Saturday, April 27, 2024
Homeರಾಜ್ಯರಾಜ್ಯದಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ಬರಲಿದೆ : ವಿಜಯೇಂದ್ರ

ರಾಜ್ಯದಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ಬರಲಿದೆ : ವಿಜಯೇಂದ್ರ

ಬೆಂಗಳೂರು,ಮಾ.29- ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ವಿಶ್ವಾಸದಿಂದ ಕೆಲಸ ಮಾಡಿದರೆ ನಿರೀಕ್ಷೆಗೂ ಮೀರಿದ ಫಲಿತಾಂಶ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಮೈತ್ರಿ ಪಕ್ಷಗಳ ಸಮನ್ವಯ ಸಭೆ ಸಂದರ್ಭದಲ್ಲಿ ಮಾತನಾಡಿದ ಅವರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಸಭೆ ಬಹಳ ಹಿಂದೆನೇ ಆಗಬೇಕಿತ್ತು. ಕಾರಣಾಂತರದಿಂದ ಸಭೆ ಇಂದು ನಿರ್ಧಾರವಾಗಿದೆ. ದೇಶದ ಭವಿಷ್ಯ ರೂಪಿಸುವ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಒಂದೇ ವೇದಿಕೆಗೆ ಬಂದಿದ್ದೇವೆ ಎಂದರು.

ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಬಿಜೆಪಿಗೆ ಆನೆಬಲ ಬಂದಂತೆ ಆಗಿದೆ. ಮಂಡ್ಯ ಹಾಗೂ ಮೈಸೂರಲ್ಲಿ ನಾನು, ಕುಮಾರಸ್ವಾಮಿ ಜಂಟಿ ಪ್ರವಾಸ ಮಾಡಿದ್ದೇವೆ. ಬಹಳಷ್ಟು ಸಲ ಹೊಂದಾಣಿಕೆ ರಾಜಕೀಯ ನಡೆದಿದೆ. ಬಿಜೆಪಿ-ಜೆಡಿಎಸ್ ಹಾಗೂ ಜೆಡಿಎಸ್-ಕಾಂಗ್ರೆಸ್ ಸಾಕಷ್ಟು ಸಲ ಹೊಂದಾಣಿಕೆಯಾಗಿದೆ. ಈ ಸಮ್ಮಿಲನ ರಾಜ್ಯದ ಜನರು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದರು.

ಬಿಜೆಪಿ-ಜೆಡಿಎಸ್ ಸಮ್ಮಿಲನದಿಂದ ರಾಜ್ಯದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ಕೆಲಸ ಆಗುತ್ತದೆ. ಜೆಡಿಎಸ್-ಎನ್ಡಿಎ ಕೂಟಕ್ಕೆ ಬಂದಿರುವುದನ್ನು ನಮ್ಮ ನಾಯಕರು ಘೋಷಣೆ ಮಾಡಿ ಹಲವು ತಿಂಗಳು ಆಗಿವೆ. ರಾಜ್ಯದ ಮತದಾರರು ಮೈತ್ರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳಬೇಕು:
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, 28 ಕ್ಷೇತ್ರಗಳಲ್ಲೂ ನಾವು ಒಟ್ಟಾಗಿ ಕೆಲಸ ಮಾಡಬೇಕು. ಪ್ರತಿಷ್ಠೆ ಬದಿಗಿಟ್ಟು ಉಭಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕು ಎಂದರು.

ಈ ಹಿಂದೆ ಬಿಎಸ್ವೈ ಜೊತೆ ಸರ್ಕಾರ ಮಾಡಿದ್ದಾಗ ಒಳ್ಳೆಯ ಆಡಳಿತ ಕೊಟ್ಟಿದ್ದೆವು. ಕೆಲವು ಪರಿಸ್ಥಿತಿಗಳಲ್ಲಿ ಮೈತ್ರಿ ಮುಂದುವರೆಯಲು ಸಾಧ್ಯವಾಗಲಿಲ್ಲ. ಆಗ ನಮ್ಮ ತಂದೆಯವರಿಗೆ ಕೆಲವರು ತಪ್ಪು ಮಾಹಿತಿ ನೀಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಬಾರೀ ನಾವು ಮೈತ್ರಿ ಮಾಡಿಕೊಂಡಿದ್ದರೆ ರಾಜ್ಯದಲ್ಲಿ ಈಗ ಕಾಂಗ್ರೆಸ್ ಬರಲು ಸಾಧ್ಯವಾಗುತ್ತಿರಲಿಲ್ಲ.

ನಮ್ಮಲ್ಲಿದ್ದ ಒಡಕುಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಪ್ರತಿದಿನ ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷ ಮುಗಿದೆ ಹೋಯಿತು ಎಂದು ಮಾತನಾಡುತ್ತಿದ್ದಾರೆ. ದೇಶದ ಭದ್ರತೆಗೆ ಮೋದಿಯವರ ದುಡಿಮೆ ನೋಡಿದ್ದೇವೆ. ಅಮಿತ್ ಶಾ ಅವರ ಮಧ್ಯಸ್ಥಿಕೆಯಿಂದ ಈ ಮೈತ್ರಿಯಾಗಿದೆ. ಅಭ್ಯರ್ಥಿ ಆಯ್ಕೆಯಲ್ಲಿ ಒಡಕು ಬಂದಿರಬಹುದು, ಅದರಿಂದಾಗಿ ತಾವು ನಿರಾಸೆ ಒಳಗಾದರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಕೆಲವೊಂದು ಕ್ಷೇತ್ರಗಳಲ್ಲಿ ಭಿನ್ನಾಭಿಪ್ರಾಯ ಇದ್ದಾವೆ. ಅದನ್ನು ಸರಿಪಡಿಸಿಕೊಳ್ಳಬೇಕಿದೆ ಎಂದರು.

RELATED ARTICLES

Latest News