Saturday, May 4, 2024
Homeರಾಜ್ಯಇಂದು ಬರಹಗಾರ, ಕರ್ನಾಟಕ ಏಕೀಕರಣ ಹೋರಾಟಗಾರ ಹುಲ್ಲೂರು ಶ್ರೀನಿವಾಸ ಜೋಯಿಸರ ಜನ್ಮದಿನ

ಇಂದು ಬರಹಗಾರ, ಕರ್ನಾಟಕ ಏಕೀಕರಣ ಹೋರಾಟಗಾರ ಹುಲ್ಲೂರು ಶ್ರೀನಿವಾಸ ಜೋಯಿಸರ ಜನ್ಮದಿನ

ನಮ್ಮ ನಾಡಿನ ಮಹಾನ್ ಸಂಶೋಧಕ, ರಾಷ್ಟ್ರಪ್ರೇಮಿ, ಕರ್ನಾಟಕ ಏಕೀಕರಣಕ್ಕೆ ದುಡಿದ, ಪುರೋಹಿತ ಮನೆತನಕ್ಕೆ ಸೇರಿದ ಹುಲ್ಲೂರು ಶ್ರೀನಿವಾಸ ಜೋಯಿಸರು ಮಾರ್ಚ್ 29, 1892ರಲ್ಲಿ ಜನಿಸಿದರು. ಅವರ ಕುಟುಂಬದ ಹಿರಿಯರು ಸುಮಾರು ಮೂರು ನೂರು ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯ ಕೊಟ್ಟೂರು ಬಳಿಯ ಅಂಬಳೆ ಗ್ರಾಮದಿಂದ ಚಿತ್ರದುರ್ಗ ಜಿಲ್ಲೆಯ ಹುಲ್ಲೂರಿಗೆ ವಲಸೆ ಬಂದವರು.

ತಂದೆ ಪಾಂಡುರಂಗ ಜೋಯಿಸ್, ತಾಯಿ ಪಾರ್ವತಮ್ಮನವರು. ಶ್ರೀನಿವಾಸ ಜೋಯಿಸರು ಪ್ರಾಥಮಿಕ ಶಿಕ್ಷಣ ಪಡೆದದು ಚಿತ್ರದುರ್ಗದಲ್ಲಿ. ಮೆಟ್ರಿಕ್ ಉತ್ತೀರ್ಣರಾದ ಬಳಿಕ ಕೆಲಕಾಲ ನೌಕರಿಯಲ್ಲಿದ್ದರು. ನಂತರದಲ್ಲಿ ಕಾನೂನು ಪದವಿ ಪಡೆದು ವಕೀಲಿ ವೃತ್ತಿ ಆರಂಭಿಸಿದರು.ಶ್ರೀನಿವಾಸ ಜೋಯಿಸರು ವೃತ್ತಿಯಲ್ಲಿ ವಕೀಲರಾಗಿದ್ದರೂ ಅಧ್ಯಯನ ಶೀಲರಾಗಿದ್ದು, ಇತಿಹಾಸ ಸಂಶೋಧನೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದರು. ಅವರು ಕರ್ನಾಟಕ ಏಕೀಕರಣ, ಸ್ವಾತಂತ್ರ್ಯ ಹೋರಾಟಗಳಲ್ಲೂ ಸಕ್ರಿಯರಾಗಿ ಪಾಲ್ಗೊಂಡಿದ್ದರು.

ಚಿತ್ರದುರ್ಗದ ಇತಿಹಾಸದ ಜೊತೆಗೆ ಕರ್ನಾಟಕದ ಇತಿಹಾಸದ ಬಗ್ಗೆ ನೂರಾರು ಲೇಖನಗಳನ್ನು ಬರೆದಿದ್ದಾರೆ. ಐತಿಹಾಸಿಕ ಸ್ಥಳಗಳು, ವ್ಯಕ್ತಿಗಳು, ಘಟನೆಗೆ ಸಂಬಂಸಿದಂತೆ, ಭಾಷೆ, ಧರ್ಮ, ಸಂಸ್ಕೃತಿ, ಶೌರ್ಯ, ಸಾತ್ವಿಕತೆ, ಆದರ್ಶ, ಉದಾರತೆ ಮೊದಲಾದ ಗುಣಗಳನ್ನು ಚಿತ್ರಿಸುವ ಉದ್ದೇಶದಿಂದ ಅವರು ಇಪ್ಪತ್ತೈದು ವರ್ಷಗಳ ಕಾಲ ಸುಮಾರು ಮುನ್ನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ.

ಹುಲ್ಲೂರು ಶ್ರೀನಿವಾಸ ಜೋಯಿಸರು ರಚಿಸಿರುವ ಹತ್ತು ಪುಸ್ತಕಗಳಲ್ಲಿ ಗಂಡುಗಲಿ ಕುಮಾರರಾಮ, ಕನ್ನಡ ಕಲಿ ಸಿರುಮನ ಚರಿತೆ ಬಹುಮುಖ್ಯವಾದುವು. ಇವರು ಸಂಪಾದಿಸಿ ಪ್ರಕಟಿಸಿದ ಚಿತ್ರದುರ್ಗದ ಬಖೈರು ಐತಿಹಾಸಿಕ ದಾಖಲೆಯ ಕೃತಿಯಾಗಿದೆ.ಹುಲ್ಲೂರು ಶ್ರೀನಿವಾಸ ಜೋಯಿಸರು ಪತ್ರಿಕಾ ವರದಿಗಾರರಾಗಿ, ಚಿತ್ರದುರ್ಗ ಜಿಲ್ಲೆಯ ಪತ್ರಿಕೋದ್ಯಮಿಗಳ ಸಂಘದ ಅಧ್ಯಕ್ಷರಾಗಿ, ಮೈಸೂರು ಸಂಸ್ಥಾನ ಪತ್ರಿಕೋದ್ಯೋಗಿಗಳ ಸಂಘದ, ಮೈಸೂರು ಪ್ರಾದೇಶಿಕ, ಐತಿಹಾಸಿಕ ಪತ್ರಗಳ ಶೋಧನಾ ಸಮಿತಿ, ಯೋಜನಾ ಸಮಿತಿಗಳ ಸದಸ್ಯರಾಗೂ ಸಹ ಮಹತ್ವದ ಸೇವೆ ಸಲ್ಲಿಸಿದ್ದಾರೆ.

2000 ವರ್ಷದಷ್ಟು ದೀರ್ಘ ಇತಿಹಾಸ ದಾಖಲಿಸಿರುವ ಹುಲ್ಲೂರು ಶ್ರೀನಿವಾಸ ಜೋಯಿಸರು, ತಾವೇ ಸ್ಥಾಪಿಸಿದ ಚಿತ್ರದುರ್ಗದ ಪ್ರಾಚ್ಯವಸ್ತು ಸಂಗ್ರಹಾಲಯದ ಗೌರವ ಕ್ಯೂರೇಟರಾಗಿಯೂ ಸೇವೆ ಸಲ್ಲಿಸಿದ್ದರು. ಈ ಮಹಾನ್ ಸಾಧಕರು 1956ರ ನವೆಂಬರ್ 08 ರಂದು ನಿಧನರಾದರು. ಶ್ರೀನಿವಾಸ ಜೋಯಿಸರಿಗೆ ಇತಿಹಾಸ ಸಂಶೋಧನಾ ಪ್ರಸಕ್ತ ಐತಿಹ್ಯ ವಿಮರ್ಶನ ವಿಚಕ್ಷಣ ಮುಂತಾದ ಬಿರುದು ಗೌರವ ಸಂದಿವೆ. ತ.ರಾ.ಸು. ಮತ್ತು ಜಿ.ವರದರಾಜರಾಯರು ಕ್ರಮವಾಗಿ ಹಂಸಗೀತೆ ಮತ್ತು ಕುಮಾರರಾಮನ ಸಾಂಗತ್ಯ ಕೃತಿಗಳನ್ನು ಶ್ರೀನಿವಾಸ ಜೋಯಿಸರಿಗೆ ಗೌರವ ಸಲ್ಲಿಸಿದ್ದಾರೆ.

RELATED ARTICLES

Latest News