Sunday, May 19, 2024
Homeರಾಜಕೀಯ'ಕೈ'ಕಮಾಂಡ್‍ಗೆ ಟಿಕೆಟ್ ತಲೆನೋವು, ಶಾಸಕರು, ಸಚಿವರ ರಾಜೀನಾಮೆ ಬೆದರಿಕೆ

‘ಕೈ’ಕಮಾಂಡ್‍ಗೆ ಟಿಕೆಟ್ ತಲೆನೋವು, ಶಾಸಕರು, ಸಚಿವರ ರಾಜೀನಾಮೆ ಬೆದರಿಕೆ

ಬೆಂಗಳೂರು, ಮಾ.27- ಚಿನ್ನದನಾಡು ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಕಾಂಗ್ರೆಸ್ ಹೈಕಮಾಂಡ್‍ಗೆ ತೀವ್ರ ತಲೆ ನೋವಾಗಿದ್ದು, ಬಣರಾಜಕೀಯ ನಿಭಾಯಿಸಲಾಗದೆ ರಾಜ್ಯ ಹಾಗೂ ರಾಷ್ಟ್ರ ನಾಯಕರು ಹೈರಾಣಾಗಿದ್ದಾರೆ. ತಮ್ಮ ಕುಟುಂಬಕ್ಕೆ ಟಿಕೆಟ್ ನೀಡದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜ್ಯ ಪ್ರವಾಸ ಮಾಡುವುದಾಗಿ ಸಚಿವ ಮುನಿಯಪ್ಪ ಬೆದರಿಕೆ ಹಾಕಿದ ಬೆನ್ನಲ್ಲೆ, ತಿರುಗಿ ಬಿದ್ದಿರಿವ ವಿರೋಧಿ ಬಣದ ಇಬ್ಬರು ವಿಧಾನ ಪರಿಷತ್ ಸದಸ್ಯರು, ಒಬ್ಬ ಶಾಸಕರು ರಾಜೀನಾಮೆಗೆ ಮುಂದಾಗಿದ್ದಾರೆ.

ಹೀಗಾಗಿ ಕೋಲಾರ ಜಿಲ್ಲೆಯ ರಾಜಕಾರಣ ಸಂಘರ್ಷಕ್ಕೆ ತಿರುಗಿದೆ. ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ಇಂದು ಬೆಳಗ್ಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ, ಕೋಲಾರ ಕ್ಷೇತ್ರದಿಂದ ತಮ್ಮ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇಲ್ಲವಾದರೆ ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಇದಕ್ಕೆ ಪ್ರತಿತಂತ್ರವಾಗಿ ಜಿಲ್ಲೆ ಇಬ್ಬರು ವಿಧಾನಪರಿಷತ್ ಸದಸ್ಯರಾದ ನಸೀರ್ ಅಹಮ್ಮದ್ ಮತ್ತು ಅನಿಲ್ ಕುಮಾರ್ ಕೂಡ ರಾಜೀನಾಮೆಗೆ ಮುಂದಾಗಿದ್ದಾರೆ. ನಸೀರ್ ಅಹಮದ್ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದು, ಸಂಪುಟ ದರ್ಜೆ ಸ್ಥಾನಮಾನ ಹೊಂದಿದ್ದಾರೆ.

ಕೋಲಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೊತ್ತನೂರು ಮಂಜುನಾಥ್ ಬಹಿರಂಗ ಹೇಳಿಕೆ ನೀಡಿದ್ದು, ಕೋಲಾರ ಜಿಲ್ಲೆಯಲ್ಲಿ ಸಮರ್ಥ ಅಭ್ಯರ್ಥಿಗೆ ಅವಕಾಶ ನೀಡಬೇಕು ಎಂಬುದು ನಮ್ಮ ಒತ್ತಡವಾಗಿತ್ತು. ಬಲಗೈ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ನಾವು ಮನವಿ ಮಾಡಿದ್ದೇವು. ಆದರೆ ಅದಕ್ಕೆ ನಿರಾಕರಣೆ ಕಂಡು ಬಂದಿದೆ.

ಈ ನಡುವೆ ಮುನಿಯಪ್ಪ ಅವರ ಕುಟುಂಬಕ್ಕೆ ಟಿಕೆಟ್ ಕೊಡುವುದು ನಮಗೆ ಒಪ್ಪಿತವಲ್ಲ. ಹಲವು ಬಾರಿ ನಮ್ಮ ಅಭಿಪ್ರಾಯ ಹೇಳಿದ್ದೇವೆ. ಬರೀ ಬಾಯಿ ಮಾತಿನ ಹೇಳಿಕೆ ಪ್ರಯೋಜನ ಇಲ್ಲ. ಅದಕ್ಕಾಗಿ ಇಂದು 12 ಗಂಟೆಗೆ ಬೆಂಗಳೂರಿಗೆ ಭೇಟಿ ನೀಡುತ್ತೇವೆ, ಅಲ್ಲಿ ಪಕ್ಷದ ಹಿರಿಯ ನಾಯಕರ ಜೊತೆ ಚರ್ಚೆ ಮಾಡಿ, ನಮ್ಮ ಬೇಡಿಕೆಗೆ ಮನ್ನಣೆ ಸಿಗದೆ ಇದ್ದರೆ ರಾಜೀನಾಮೆ ನೀಡುವುದು ಖಚಿತ. ಈಗಾಗಲೇ ಮಂಗಳೂರಿಗೆ ವಿಮಾನದ ಟಿಕೆಟ್ ಬುಕ್ ಮಾಡಿದ್ದೇವೆ. ಅಲ್ಲಿಗೆ ತೆರಳಿ, ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕೆಕ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಕೋಲಾರದ ಬಣ ರಾಜಕೀಯ ದಿನೇ ದಿನೇ ಕೈ ಮೀರಿ ಹೋಗುತ್ತಿದೆ. ಮುನಿಯಪ್ಪ ಅವರ ಒತ್ತಡವನ್ನು ನಿಭಾಯಿಸಲಾಗದೆ ರಾಜ್ಯದ ಎಲ್ಲಾ ನಾಯಕರು ಹೈರಾಣಾಗಿದ್ದರು. ಕೊನೆಗೆ ಹೈಕಮಾಂಡ್‍ಗೆ ವರದಿ ನೀಡಿ ಕೈ ತೊಳೆದುಕೊಂಡಿದ್ದರು. 24 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್‍ಗೆ ಕೋಲಾರ, ಚಾಮರಾಜನಗರ ಮೀಸಲು ಕ್ಷೇತ್ರಗಳು ತಲೆ ಬಿಸಿಯಾಗಿವೆ. ಸಚಿವ ಕೆ.ಹೆಚ್.ಮುನಿಯಪ್ಪ ತಮ್ಮ ಕುಟುಂಬ ಅದರಲ್ಲೂ ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಕೋಲಾರದಿಂದ ಸ್ರ್ಪಧಿಸಲು ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಮಾಜಿ ಶಾಸಕ ರಮೇಶ್ ಕುಮಾರ್ ಹಾಲಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ನೇತೃತ್ವದ ಬಣ ಮುನಿಯಪ್ಪ ಅವರ ಕುಟುಂಬ ಹೊರತು ಪಡಿಸಿ ಬೇರೆ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸಿಕೊಂಡು ಬರುವುದಾಗಿ ಹೈಕಮಾಂಡ್ ಮುಂದೆ ತಮ್ಮ ಅಭಿಪ್ರಾಯ ತಿಳಿಸಿದೆ.

ರಮೇಶ್ ಕುಮಾರ್ ಬಣ ರಾಜ್ಯ ಸಭೆಯ ಮಾಜಿ ಸದಸ್ಯ ಎಲ್.ಹನುಮಂತಯ್ಯ ಅವರಿಗೆ ಅಥವಾ ಬಲಗೈ ಸಮುದಾಯಕ್ಕೆ ಟಿಕೆಟ್ ನೀಡುವಂತಾದರೆ ಎಂ.ಸಿ.ಮುನಿಯಪ್ಪ ಅಥವಾ ಡಾ.ಬಿ.ಸಿ.ಮುದ್ದುಗಂಗಾಧರ್ ಅವರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ರಮೇಶ್ ಕುಮಾರ್ ಬಣ ದೆಹಲಿಗೂ ಹೋಗಿ ಹೈಕಮಾಂಡ್ ನಾಯಕರ ಮುಂದೆ ತಮ್ಮ ಅಭಿಪ್ರಾಯವನ್ನು ತಿಳಿಸಿ ಬಂದಿದ್ದರು. ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಡೆದ ಸಂಧಾನಸಭೆಯಲ್ಲೂ ಎರಡು ಬಣಗಳು ಹೊಂದಾಣಿಕೆಗೆ ಒಪ್ಪಿಕೊಂಡಿಲ್ಲ.

ಬಹುತೇಕ ಇಂದು ಸಂಜೆ ಅಥವಾ ನಾಳೆಯೊಳಗೆ ಬಾಕಿ ಇರುವ ನಾಲ್ಕು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಪ್ರಕಟಿಸಲಿದೆ ಎಂದು ಹೇಳಲಾಗುತ್ತಿದೆ. ಕೊನೆಯ ಕ್ಷಣದ ಕಸರತ್ತಾಗಿ ಎರಡು ಬಣದ ನಾಯಕರು ರಾಜೀನಾಮೆಯ ಅಸ್ತ್ರವನ್ನು ಪ್ರಯೋಗ ಮಾಡಿದ್ದಾರೆ.ಖರ್ಗೆ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಹೆಚ್.ಮುನಿಯಪ್ಪ, ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರೇ ಆದರು ನಾವೆಲ್ಲಾ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.

ನಾನು 7 ಬಾರಿ ಕೋಲಾರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದು ನಾನು ಒಂದು ಜಿಲ್ಲೆಗೆ ಸೀಮಿತವಾದ ನಾಯಕ ಅಲ್ಲಾ ನಾನು ಈ ರಾಜ್ಯದಾದ್ಯಂತ ನನ್ನದೇ ಆದ ಕಾರ್ಯಕರ್ತರನ್ನು ಹೊಂದಿದ್ದೇನೆ . ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಚಿವರಾದ ಡಾ.ಎಂಸಿ ಸುಧಾಕರ್,ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್ ಹಾಗೂ ಎಲ್ಲಾ ಶಾಸಕರು ನಾವು ಒಗ್ಗಟ್ಟಿ ನಿಂದ ಕೆಲಸ ಮಾಡಿ ಎರಡು ಕ್ಷೇತ್ರಗಳನ್ನು ಗೆಲ್ಲಸಿಕೊಂಡು ಬರುತ್ತೇವೆ ಎಂದು ನಾವು ಅಧ್ಯಕ್ಷರಾದ ಡಿಕೆ.ಶಿವಕುಮಾರ್, ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತು ಕೊಟ್ಟಿದ್ದೇವೆ. ಹೈಕಮಾಂಡ್ ಯಾವ ಅಭ್ಯರ್ಥಿಯನ್ನು ನೀಡಿದರು ನಾವುಕೆಲಸ ಮಾಡಲು ಬದ್ದರಾಗಿದ್ದೇವೆ ಎಂದರು. ಕಾಂಗ್ರೆಸ್ ಪಕ್ಷವು ರಾಜ್ಯದ ಜನರಿಗೆ ನೀಡಿರುವ 5 ಗ್ಯಾರಂಟಿ ಯೋಜನೆಗಳ ಫಲಪ್ರದವಾಗಿ ನಮಗೆ ಜನರು ಆಶೀರ್ವಾದ ಮಾಡುತ್ತಾರೆ ಎಂದರು.

RELATED ARTICLES

Latest News