ಬೆಂಗಳೂರು,ಮಾ.30- ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟದ ಜೊತೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್, ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಮಂಡ್ಯ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಹಾಸನ ಕ್ಷೇತ್ರದಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಎಂ.ಮಲ್ಲೇಶ್ ಬಾಬು ಅವರನ್ನು ಜೆಡಿಎಸ್ ಕಣಕ್ಕಿಳಿಸಲಿದೆ. ಉಳಿದ 25 ಕ್ಷೇತ್ರಗಳನ್ನು ಮಿತ್ರ ಪಕ್ಷ ಬಿಜೆಪಿಗೆ ಬಿಟ್ಟುಕೊಟ್ಟಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್, 7 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 21 ಕ್ಷೇತ್ರಗಳನ್ನು ಕಾಂಗ್ರೆಸ್‍ಗೆ ಬಿಟ್ಟು ಕೊಟ್ಟಿತ್ತು. ಹಾಸನದಲ್ಲಿ ಜೆಡಿಎಸ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿದ್ದವು. ತಲಾ ಒಂದು ಕ್ಷೇತ್ರದಲ್ಲಷ್ಟೇ ಜಯಗಳಿಸಿದ್ದ ಆಗಿನ ಮಿತ್ರ ಪಕ್ಷಗಳು ಉಳಿದ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ್ದವು.
ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಕಾಂಗ್ರೆಸ್ ಮೈತ್ರಿಯನ್ನು ಕಡಿದುಕೊಂಡಿರುವ ಜೆಡಿಎಸ್ ಈಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. 2019ರ ಚುನಾವಣೆಯಲ್ಲಿ ಎದುರಾಳಿ ಪಕ್ಷವಾಗಿದ್ದ ಬಿಜೆಪಿಯೇ ಈಗ ಮಿತ್ರ ಪಕ್ಷವಾಗಿದೆ. ಆಗ ಮಿತ್ರ ಪಕ್ಷವಾಗಿದ್ದ ಕಾಂಗ್ರೆಸ್ಸೇ ಈಗ ಜೆಡಿಎಸ್‍ನ ಪ್ರತಿಯಾಗಿದೆ.
2019ರಲ್ಲಿ ಶಿವಮೊಗ್ಗದಿಂದ ಮಧುಬಂಗಾರಪ್ಪ, ಉತ್ತರಕನ್ನಡ ಆನಂದ್ ಅಸ್ನೋಟಿಕರ್, ವಿಜಯಪುರ(ಎಸ್ಸಿ)ದಿಂದ ಡಾ.ಸುನಿತಾ ದೇವಾನಂದ್ ಚವ್ಹಾಣ್, ಮಂಡ್ಯದಿಂದ ನಿಖಿಲ್‍ಕುಮಾರಸ್ವಾಮಿ, ತುಮಕೂರಿನಿಂದ ಎಚ್.ಡಿ.ದೇವಗೌಡ, ಹಾಸನ ಪ್ರಜ್ವಲ್ ರೇವಣ್ಣ, ಉಡುಪಿ-ಚಿಕ್ಕಮಗಳೂರಿನಿಂದ ಪ್ರಮೋದ್ ಮಧ್ವರಾಜ್ ಸ್ಪರ್ಧೆ ಮಾಡಿದ್ದರು.
ಮಧುಬಂಗಾರಪ್ಪ ಅವರು ಜೆಡಿಎಸ್ ತೊರೆದು 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಚುನಾಯಿತರಾಗಿ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಗ ಸ್ಪರ್ಧಿಸಿದ್ದ ಏಳು ಅಭ್ಯರ್ಥಿಗಳ ಪೈಕಿ ಸಂಸದ ಪ್ರಜ್ವಲ್ ರೇವಣ್ಣ ಹೊರತುಪಡಿಸಿ ಉಳಿದ ಯಾರೂ ಕೂಡ ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ.
ಮೈತ್ರಿಯಲ್ಲಿ ಪಕ್ಷ ಬದಲಾವಣೆ ಮಾಡಿಕೊಂಡು 7ರ ಬದಲಾಗಿ ಕೇವಲ 3 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಜೆಡಿಎಸ್ ಮತದಾರರು ಯಾವ ರೀತಿ ಆಶೀರ್ವಾದ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.