Saturday, April 13, 2024
Homeರಾಜ್ಯಕೊನೆಗೂ ಕೋಲಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ವಿ.ಗೌತಮ್ ಕಣಕ್ಕೆ

ಕೊನೆಗೂ ಕೋಲಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ವಿ.ಗೌತಮ್ ಕಣಕ್ಕೆ

ಬೆಂಗಳೂರು,ಮಾ.30-ತೀವ್ರ ಹಗ್ಗಾಟ ಜಗ್ಗಾಟದ ಬಳಿಕ ಕೊನೆಗೂ ಕಾಂಗ್ರೆಸ್ ಕೋಲಾರ ಕ್ಷೇತ್ರಕ್ಕೆ ಪರ್ಯಾಯ ಅಭ್ಯರ್ಥಿಯನ್ನಾಗಿ ಕೆ.ವಿ.ಗೌತಮ್ ಅವರನ್ನು ಕಣಕ್ಕಿಳಿಸಿದೆ. ಕೇಂದ್ರ ಚುನಾವಣಾ ಸಮಿತಿಯ ಸಭೆಯ ನಿರ್ಣಯದ ಪ್ರಕಾರ ಇಂದು ಕೋಲಾರ ಮೀಸಲು ಕ್ಷೇತ್ರದ ಅಭ್ಯರ್ಥಿಯನ್ನು ಪ್ರಕಟಿಸಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.

28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಮೊದಲ ಹಂತದಲ್ಲಿ ಏಳು ಕ್ಷೇತ್ರಗಳಿಗೆ, 2ನೇ ಹಂತದಲ್ಲಿ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿತ್ತು. ಬಾಕಿ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಕೋಲಾರ ಕಗ್ಗಂಟಾಗಿ ಪರಿಣಮಿಸಿತು. ಅದನ್ನು ಹೊರತುಪಡಿಸಿ ನಿನ್ನೆ ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯ, ಚಾಮರಾಜನಗರಕ್ಕೆ ಸಚಿವ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್, ಬಳ್ಳಾರಿಗೆ ಇ.ತುಕಾರಾಂ ಅವರುಗಳನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಿತ್ತು.

ಕೋಲಾರ ಜಿಲ್ಲೆಯಲ್ಲಿ ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಮತ್ತು ಸಚಿವ ಕೆ.ಎಚ್.ಮುನಿಯಪ್ಪ ಅವರ ಬಣಗಳ ನಡುವೆ ಪೈಪೋಟಿಯಿಂದ ಈಗಾಗಲೇ ನಿರ್ಧರಿಸಲಾಗಿದ್ದ ಅಭ್ಯರ್ಥಿಯನ್ನು ತಡೆ ಹಿಡಿಯಲಾಯಿತು. ಸಚಿವ ಕೆ.ಎಚ್.ಮುನಿಯಪ್ಪ ತಾವು ಏಳು ಬಾರಿ ಕೋಲಾರದಿಂದ ಸಂಸದರಾಗಿದ್ದು, ಗೆಲ್ಲುವ ಎಲ್ಲ ಅನುಭವ ತಮಗಿದೆ. ಹೀಗಾಗಿ ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದರು.

ಜೊತೆಗೆ ರಾಜ್ಯದ ಐದು ಮೀಸಲು ಕ್ಷೇತ್ರಗಳ ಪೈಕಿ ಮೂರರಲ್ಲಿ ಬಲಗೈ ಸಮುದಾಯಕ್ಕೆ ಅವಕಾಶ ಕೊಟ್ಟಿದ್ದರೆ, ಚಿತ್ರದುರ್ಗದಲ್ಲಿ ಮಾತ್ರ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಲಾಗಿದೆ. ಕೋಲಾರದಲ್ಲಿ ಎಡಗೈ ಸಮುದಾಯಕ್ಕೆ ಅವಕಾಶ ನೀಡದೆ ಇದ್ದರೆ ಸಾಮಾಜಿಕ ನ್ಯಾಯದ ಏರುಪೇರಾಗಲಿದೆ ಎಂಬ ಎಚ್ಚರಿಕೆ ನೀಡಿದ್ದರು.

ಕೆ.ಎಚ್.ಮುನಿಯಪ್ಪ ಅವರ ಕುಟುಂಬಕ್ಕೆ ಟಿಕೆಟ್ ನೀಡುವುದನ್ನು ರಮೇಶ್‍ಕುಮಾರ್ ಬಣ ಪ್ರಬಲವಾಗಿ ವಿರೋಧಿಸಿತ್ತು. ಸಚಿವ ಡಾ.ಎಂ.ಸಿ.ಸುಧಾಕರ್, ಕೋಲಾರ ಶಾಸಕ ಕೊತ್ತನೂರು ಮಂಜು, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ವಿಧಾನಪರಿಷತ್ ಸದಸ್ಯರಾದ ನಜೀರ್ ಅಹಮ್ಮದ್, ಅನಿಲ್‍ಕುಮಾರ್ ಅವರು ರಾಜೀನಾಮೆಗೆ ಮುಂದಾಗುವ ಮೂಲಕ ಕಾಂಗ್ರೆಸ್ ಮೇಲೆ ಒತ್ತಡ ಹೇರಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಂಡಾಯಗಾರರ ಜೊತೆ ಸಂಧಾನ ಸಭೆ ನಡೆಸಿ ಎರಡೂ ಬಣ ಪ್ರತಿಪಾದಿಸುವವರಿಗೆ ಟಿಕೆಟ್ ನೀಡಲು ನಿರ್ಧರಿಸಿದರು.

ಪರ್ಯಾಯ ಅಭ್ಯರ್ಥಿಯನ್ನು ಘೋಷಿಸುತ್ತೇವೆ. ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಎಲ್ಲರದು ಎಂಬ ಸಂದೇಶ ರವಾನಿಸಿದರು. ಅಂತಿಮವಾಗಿ ಎಡಗೈ ಸಮುದಾಯಕ್ಕೆ ಸೇರಿದ ಕೆ.ವಿ.ಗೌತಮ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.

ಸಚಿವ ಕೆ.ಎಚ್.ಮುನಿಯಪ್ಪ ಅವರ ಪ್ರಬಲ ಲಾಬಿಯನ್ನು ಕಾಂಗ್ರೆಸ್ ತಳ್ಳಿ ಹಾಕಿದೆ. ಚಿಕ್ಕ ಪೆದ್ದಣ್ಣ ಸೇರಿದಂತೆ ಮುನಿಯಪ್ಪ ಕುಟುಂಬದ ಸದಸ್ಯರು ಅವಕಾಶ ವಂಚಿತರಾಗಿದ್ದಾರೆ. ಇದರ ನಡುವೆ ರಮೇಶ್‍ಕುಮಾರ್ ಅವರ ಬಣ ಪ್ರತಿಪಾದಿಸಿದ ಹಲವು ನಾಯಕರು ನಿರಾಶರಾಗಿದ್ದಾರೆ.

ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್‍ನ ಅಧ್ಯಕ್ಷರಾಗಿರುವ ಕೆ.ವಿ.ಗೌತಮ್ ಇಂಜಿನಿಯರ್ ಪದವೀಧರರಾಗಿದ್ದು, ಎನ್‍ಎಸ್‍ಯುಐ , ಯುವ ಕಾಂಗ್ರೆಸ್‍ನ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದು, ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. ಸುಮಾರು 24 ವರ್ಷಗಳ ಕಾಲ ಕೆಲಸ ಮಾಡಿರುವ ಗೌತಮ್ ಅವರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಇವರ ತಂದೆ ವಿಜಯಕುಮಾರ್ ಬೆಂಗಳೂರು ಮೇಯರ್ ಆಗಿಯೂ ಕೆಲಸ ಮಾಡಿದ್ದಾರೆ.

RELATED ARTICLES

Latest News