ಬೆಂಗಳೂರು, ಮಾ.29- ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಬೆಂಗಳೂರು ಸಮೀಪವೇ ಬಾಂಬ್ ತಯಾರಿಸಲಾಗಿತ್ತು ಎಂಬುದು ಎನ್ಐಎ ತನಿಖೆಯಿಂದ ತಿಳಿದುಬಂದಿದೆ.ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಮುಜಾಮಿಲ್ ಷರೀಫ್ಎಂಬಾತನನ್ನು ಎನ್ಐಎ ನಿನ್ನೆ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಈ ಮಾಹಿತಿ ಲಭ್ಯವಾಗಿದೆ.
ಆರೋಪಿ ಮುಜಾಮಿಲ್ ಷರೀಫ್ ಈ ಸ್ಪೋಟಕ್ಕೆ ಸಂಚು ರೂಪಿಸಿ ಅದಕ್ಕೆ ಬೇಕಾದ ಸಾಮಗ್ರಿಗಳ ಸಾಗಾಟಕ್ಕೆ ನೆರವು ನೀಡಿರುವುದು ಸಹ ತನಿಖೆಯಿಂದ ಗೊತ್ತಾಗಿದೆ. ತಲೆ ಮರೆಸಿಕೊಂಡಿರುವ ಅಬ್ದುಲ್ ಮತಿನ್ ತಾಹ ಹಾಗೂ ಮುಸಾವೀರ್ ಕೆಫೆ ಸ್ಫೋಟದ ಪ್ರಮುಖ ಆರೋಪಿಗಳೆಂದು ಗೊತ್ತಾಗಿದೆ.
ಮಾ.1 ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸ್ಫೋಟಿಸಿ, ಪರಾರಿಯಾಗಿರುವ ಮುಸಾವೀರ್ ಪ್ರಕರಣದ ಪ್ರಮುಖ ಆರೋಪಿ. ಇದರ ಸೂತ್ರದಾರ ಅಬ್ದುಲ್ ಮತಿನ್ ತಾಹ ಎಂದು ಎನ್ಐಎ ತನಿಖೆಯಿಂದ ತಿಳಿದು ಬಂದಿದೆ. ತಲೆ ಮರೆಸಿಕೊಂಡಿರುವ ಇವರಿಬ್ಬರ ಬಂಧನಕ್ಕೆ ಎನ್ಐಎ ದೇಶದಾದ್ಯಂತ ಶೋಧ ಮುಂದುವರೆದಿದೆ.
ಆರೋಪಿ ಮುಜಾಮಿಲ್ ಷರೀಫ್ ಕಳೆದ ಒಂದೂವರೆ ವರ್ಷದ ಹಿಂದೆ ಬಸವೇಶ್ವರ ನಗರದ ಹಾವನೂರು ಸರ್ಕಲ್ ಬಳಿ ಚಿಕನ್ ಕೌಂಟಿ ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುತ್ತಿದ್ದ ಎಂಬ ವಿಷಯ ಎನ್ಐಎ ತನಿಖೆಯಿಂದ ಗೊತ್ತಾಗಿದೆ.
ಹೊರ ರಾಜ್ಯಗಳಿಗೆ ಪರಾರಿಯಾಗಿರುವ ಪ್ರಮುಖ ಇಬ್ಬರು ಆರೋಪಿಗಳಿಗೆ ಈ ಆರೋಪಿ ಸಹಕಾರ ನೀಡಿರುವುದು ಎನ್ಐಎ ತನಿಖೆಯಿಂದ ತಿಳಿದು ಬಂದಿದೆ. ಆರೋಪಿ ಮುಸಾವೀರ್ನ ಜವಾಬ್ದಾರಿಯನ್ನು ಮುಜಾಮಿಲ್ ಷರೀಫ್ ಹೊತ್ತುಕೊಂಡಿದ್ದನು ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿದ್ದು, ಸ್ಫೋಟದ ನಂತರ ಮುಸಾವೀರ್ ತಲೆಮರೆಸಿಕೊಳ್ಳಲು ಈ ಆರೋಪಿ ಸಾರಿಗೆ ವ್ಯವಸ್ಥೆ ಮಾಡಿರುವ ಸಂಗತಿ ಗೊತ್ತಾಗಿದೆ.
ಆರೋಪಿ ಅಬ್ದುಲ್ ಮತಿನ ತಾಹನ ಸೂಚನೆಯಂತೆ ಮುಜಾಮಿಲ್ ಷರೀಫ್ ಸ್ಫೋಟಕ್ಕೆ ಬೇಕಾದ ವಸ್ತುಗಳನ್ನು ಸಾಗಾಟ ಮಾಡಿರುವ ಮಾಹಿತಿ ಸಹ ಎನ್ಐಎ ಕಲೆಹಾಕಿದೆ.ಇತ್ತೀಚಿಗೆ ಎನ್ಐಎ ಕರ್ನಾಟಕದ 12 ಸ್ಥಳಗಳಲ್ಲಿ, ತಮಿಳುನಾಡಿನ 5 ಸ್ಥಳ ಹಾಗೂ ಉತ್ತರ ಪ್ರದೇಶದ ಒಂದು ಸೇರಿದಂತೆ ಒಟ್ಟು 18 ಸ್ಥಳಗಳಲ್ಲಿ ದಾಳಿ ನಡೆಸಿ ಹಲವು ಶಂಕಿತರನ್ನು ವಿಚಾರಣೆಗೆ ಒಳಪಡಿಸಿ, ಹಲವು ಮಾಹಿತಿಗಳನ್ನು ಕಲೆ ಹಾಕಿ ಪ್ರಮುಖ ಆರೋಪಿಗಳಿಗಾಗಿ ಶೋಧ ತೀವ್ರಗೊಳಿಸಿದೆ.