ಬೆಂಗಳೂರು,ಮಾ.27- ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದ ಬಿಜೆಪಿ ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸೌಧದಲ್ಲಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.
ರಾಜೀನಾಮೆ ಪತ್ರವು ಕ್ರಮಬದ್ದವಾಗಿರುವುದರಿಂದ ಅದನ್ನು ಅಂಗೀಕರಿಸಲಾಗಿದೆ ಎಂದು ಸಭಾಪತಿ ಹೊರಟ್ಟಿ ಅವರು ಹೇಳಿದ್ದಾರೆ. ಮೈಸೂರು-ಕೊಡುಗು ಕ್ಷೇತ್ರದ ಆಕಾಂಕ್ಷಿಯಾಗಿದ್ದ ತೇಜಸ್ವಿನಿ ಟಿಕೆಟ್‍ಗಾಗಿ ಭಾರೀ ಲಾಬಿಯನ್ನೇ ನಡೆಸಿದ್ದರು. ರಾಜ್ಯ ಬಿಜೆಪಿ ನಾಯಕರು ಹಾಗೂ ಕೇಂದ್ರ ವರಿಷ್ಠರನ್ನು ಭೇಟಿ ಮಾಡಿ ತಮಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು.
ಆದರೆ ಮೈಸೂರು-ಕೊಡುಗು ಕ್ಷೇತ್ರದಿಂದ ಬಿಜೆಪಿ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೂ ಟಿಕೆಟ್ ಕೊಡದೆ ರಾಜಮನೆತನದ ಯದುವೀರ್ ನರಸಿಂಹದತ್ತ ಒಡೆಯರಿಗೆ ಟಿಕೆಟ್ ಘೋಷಣೆಯಾಗಿತ್ತು. ಇದರಿಂದ ಅಸಮಾಧಾನಗೊಂಡ ತೇಜಸ್ವಿನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಹಿಂದೆ ಅವರ ಅಧಿಕಾರ ಅವಧಿ ಜೂನ್ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿತ್ತು. ಈ ಹಿಂದೆ ಕನಕಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ರ್ಪಧಿಸಿ ಮಾಜಿ ಪ್ರಧಾನಿ ದೇವೇಗೌಡರನ್ನು ಪರಾಭವಗೊಳಿಸಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅವರನ್ನು ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಆಯ್ಕೆ ಮಾಡಲಾಗಿತ್ತು.