಿಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಹಾಗೂ ವಿವಿಧ ವಿಚಾರಗಳ ಕುರಿತು ಧ್ವನಿ ಎತ್ತುವವರ ಪ್ರತಿಭಟನೆಗಳನ್ನು ವರದಿ ಮಾಡಲು ಅವಕಾಶ ನೀಡಬೇಕು ಎಂದು ಅದು ಆಗ್ರಹಿಸಿದೆ.

ದೇಶದ ರಾಜಧಾನಿಯ ಹೃದಯಭಾಗದಲ್ಲಿಯೇ ಪತ್ರಕರ್ತರಿಗೆ ತಮ್ಮ ಕರ್ತವ್ಯ ನಿರ್ವಹಿಸಲು ಅವಕಾಶ ನೀಡದಿರುವುದು ಭಾರತದಲ್ಲಿನ ಮಾಧ್ಯಮ ಸ್ವಾತಂತ್ರ್ಯದ ದೃಷ್ಟಿಯಿಂದ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಪ್ರೆಸ್‌ ಕ್ಲಬ್‌ ಆಕ್ಷೇಪ ವ್ಯಕ್ತಪಡಿಸಿದೆ. ಪತ್ರಕರ್ತೆಯ ದೂರಿನ ಕುರಿತು ದೆಹಲಿ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಪತ್ರಕರ್ತರು ಯಾವುದೇ ಬೆದರಿಕೆ ಅಥವಾ ಆಕ್ರಮಣ ಎದುರಿಸದೆ ತಮ್ಮ ಕರ್ತವ್ಯ ನಿರ್ವಹಿಸಲು ಅಗತ್ಯ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದೆ.

ಇದೇ ವೇಳೆ ಜಂತರ್‌ ಮಂತರ್‌ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶುಕ್ರವಾರ ಮತ್ತೆ ಅಂತರ್ಜಾಲ ಸೇವೆ ಸ್ಥಗಿತಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೂ ಪ್ರೆಸ್‌ ಕ್ಲಬ್‌ ಆಕ್ಷೇಪ ವ್ಯಕ್ತಪಡಿಸಿದೆ. ಅಂತರ್ಜಾಲ ಸೇವೆ ಸ್ಥಗಿತಗೊಳಿಸುವ ಆದೇಶಗಳನ್ನು ಸಾರ್ವಜನಿಕವಾಗಿ ಪ್ರಕಟಿಸದೆ ಸೇವೆ ಕಡಿತಗೊಳಿಸಿರುವುದು ಮಾಹಿತಿಯ ಹರಿವಿಗೆ ತೀವ್ರ ಅಡ್ಡಿಯಾಗಿದೆ. ಇದರಿಂದ ಪತ್ರಕರ್ತರು ತಮ್ಮ ಕರ್ತವ್ಯ ನಿರ್ವಹಿಸಲು ತೊಂದರೆಯಾಗಿದೆ ಎಂದು ಹೇಳಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಅನಿಯಂತ್ರಿತ ಅಂತರ್ಜಾಲ ಸೇವೆ ಸ್ಥಗಿತಕ್ಕೆ ಅವಕಾಶ ಇರಬಾರದು ಎಂದು ಪ್ರೆಸ್‌ ಕ್ಲಬ್‌ ಆಫ್‌ ಇಂಡಿಯಾ ಆಗ್ರಹಿಸಿದೆ.

RELATED ARTICLES
spot_img

Latest News