Sunday, May 5, 2024
Homeರಾಜ್ಯಕಳೆದ ಬಾರಿ ರಾಜ್ಯದಲ್ಲಿ ಕಣಕ್ಕಿಳಿದು ಠೇವಣಿ ಕಳೆದುಕೊಂಡವರೆಷ್ಟು..?

ಕಳೆದ ಬಾರಿ ರಾಜ್ಯದಲ್ಲಿ ಕಣಕ್ಕಿಳಿದು ಠೇವಣಿ ಕಳೆದುಕೊಂಡವರೆಷ್ಟು..?

ಬೆಂಗಳೂರು,ಮಾ.29- ರಾಜ್ಯದಲ್ಲಿ ಲೋಕಸಮರದ ಅಖಾಡ ರಂಗೇರುತ್ತಿದೆ. ಈಗಾಗಲೇ ಮೈತ್ರಿ ಪಕ್ಷ ಬಿಜೆಪಿ-ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಲೋಕಸಮರದ ಗೆಲುವಿಗಾಗಿ ತಮ್ಮದೇ ರಣತಂತ್ರ ರೂಪಿಸುತ್ತಿವೆ. ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 478 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಆದರೆ ಇದರಲ್ಲಿ ಬಹುತೇಕರು ಠೇವಣಿ ಕಳೆದುಕೊಂಡಿದ್ದೇ ಹೆಚ್ಚು.

ಲೋಕಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳ ಘೋಷಣೆಯ ಪ್ರಕ್ರಿಯೆಯಲ್ಲಿ ತೊಡಗಿವೆ. ರಾಜ್ಯದಲ್ಲೂ 28 ಕ್ಷೇತ್ರಗಳಲ್ಲಿ ಲೋಕ ಸಮರದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಾರಿಯೂ ರಾಜ್ಯದಲ್ಲಿ ದ್ವಿಪಕ್ಷೀಯ ಹೋರಾಟ ಗೋಚರಿಸಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇದೆ. ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮತ್ತು ಬಿಜೆಪಿ ನಡುವೆ ಚುನಾವಣಾ ಹೋರಾಟ ನಡೆದಿತ್ತು.

2019ರಲ್ಲಿ ರಾಜ್ಯದಲ್ಲಿ ನಡೆದ ಲೋಕ ಸಮರದಲ್ಲಿ ಬಿಜೆಪಿ 25 ಸ್ಥಾನ ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಒಂದು ಸ್ಥಾನ ಹಾಗೂ ಒಂದು ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಕಳೆದ ಬಾರಿ ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಹಲವು ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಿದ್ದರು. ರಾಜ್ಯದ 28 ಕ್ಷೇತ್ರಗಳಲ್ಲಿ ಕಳೆದ ಬಾರಿ ಒಟ್ಟು 478 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಈ ಪೈಕಿ ಶೇ.88 ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡಿದ್ದಾರೆ.

ಠೇವಣಿ ಮುಟ್ಟುಗೋಲು ಎಂದರೇನು?:
ಲೋಕಸಭೆ ಚುನಾವಣೆಗೆ ಸ್ರ್ಪಧಿಸುವ ಪ್ರತೀ ಅಭ್ಯರ್ಥಿ ಭದ್ರತಾ ಠೇವಣಿ ಮೊತ್ತವನ್ನು ನಾಮಪತ್ರ ಸಲ್ಲಿಕೆ ವೇಳೆ ಕ್ಷೇತ್ರದ ಚುನಾವಣಾಕಾರಿಗೆ ಪಾವತಿಸಬೇಕು. ಪ್ರತೀ ಅಭ್ಯರ್ಥಿ 25 ಸಾವಿರ ರೂ. ಭದ್ರತಾ ಠೇವಣಿ ಇಡಬೇಕು.

ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ 25,000 ರೂ. ಭದ್ರತಾ ಠೇವಣಿ ಪಾವತಿಸಬೇಕು. ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳು 12,500 ರೂ. ಠೇವಣಿ ಪಾವತಿಸಬೇಕು. ಅಭ್ಯರ್ಥಿ ತಾನು ಸ್ರ್ಪಧಿಸಿರುವ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಅರ್ಹ ಮತಗಳ 1/6ಗಿಂತ ಹೆಚ್ಚಿಗೆ ಮತ ಗಳಿಸಬೇಕು. ಅಷ್ಟು ಮತಗಳಿಸಿದರೆ ಚುನಾವಣಾಧಿಕಾರಿಗೆ ಪಾವತಿಸಿದ ಠೇವಣಿ ಹಣ ಅಭ್ಯರ್ಥಿಗೆ ಮರಳಿಸಲಾಗುತ್ತದೆ.

ಒಂದು ವೇಳೆ ಅಭ್ಯರ್ಥಿ 1/6ಕ್ಕಿಂತ ಕಡಿಮೆ ಮತಗಳಿಸಿದರೆ, ಆತನ ಠೇವಣಿಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕುತ್ತದೆ. ಅಂದರೆ, ಠೇವಣಿ ಮೊತ್ತವನ್ನು ಅಭ್ಯರ್ಥಿಗಳಿಗೆ ಮರುಪಾವತಿಸುವುದಿಲ್ಲ. ಅಭ್ಯರ್ಥಿಯೊಬ್ಬನ ಚುನಾವಣಾ ಠೇವಣಿ ಮುಟ್ಟುಗೋಲಾದರೆ ಆತನನ್ನು ಕ್ಷೇತ್ರದ ಜನರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಅರ್ಥ. ಆತ ಹೀನಾಯ ಸೋಲು ಕಂಡಿದ್ದಾನೆ ಎಂಬುದು ಗೊತ್ತಾಗುತ್ತದೆ.

ರಾಜ್ಯದಲ್ಲಿ ಠೇವಣಿ ಕಳೆದುಕೊಂಡವರೆಷ್ಟು?:
2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಒಟ್ಟು 478 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಈ ಪೈಕಿ 422 ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡಿದ್ದಾರೆ. ಅಂದರೆ, ಸ್ಪರ್ಧಿಸಿದ ಅಭ್ಯರ್ಥಿಗಳಲ್ಲಿ ಶೇ.88ರಷ್ಟು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಚುನಾವಣಾ ಆಯೋಗದ ಅಂಕಿ ಅಂಶದಂತೆ ರಾಜ್ಯದಲ್ಲಿ ಲೋಕಸಮರದ ವೇಳೆ ಸ್ರ್ಪಸಿದ್ದ 78 ವಿವಿಧ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಪೈಕಿ 30 ಮಂದಿ ತಮ್ಮ ಠೇವಣಿ ಕಳೆದುಕೊಂಡಿದ್ದಾರೆ. ಮಾನ್ಯತೆ ಪಡೆದ, ದಾಯಿತವಲ್ಲದ ಪಕ್ಷಗಳಿಂದ ಕಣಕ್ಕಿಳಿದಿದ್ದ ಎಲ್ಲಾ 128 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಇನ್ನು ಕಣದಲ್ಲಿ ನಿಂತಿದ್ದ 265 ಪಕ್ಷೇತರ ಅಭ್ಯರ್ಥಿಗಳ ಪೈಕಿ 264 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.

ಕ್ಷೇತ್ರವಾರು ಠೇವಣಿ ಮುಟ್ಟುಗೋಲು ಎಷ್ಟಿದೆ?:
ಚಿಕ್ಕೋಡಿ ಕ್ಷೇತ್ರದಲ್ಲಿ ಕಳೆದ ಲೋಕಸಮರದ ವೇಳೆ ಒಟ್ಟು 11 ಅಭ್ಯರ್ಥಿಗಳು ಸ್ರ್ಪಸಿದ್ದರು. ಈ ಪೈಕಿ 9 ಅಭ್ಯರ್ಥಿಗಳ ಠೇವಣಿ ಮುಟ್ಟುಗೋಲಾಗಿದೆ. ಇನ್ನು ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ 57 ಅಭ್ಯರ್ಥಿಗಳು ಕಣದಲ್ಲಿದ್ದರು, ಈ ಪೈಕಿ 55 ಮಂದಿ ಠೇವಣಿ ಕಳೆದುಕೊಂಡಿದ್ದರು. ಬಾಗಲಕೋಟೆ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳ ಪೈಕಿ 12 ಮಂದಿ ಠೇವಣಿ ಕಳೆದುಕೊಂಡಿದ್ದರು. ಬಿಜಾಪುರ (ಎಸ್‍ಸಿ) ಕ್ಷೇತ್ರದಲ್ಲಿ ನಿಂತಿದ್ದ 12 ಅಭ್ಯರ್ಥಿಗಳಲ್ಲಿ 10 ಮಂದಿಯ ಠೇವಣಿ ಮುಟ್ಟುಗೋಲಾಗಿದೆ. ಗುಲ್ಬರ್ಗಾ (ಎಸ್‍ಸಿ) ಕ್ಷೇತ್ರದಲ್ಲಿ 12 ಅಭ್ಯರ್ಥಿಗಳ ಪೈಕಿ 10 ಮಂದಿ ಠೇವಣಿ ಕಳೆದುಕೊಂಡಿದ್ದರು.

ರಾಯಚೂರು (ಎಸ್‍ಟಿ) ಕ್ಷೇತ್ರದಲ್ಲಿ ಕಣದಲ್ಲಿದ್ದ 5 ಅಭ್ಯರ್ಥಿಗಳಲ್ಲಿ 3 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಬೀದರ್ ಕ್ಷೇತ್ರದಲ್ಲಿ ಕಣದಲ್ಲಿದ್ದ 22 ಅಭ್ಯರ್ಥಿಗಳ ಪೈಕಿ 20 ಮಂದಿ ಠೇವಣಿ ಕಳೆದುಕೊಂಡಿದ್ದರು. ಕೊಪ್ಪಳ ಕ್ಷೇತ್ರದಲ್ಲಿನ 14 ಅಭ್ಯರ್ಥಿಗಳಲ್ಲಿ 12 ಮಂದಿ ಠೇವಣಿ ಕಳೆದುಕೊಂಡಿದ್ದರು. ಬಳ್ಳಾರಿ (ಎಸ್‍ಟಿ) ಕ್ಷೇತ್ರದಲ್ಲಿ ನಿಂತಿದ್ದ 11 ಅಭ್ಯರ್ಥಿಗಳಲ್ಲಿ 9 ಅಭ್ಯರ್ಥಿಗಳ ಠೇವಣಿ ಮುಟ್ಟುಗೋಲಾಗಿದೆ.

ಹಾವೇರಿ ಕ್ಷೇತ್ರದಲ್ಲಿ ಕಣದಲ್ಲಿದ್ದ 10 ಅಭ್ಯರ್ಥಿಗಳ ಪೈಕಿ 8 ಅಭ್ಯರ್ಥಿಗಳ ಠೇವಣಿ ಮುಟ್ಟುಗೋಲಾಗಿದೆ. ಧಾರವಾಡ ಕ್ಷೇತ್ರದಲ್ಲಿ ಕಣದಲ್ಲಿದ್ದ 19 ಅಭ್ಯರ್ಥಿಗಳ ಪೈಕಿ 17 ಮಂದಿ ಠೇವಣಿ ಕಳೆದುಕೊಂಡಿದ್ದರು. ಉತ್ತರ ಕನ್ನಡ ಕ್ಷೇತ್ರದಲ್ಲಿ ಕಣದಲ್ಲಿದ್ದ 13 ಅಭ್ಯರ್ಥಿಗಳ ಪೈಕಿ 11 ಮಂದಿ ಠೇವಣಿ ಕಳೆದುಕೊಂಡಿದ್ದರು. ದಾವಣಗೆರೆ ಕ್ಷೇತ್ರದಲ್ಲಿ ಕಣದಲ್ಲಿದ್ದ 25 ಅಭ್ಯರ್ಥಿಗಳ ಪೈಕಿ 23 ಮಂದಿ ಠೇವಣಿ ಕಳೆದುಕೊಂಡಿದ್ದರು. ಶಿವಮೊಗ್ಗ ಕ್ಷೇತ್ರದಲ್ಲಿ ಕಣದಲ್ಲಿದ್ದ 12 ಅಭ್ಯರ್ಥಿಗಳ ಪೈಕಿ 10 ಮಂದಿ ಠೇವಣಿ ಕಳೆದುಕೊಂಡಿದ್ದರು.

ಇನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಣದಲ್ಲಿದ್ದ 12 ಅಭ್ಯರ್ಥಿಗಳ ಪೈಕಿ 10 ಮಂದಿ ಠೇವಣಿ ಕಳೆದುಕೊಂಡಿದ್ದರು. ಹಾಸನ ಕ್ಷೇತ್ರದಲ್ಲಿ ಕಣದಲ್ಲಿದ್ದ 6 ಅಭ್ಯರ್ಥಿಗಳ ಪೈಕಿ 4 ಮಂದಿ ಠೇವಣಿ ಕಳೆದುಕೊಂಡಿದ್ದರು. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಣದಲ್ಲಿದ್ದ 13 ಅಭ್ಯರ್ಥಿಗಳ ಪೈಕಿ 11 ಮಂದಿ ಠೇವಣಿ ಕಳೆದುಕೊಂಡಿದ್ದರು. ಚಿತ್ರದುರ್ಗ (ಎಸ್‍ಸಿ) ಕ್ಷೇತ್ರದಲ್ಲಿ 19 ಅಭ್ಯರ್ಥಿಗಳು ಕಣದಲ್ಲಿದ್ದರು, ಈ ಪೈಕಿ 17 ಮಂದಿ ಠೇವಣಿ ಕಳೆದುಕೊಂಡಿದ್ದರು.

ತುಮಕೂರು ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಕಣದಲ್ಲಿದ್ದರು, ಈ ಪೈಕಿ 13 ಮಂದಿ ಠೇವಣಿ ಕಳೆದುಕೊಂಡಿದ್ದರು. ಮಂಡ್ಯ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳು ಕಣದಲ್ಲಿದ್ದರು, ಈ ಪೈಕಿ 20 ಮಂದಿ ಠೇವಣಿ ಕಳೆದುಕೊಂಡಿದ್ದರು. ಮೈಸೂರು ಕ್ಷೇತ್ರದಲ್ಲಿ 22 ಅಭ್ಯರ್ಥಿಗಳು ಕಣದಲ್ಲಿದ್ದರು, ಈ ಪೈಕಿ 20 ಮಂದಿ ಠೇವಣಿ ಕಳೆದುಕೊಂಡಿದ್ದರು. ಚಾಮರಾಜನಗರ (ಎಸ್‍ಸಿ) ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದರು, ಈ ಪೈಕಿ 8 ಮಂದಿ ಠೇವಣಿ ಕಳೆದುಕೊಂಡಿದ್ದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಣದಲ್ಲಿದ್ದ 15 ಅಭ್ಯರ್ಥಿಗಳ ಪೈಕಿ 13 ಮಂದಿ ಠೇವಣಿ ಕಳೆದುಕೊಂಡಿದ್ದರು. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಣದಲ್ಲಿದ್ದ 31 ಅಭ್ಯರ್ಥಿಗಳ ಪೈಕಿ 29 ಮಂದಿ ಠೇವಣಿ ಕಳೆದುಕೊಂಡಿದ್ದರು. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಕಣದಲ್ಲಿದ್ದ 22 ಅಭ್ಯರ್ಥಿಗಳ ಪೈಕಿ 20 ಮಂದಿ ಠೇವಣಿ ಕಳೆದುಕೊಂಡಿದ್ದರು. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಣದಲ್ಲಿದ್ದ 25 ಅಭ್ಯರ್ಥಿಗಳ ಪೈಕಿ 23 ಮಂದಿ ಠೇವಣಿ ಕಳೆದುಕೊಂಡಿದ್ದರು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಣದಲ್ಲಿದ್ದ 15 ಅಭ್ಯರ್ಥಿಗಳ ಪೈಕಿ 13 ಮಂದಿ ಠೇವಣಿ ಕಳೆದುಕೊಂಡಿದ್ದರು. ಕೋಲಾರ (ಎಸ್‍ಸಿ) ಕ್ಷೇತ್ರದಲ್ಲಿ ಕಣದಲ್ಲಿದ್ದ 14 ಅಭ್ಯರ್ಥಿಗಳ ಪೈಕಿ 12 ಮಂದಿ ಠೇವಣಿ ಕಳೆದುಕೊಂಡಿದ್ದರು.

RELATED ARTICLES

Latest News