ಶಿವಮೊಗ್ಗ,ಮಾ.29- ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅವರ ಮಕ್ಕಳು ಆಪತ್ಬಾಂಧವರಲ್ಲ, ಆಸ್ತಿಯ ವಾರಸುದಾರರು ಮತ್ತು ಯಡಿಯೂರಪ್ಪನವರ ಹೆಸರಿನಲ್ಲಿ ಅಧಿಕಾರ ಪಡೆಯುವ ಉತ್ತರಾಧಿಕಾರಿಗಳಷ್ಟೇ ಎಂದು ಕಾಂಗ್ರೆಸ್ ಮುಖಂಡ ಆಯನೂರು ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಸಂಸದ ಬಿ.ವೈ.ರಾಘವೇಂದ್ರ ಅವರು ಕಾಂಗ್ರೆಸ್ನ ಸಂಸ್ಕøತಿಯನ್ನು ಪ್ರಶ್ನೆ ಮಾಡಿದ್ದಾರೆ. ಮೊದಲು ರಾಘವೇಂದ್ರರ ಸಂಸ್ಕøತಿ ಯಾವುದು ಎಂದು ಸ್ಪಷ್ಟಪಡಿಸಬೇಕಾಗಿದೆ ಎಂದರು.
ಬಿಜೆಪಿಯವರೇ ಹೇಳಿಕೊಳ್ಳುವಂತೆ ಅವರ ಪಕ್ಷದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ, ನನ್ನ ಎದೆ ಬಗೆದರೆ ಮೋದಿ ಕಾಣಿಸುತ್ತಾರೆ. ಯಡಿಯೂರಪ್ಪ ಅವರ ಎದೆಯಲ್ಲಿ ಒಂದು ಕಡೆ ಮಕ್ಕಳು, ಮತ್ತೊಂದು ಕಡೆ ಶೋಭಾ ಕಾಣಿಸುತ್ತಾರೆ ಎಂದು ಅಶ್ಲೀಲ ಹಾಗೂ ಅಪಾರ್ಥದ ಹೇಳಿಕೆ ನೀಡಿದ್ದಾರೆ.
ರಾಘವೇಂದ್ರ ಅವರು ಅದರ ವಿರುದ್ಧ ಈವರೆಗೂ ಒಂದೂ ಆಕ್ಷೇಪಣೆಯನ್ನೂ ಎತ್ತಿಲ್ಲ. ಇದು ಯಾವ ಸಂಸ್ಕøತಿ? ಎಂದು ಪ್ರಶ್ನಿಸಿದರು. ಹಿರಿಯ ಜೀವ ಯಡಿಯೂರಪ್ಪನವರು ಇಂತಹ ಆಪಾದನೆಯನ್ನು ಹೊತ್ತುಕೊಂಡು ಚುನಾವಣೆಯಲ್ಲಿ ಜನರ ಮುಂದೆ ಯಾವ ರೀತಿ ಮತ ಕೇಳಬೇಕು ಎಂಬ ನೋವಿನಲ್ಲಿದ್ದಾರೆ. ಮಕ್ಕಳಿಗೆ ಇದರ ಬಗ್ಗೆ ಚಿಂತೆಯಿಲ್ಲ. ಹಿಂದೆ ಬಿಜೆಪಿ ಯಡಿಯೂರಪ್ಪ ಅವರನ್ನು ಹೊರಹಾಕಿದಾಗ ಕೆಜೆಪಿ ಸ್ಥಾಪನೆಯಾಗಿತ್ತು. ಬಿ.ವೈ.ರಾಘವೇಂದ್ರ ಬಿಜೆಪಿ ಸಂಸದೀಯ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಿಲ್ಲದೆ ಕೆಜೆಪಿಗೆ ಬೆಂಬಲ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದರು.
ಇತ್ತೀಚೆಗೆ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಲಾಯಿತು. ಆಗ ಅವರು ಕಣ್ಣೀರು ಹಾಕಿಕೊಂಡು ಬಂದರು. ಯಾವ ಕಾರಣಕ್ಕೆ ಬಿಜೆಪಿ ಅರ್ಧದಲ್ಲೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೈಬಿಟ್ಟಿತ್ತು ಎಂಬ ಪ್ರಶ್ನೆಗೆ ಉತ್ತರ ನೀಡಬೇಕಿದೆ. ಅದಕ್ಕೆ ಯಾರು ಕಾರಣ, ಚೆಕ್ನಲ್ಲಿ ಹಣ ಪಡೆದವರು ಯಾರು, ಯಡಿಯೂರಪ್ಪನವರನ್ನು ಜೈಲಿಗೆ ಕಳುಹಿಸಿದ್ದು ಯಾರು? ಎಂಬ ಪ್ರಶ್ನೆಗಳಿಗೂ ಜನರಿಗೆ ಉತ್ತರ ಬೇಕಿದೆ ಎಂದು ಅವರು ಹೇಳಿದರು.