Thursday, May 2, 2024
Homeರಾಜ್ಯಲೋಕಸಭೆ ಕಣದಲ್ಲಿ ಮೂವರು ಹಾಲಿ ಶಾಸಕರು ಹಾಗೂ ಓರ್ವ ವಿಧಾನಪರಿಷತ್ ಸದಸ್ಯ, ಎದುರಾಗುವುದೇ ಉಪಚುನಾವಣೆ ಅನಿವಾರ್ಯತೆ..?

ಲೋಕಸಭೆ ಕಣದಲ್ಲಿ ಮೂವರು ಹಾಲಿ ಶಾಸಕರು ಹಾಗೂ ಓರ್ವ ವಿಧಾನಪರಿಷತ್ ಸದಸ್ಯ, ಎದುರಾಗುವುದೇ ಉಪಚುನಾವಣೆ ಅನಿವಾರ್ಯತೆ..?

ಬೆಂಗಳೂರು,ಮಾ.30- ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮೂವರು ಹಾಲಿ ಶಾಸಕರು, ಒಬ್ಬರು ವಿಧಾನಪರಿಷತ್ ಸದಸ್ಯರು ಕಣದಲ್ಲಿದ್ದು, ಗೆಲುವು ಸಾಧಿಸಿದರೆ ಈ ಕ್ಷೇತ್ರಗಳಿಗೆ ಮತ್ತೊಮ್ಮೆ ಉಪಚುನಾವಣೆ ನಡೆಯುವ ಅನಿವಾರ್ಯತೆ ಎದುರಾಗಲಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚನ್ನಪಟ್ಟಣ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್‍ನಿಂದ ಸ್ಪರ್ಧಿಸಿದರೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಶಿಗ್ಗಾವಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಣದಲ್ಲಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸಂಡೂರು ಕ್ಷೇತ್ರದ ಶಾಸಕ ಇ.ತುಕರಾಂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರು ಮತ್ತು ವಿರೋಧ ಪಕ್ಷದ ನಾಯಕರೂ ಆಗಿರುವ ಕೋಟಾ ಶ್ರೀನಿವಾಸ್ ಪೂಜಾರಿ ಸ್ಪರ್ಧೆ ಮಾಡಿದ್ದಾರೆ.

ಈ ನಾಲ್ವರು ಹಾಲಿ ಶಾಸಕರು ಪ್ರಬಲ ಅಭ್ಯರ್ಥಿಗಳಾಗಿದ್ದು, ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಮಂಡ್ಯದಲ್ಲಿ ಕುಮಾರಸ್ವಾಮಿ ಅವರಿಗೆ ಕ್ರಾಂಗೆಸ್‍ನಿಂದ ವೆಂಕಟರಮಣೇಗೌಡ ಉರುಫ್ ಸ್ಟಾರ್ ಚಂದ್ರು ಪ್ರತಿಸ್ರ್ಪಧಿಯಾಗಿದ್ದರೆ , ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಕಾಂಗ್ರೆಸ್‍ನ ಕಾರ್ಯಕರ್ತ ಆನಂದಸ್ವಾಮಿ ಗಡ್ಡದೇವರ ಮಠ ಪೈಪೋಟಿ ನೀಡುತ್ತಿದ್ದಾರೆ.

ಬಳ್ಳಾರಿಯಲ್ಲಿ ಮಾಜಿ ಸಚಿವ ಶ್ರೀರಾಮುಲು ಬಿಜೆಪಿ ಅಭ್ಯರ್ಥಿಯಾಗಿ ತುಕರಾಂ ಅವರ ವಿರುದ್ಧ ಮತ ಯಾಚನೆ ನಡೆಸುತ್ತಿದ್ದಾರೆ. ಉಡುಪಿ-ಚಿಕ್ಕಮಗಳೂರಿನಲ್ಲಿ ಮಾಜಿ ಸಂಸದ ಹಾಗೂ ಇತ್ತೀಚೆಗಷ್ಟೇ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ್ದ ಜಯಪ್ರಕಾಶ್ ಹೆಗ್ಡೆ ಕಣದಲ್ಲಿದ್ದು, ತೀವ್ರ ಪೈಪೋಟಿ ಏರ್ಪಟ್ಟಿದೆ. ಹಾಲಿ ಶಾಸಕರು ಗೆಲುವು ಕಂಡರೆ ವಿಧಾನಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಬೇಕಾಗಿದ್ದು, ಉಪಚುನಾವಣೆಗೆ ಅನಿವಾರ್ಯವಾಗಲಿದೆ.

  • ಸಂಸದರ ಅಗ್ನಿಪರೀಕ್ಷೆ
    ಹಾಲಿ ಸಂಸದರು ಆಗಿರುವ ಪೈಕಿ ಚಿಕ್ಕೋಡಿಯಿಂದ ಅಣ್ಣಾಸಾಹೇಬ್ ಜೊಲ್ಲೆ, ಬಾಗಲಕೋಟೆಯಿಂದ ಪಿ.ಸಿ.ಗದ್ದಿಗೌಡರ್, ಬಿಜಾಪುರದಿಂದ ರಮೇಶ್ ಜಿಗಜಿಣಗಿ, ಗುಲ್ಬರ್ಗದಿಂದ ಉಮೇಶ್ ಜಾಧವ್, ರಾಜಾ ಅಮರೇಶ್ವರ್ ನಾಯಕ್, ಬೀದರ್‍ನಿಂದ ಭಗವಂತ ಖೂಬಾ, ಧಾರವಾಡದಿಂದ ಪ್ರಹ್ಲಾದ್ ಜೋಷಿ, ಶಿವಮೊಗ್ಗದಿಂದ ಬಿ.ವೈ.ರಾಘವೇಂದ್ರ, ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ, ಬೆಂಗಳೂರು ಕೇಂದ್ರದಿಂದ ಪಿ.ಸಿ.ಮೋಹನ್, ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ ಬಿಜೆಪಿಯಿಂದ ಮರು ಆಯ್ಕೆ ಬಯಸಿದ್ದರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಕಾಂಗ್ರೆಸ್‍ನಿಂದ, ಪ್ರಜ್ವಲ್ ರೇವಣ್ಣ ಜೆಡಿಎಸ್ ಅಭ್ಯರ್ಥಿಯಾಗಿ ಹಾಸನದಿಂದ ಸಂಸತ್ ಮರುಪ್ರವೇಶಿಸುವ ಉಮೇದಿನಲ್ಲಿದ್ದಾರೆ.

ಹಾಲಿ ಸಂಸದರ ಪೈಕಿ ಬಿಜೆಪಿ ಬೆಳಗಾವಿಯಲ್ಲಿ ಮಂಗಳಾ ಅಂಗಡಿ, ಕೊಪ್ಪಳದಲ್ಲಿ ಕರಡಿ ಸಂಗಣ್ಣ, ಬಳ್ಳಾರಿಯಲ್ಲಿ ವೈ.ದೇವೇಂದ್ರಪ್ಪ, ಹಾವೇರಿಯಲ್ಲಿ ಶಿವಕುಮಾರ್ ಉದಾಸಿ, ಉತ್ತರಕನ್ನಡದಲ್ಲಿ ಅನಂತಕುಮಾರ್ ಹೆಗಡೆ, ದಾವಣಗೆರೆಯಲ್ಲಿ ಜಿ.ಎಂ.ಸಿದ್ದೇಶ್ವರ್, ಉಡುಪಿ-ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ, ದಕ್ಷಿಣ ಕನ್ನಡದಲ್ಲಿ ನಳೀನ್‍ಕುಮಾರ್ ಕಟೀಲ್, ಚಿತ್ರದುರ್ಗದಲ್ಲಿ ಎ.ನಾರಾಯಣಸ್ವಾಮಿ, ತುಮಕೂರಿನಲ್ಲಿ ಜಿ.ಎಸ್.ಬಸವರಾಜ್, ಮೈಸೂರಿನಲ್ಲಿ ಪ್ರತಾಪ್ ಸಿಂಹ, ಚಾಮರಾಜನಗರದಲ್ಲಿ ಶ್ರೀನಿವಾಸಪ್ರಸಾದ್, ಬೆಂಗಳೂರು ಉತ್ತರದಲ್ಲಿ ಡಿ.ವಿ.ಸದಾನಂದಗೌಡ, ಚಿಕ್ಕಬಳ್ಳಾಪುರದಲ್ಲಿ ಬಿ.ಎನ್.ಬಚ್ಚೇಗೌಡ, ಕೋಲಾರದಲ್ಲಿ ಎಸ್.ಮುನಿಸ್ವಾಮಿ ಅವರನ್ನು ಬದಲಾಯಿಸಿದೆ.

ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಪಡೆದರೆ ಶೋಭಾ ಕರಂದ್ಲಾಜೆ ಕ್ಷೇತ್ರ ಬದಲಾವಣೆಯಾಗಿದೆ. ಬದಲಾವಣೆಯಾಗಿರುವವರ ಪೈಕಿ ಕೇಂದ್ರ ಸಚಿವರಾಗಿದ್ದ ಎ.ನಾರಾಯಣಸ್ವಾಮಿ ಅವಕಾಶ ವಂಚಿತರಾಗಿದ್ದಾರೆ.
ಇನ್ನು ಕಾಂಗ್ರೆಸ್‍ನಿಂದ ಹಾಲಿ ಸಂಸದ ಡಿ.ಕೆ.ಸುರೇಶ್ ಮರುಸ್ಪರ್ಧಿಸಿದ್ದರೆ, ಚಿಕ್ಕೋಡಿಯಲ್ಲಿ ಪ್ರಿಯಾಂಕ ಜಾರಕಿಹೊಳಿ, ಬೆಳಗಾವಿಯಲ್ಲಿ ಮೃಣಾಳ್ ಹೆಬ್ಬಾಳ್ಕರ್, ಬಾಗಲಕೋಟೆಯಲ್ಲಿ ಸಂಯುಕ್ತ.ಎಸ್ ಪಾಟೀಲ್, ಬೀದರ್‍ನಲ್ಲಿ ಸಾಗರ್ ಖಂಡ್ರೆ, ಚಾಮರಾಜನಗರದಲ್ಲಿ ಸುನೀಲ್ ಬೋಸ್, ಬೆಂಗಳೂರು ದಕ್ಷಿಣದಲ್ಲಿ ಸೌಮ್ಯ ರೆಡ್ಡಿ, ದಾವಣಗೆರೆಯಿಂದ ಪ್ರಭಾ ಮಲ್ಲಿಕಾರ್ಜುನ್, ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಸುರೇಶ್, ಶಿವಮೊಗ್ಗದಿಂದ ಗೀತಾ ಶಿವರಾಜ್‍ಕುಮಾರ್, ಸಚಿವರ ಕುಟುಂಬದ ಸದಸ್ಯರಾಗಿ ಕಣದಲ್ಲಿದ್ದಾರೆ.

RELATED ARTICLES

Latest News