ಬೆಂಗಳೂರು,ಮಾ.30-ಲೋಕಸಭೆ ಚುನವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಗುರಿ ಇಟ್ಟುಕೊಂಡಿರುವ ಬಿಜೆಪಿಗೆ ಜೆಡಿಎಸ್‍ನೊಂದಿಗೆ ಸಮನ್ವಯ ಸಾಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮೇಲ್ನೋಟಕ್ಕೆ ನಾವು ಒಂದಾಗಿದ್ದೇವೆ ಎಂದು ಹೇಳುತ್ತಿದ್ದರೂ ತಳಮಟ್ಟದಲ್ಲಿ ಕಾರ್ಯಕರ್ತರು ಜೆಡಿಎಸ್ ಜೊತೆ ಕೈ ಜೋಡಿಸಲಿದ್ದಾರೆಯೇ ಎಂಬ ಪ್ರಶ್ನೆಗೆ ಪಕ್ಷಕ್ಕೆ ಕಾಡುತ್ತಿದೆ.
ಕಳೆದ ವಿಧಾನಸಭೆಯಲ್ಲಿ ಸೆಣಸಾಡಿಸಿದ್ದ ಹಾವು-ಮುಂಗುಸಿಯಂತೆ ಜೆಡಿಎಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮೈತ್ರಿಯನ್ನು ಮುನ್ನಡೆಸುವುದು ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಜೆಡಿಎಸ್ ಮತ್ತು ಬಿಜೆಪಿ ನಾಯಕರು 2023ರ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ವಿರುದ್ಧ ಸ್ರ್ಪಧಿಸಿದ್ದರು. ಇದಾದ ಒಂದು ವರ್ಷದೊಳಗೆ ಪಕ್ಷಗಳು ಒಟ್ಟಾಗಿ ಕೆಲಸ ಮಾಡುವುದು ಸುಲಭವಲ್ಲ. ಉನ್ನತ ನಾಯಕರು ಕೈ ಜೋಡಿಸುವಷ್ಟು ಸುಲಭದಲ್ಲಿ ತಳಮಟ್ಟದ ಮುಖಂಡರು, ಕಾರ್ಯಕರ್ತರು ಕೈ ಜೋಡಿಸುವುದಿಲ್ಲ. ಅದಲ್ಲದೇ ಈ ಬಾರಿ ಅಲ್ಪಸಂಖ್ಯಾತರ ಮತಗಳು ಕ್ರೋಡೀಕರಣಗೊಳ್ಳಲಿದ್ದು, ಕಾಂಗ್ರೆಸ್ ಚುನಾವಣೆಯಲ್ಲಿ ಮೇಲುಗೈ ಸಾಧಿಸಬಹುದು ಎಂದು ಹೇಳಲಾಗುತ್ತಿದೆ.
ಬಿಜೆಪಿ ಈ ಬಾರಿ 15 ಹೊಸ ಮುಖಗಳನ್ನು ಕಣಕ್ಕಿಳಿಸಿದೆ. ಅದರಲ್ಲಿ ಪ್ರಮುಖವಾಗಿ ಬೆಳಗಾವಿಯಿಂದ ಜಗದೀಶ್ ಶೆಟ್ಟರ್, ಚಿತ್ರದುರ್ಗದಿಂದ ಗೋವಿಂದ ಕಾರಜೋಳ ಮತ್ತು ತುಮಕೂರಿನಿಂದ ವಿ.ಸೋಮಣ್ಣ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಮೂವರು ಕೂಡ ಹಿರಿಯ ನಾಯಕರಾಗಿದ್ದು, ಕಣಕ್ಕಿಳಿದಿರುವ ಕ್ಷೇತ್ರಗಳಲ್ಲಿ ಹೊರಗಿನವರು ಎಂದು ಪರಿಗಣಿಸಲಾಗಿದೆ. ಇಲ್ಲಿ ಸ್ಥಳೀಯರು ಮತ್ತು ಹೊರಗಿನವರೆಂಬ ಸಮರ ನಡೆಯುತ್ತಿದ್ದು, ಬಿಜೆಪಿ ನಾಯಕರ ನಿರ್ಧಾರಗಳಿಗೆ ಸ್ಥಳೀಯ ಮುಖಂಡರು ಅತೃಪ್ತಿ ಹೊರಹಾಕುತ್ತಿದ್ದಾರೆ.
ಇನ್ನು ನಮ್ಮ ಅಭ್ಯರ್ಥಿಗಳು ಯಾರು ಹೊರಗಿನವರಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಎಂಎಲ್‍ಸಿ ರವಿಕುಮಾರ್ ಹೇಳಿದ್ದಾರೆ. ಜಗದೀಶ್ ಶೆಟ್ಟರ್ ಮತ್ತು ವಿ.ಸೋಮಣ್ಣ ಅಕ್ಕಪಕ್ಕದ ಕ್ಷೇತ್ರದವರೇ ಆಗಿದ್ದು, ಗೋವಿಂದ ಕಾರಜೋಳ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ. ಇವರೆಲ್ಲರೂ ಕನ್ನಡಿಗರೇ ಇಲ್ಲಿನ ಭಾಷೆ ಮತ್ತು ಸಂಸ್ಕೃತಿಯನ್ನು ತಿಳಿದಿದ್ದಾರೆ. ಇದು ಸಮಸ್ಯೆಯಾಗುವುದಿಲ್ಲ ಎಂದಿದ್ದಾರೆ.
ಒಂದು ಕಡೆ ಟಿಕೆಟ್ ವಂಚಿತರು ಹಾಗೂ ಅವರ ಬೆಂಬಲಿಗರು ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅತೃಪ್ತರನ್ನು ಯಡಿಯೂರಪ್ಪ ಸೇರಿ ಬಿಜೆಪಿಯ ಹಿರಿಯ ನಾಯಕರು ಸಮಾಧಾನ ಮಾಡುತ್ತಿದ್ದಾರೆ. ಮೈಸೂರು-ಕೊಡಗು, ಬೆಂಗಳೂರು ಉತ್ತರ, ದಾವಣಗೆರೆ ಮತ್ತು ಚಿಕ್ಕಬಳ್ಳಾಪುರದಲ್ಲಿ ಭಿನ್ನಮತ ಬಹುತೇಕ ಶಮನವಾಗಿದ್ದರೆ, ಉತ್ತರ ಕನ್ನಡ, ಚಿತ್ರದುರ್ಗ, ಶಿವಮೊಗ್ಗ ಮತ್ತು ರಾಯಚೂರಿನಲ್ಲಿ ಪಕ್ಷಕ್ಕೆ ಸವಾಲು ಎದುರಾಗಿದೆ.
25 ಬಿಜೆಪಿ ಅಭ್ಯರ್ಥಿಗಳಲ್ಲಿ ಒಂಬತ್ತು ಮಂದಿ ಲಿಂಗಾಯತರು, ನಾಲ್ವರು ಎಸ್‍ಸಿಗಳು, ಮೂವರು ಬ್ರಾಹ್ಮಣರು, ಮೂವರು ಒಕ್ಕಲಿಗರು, ಇಬ್ಬರು ಎಸ್‍ಟಿ, ಒಬ್ಬರು ಬಂಟ್ ಮತ್ತು ಮೂವರು ಇತರೆ ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡಲಾಗಿದೆ. ಪಟ್ಟಿಯಲ್ಲಿ ಒಂಬತ್ತು ಲಿಂಗಾಯತರಿಗೆ ಟಿಕೆಟ್ ನೀಡಿ ಒಕ್ಕಲಿಗರಿಗೆ ಕೇವಲ ಮೂರು ಟಿಕೆಟ್‍ಗಳನ್ನು ನೀಡಿರುವುದರಿಂದ ಒಕ್ಕಲಿಗ ಸಂಘದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಜೆಡಿಎಸ್ ಕೂಡ ಇಬ್ಬರು ಒಕ್ಕಲಿಗರನ್ನು ಕಣಕ್ಕಿಳಿಸುತ್ತಿರುವುದರಿಂದ ಒಕ್ಕಲಿಗರ ಪ್ರಾಬಲ್ಯ ಐದಕ್ಕೇರಲಿದೆ ಎಂಬುದು ಬಿಜೆಪಿ ನಾಯಕರ ಮಾತು. ಒಕ್ಕಲಿಗ ಸಮುದಾಯಕ್ಕೆ ಐದು ಟಿಕೆಟ್ ಕೊಡುತ್ತಿರುವುದು ಕಡಿಮೆ ಪ್ರಾತಿನಿಧ್ಯವೇನಲ್ಲ. ಆದರೆ, ಹಳೇ ಮೈಸೂರು ಭಾಗದಲ್ಲಿ ಮಾಜಿ ಸಿಎಂ ಡಿವಿ ಸದಾನಂದಗೌಡ ಹಾಗೂ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಿದ ಕಾರಣಕ್ಕೆ ಒಕ್ಕಲಿಗ ಪ್ರಾತಿನಿಧ್ಯದ ಬಗ್ಗೆ ಕೆಲ ಮುಖಂಡರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.