Friday, November 22, 2024
Homeರಾಜಕೀಯ | Politicsಇಂದು ಸಂಜೆ ಬಾಕಿ ಉಳಿದ 4 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ..?

ಇಂದು ಸಂಜೆ ಬಾಕಿ ಉಳಿದ 4 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ..?

ಬೆಂಗಳೂರು,ಮಾ.29- ಸರಣಿ ಸಭೆಗಳು ಹಾಗೂ ಸತತ ಮನವೊಲಿಕೆ ಬಳಿಕ ಬಾಕಿ ಇರುವ ನಾಲ್ಕು ಕ್ಷೇತ್ರಗಳಿಗೆ ಕಾಂಗ್ರೆಸ್ ಇಂದು ಸಂಜೆ ಅಥವಾ ನಾಳೆಯೊಳಗಾಗಿ ಅಭ್ಯರ್ಥಿಗಳನ್ನು ಪ್ರಕಟಿಸಲಿದೆ. ಬಳ್ಳಾರಿಗೆ ಇ.ತುಕಾರಾಂ, ಚಾಮರಾಜನಗರಕ್ಕೆ ಸುನಿಲ್ ಬೋಸ್, ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯ, ಕೋಲಾರಕ್ಕೆ ಕೆ.ವಿ.ಗೌತಮ್ ಅಭ್ಯರ್ಥಿಗಳಾಗುವ ಸಾಧ್ಯತೆಗಳು ಹೆಚ್ಚಿವೆ.

ಕೋಲಾರದಲ್ಲಿ ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಮತ್ತು ಸಚಿವ ಕೆ.ಎಚ್.ಮುನಿಯಪ್ಪ ಬಣದ ನಡುವಿನ ಸಂಘರ್ಷದಿಂದಾಗಿ ಹೊಸ ಅಭ್ಯರ್ಥಿಯ ಹುಡುಕಾಟ ನಡೆದಿತ್ತು. ಅಂತಿಮವಾಗಿ ಬೆಂಗಳೂರಿನ ಕೇಂದ್ರ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ವಿ.ಗೌತಮ್ ಅವರನ್ನು ಕಣಕ್ಕಿಳಿಸುವ ಮೂಲಕ ಎರಡು ಬಣಗಳನ್ನು ಸಮಾಧಾನಪಡಿಸುವ ಪ್ರಯತ್ನ ನಡೆದಿದೆ.

ರಾಜ್ಯದಲ್ಲಿ 5 ಮೀಸಲು ಕ್ಷೇತ್ರಗಳ ಪೈಕಿ ಈಗಾಗಲೇ ಎರಡು ಕ್ಷೇತ್ರಗಳಿಗೆ ಬಲಗೈ ಸಮುದಾಯಕ್ಕೆ ಅವಕಾಶ ನೀಡಲಾಗಿದೆ. ಬಿಜಾಪುರದಲ್ಲಿ ರಾಜು ಅಲಗೂರು, ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಟಿಕೆಟ್ ನೀಡಲಾಗಿದೆ. ಚಿತ್ರದುರ್ಗದಲ್ಲಿ ಎಡಗೈ ಸಮುದಾಯದ ಚಂದ್ರಪ್ಪ ಅವರಿಗೆ ಟಿಕೆಟ್ ದೊರೆತಿದೆ. ಬಾಕಿ ಇರುವ ಚಾಮರಾಜನಗರ ಹಾಗೂ ಕೋಲಾರ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಬಾಕಿ ಉಳಿದಿದೆ.

ಈ ಎರಡು ಕ್ಷೇತ್ರಗಳಲ್ಲಿ ಒಂದರಲ್ಲಿ ಎಡಗೈ ಸಮುದಾಯಕ್ಕೆ ಅವಕಾಶ ನೀಡಬೇಕು ಎಂಬುದು ಮುನಿಯಪ್ಪ ಅವರ ಬೇಡಿಕೆಯಾಗಿತ್ತು. ಅದರಲ್ಲೂ ತಮ್ಮ ಕುಟುಂಬಕ್ಕೆ ನೀಡಬೇಕು ಎಂಬುದು ಮುನಿಯಪ್ಪ ಅವರ ಒತ್ತಡ. ಇದಕ್ಕೆ ರಮೇಶ್‍ಕುಮಾರ್‍ರವರ ಬಣ ವಿರೋಧ ವ್ಯಕ್ತಪಡಿಸಿದ್ದರಿಂದಾಗಿ ಹೊಸ ಅಭ್ಯರ್ಥಿ ಅದರಲ್ಲೂ ಎಡಗೈ ಸಮುದಾಯದ ಕೆ.ವಿ.ಗೌತಮ್ ಅವರನ್ನೇ ಕೋಲಾರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ.

ನಿನ್ನೆ ಕೋಲಾರ ಜಿಲ್ಲೆಯ ನಾಯಕರ ಸಂಧಾನ ಸಭೆಗೆ ಸಚಿವ ಮುನಿಯಪ್ಪ ಅವರಿಗೆ ಆಹ್ವಾನ ನೀಡಿರಲಿಲ್ಲ. ಅವರನ್ನು ಹೊರಗಿಟ್ಟು ನಡೆಸಲಾದ ಸಭೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾರಿಗೇ ಟಿಕೆಟ್ ನೀಡಿದರೂ ಅದನ್ನು ಜಿಲ್ಲೆಯ ಎಲ್ಲಾ ನಾಯಕರು ಒಪ್ಪಿಕೊಂಡು ಗೆಲ್ಲಿಸಿಕೊಂಡು ಬರಬೇಕು ಎಂದು ಸೂಚಿಸಲಾಗಿತ್ತು. ಇದರ ಪ್ರಕಾರ, ಗೌತಮ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ತೀವ್ರ ವಿರೋಧದ ನಡುವೆಯೂ ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯ ಅವರಿಗೆ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರ ಆಕ್ಷೇಪದ ನಡುವೆಯೂ ಸಂಡೂರು ಶಾಸಕ ಇ.ತುಕಾರಾಂ ಅವರನ್ನು ಬಳ್ಳಾರಿ ಕ್ಷೇತ್ರಕ್ಕೆ ಅಭ್ಯರ್ಥಿ ಮಾಡುವ ಸಾಧ್ಯತೆಯಿದೆ.

ಕೋಲಾರದಲ್ಲಿ ಎಡಗೈ ಸಮುದಾಯಕ್ಕೆ ಅವಕಾಶ ನೀಡಿದ್ದರಿಂದಾಗಿ ಚಾಮರಾಜನಗರದಲ್ಲಿ ಬಲಗೈ ಸಮುದಾಯದ ಸಚಿವ ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್‍ರವರ ದಾರಿ ಸುಗಮವಾಗಿದೆ. ಮಾಜಿ ಶಾಸಕ ನಾಗರಾಜ್ ಆಕಾಂಕ್ಷಿಯಾಗಿದ್ದರೂ ಕೂಡ ಅದನ್ನು ಲೆಕ್ಕಿಸದೆ ಕಾಂಗ್ರೆಸ್ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ.

RELATED ARTICLES

Latest News