ಬೆಂಗಳೂರು,ಅ.9- ಕಾವೇರಿ ನದಿ ನೀರಿನ ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ವಾಸ್ತವ ಪರಿಸ್ಥಿತಿಯನ್ನು ತಾವು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲಶಕ್ತಿ ಸಚಿವರಿಗೆ ವಿವರಿಸಿರುವುದಾಗಿ ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯಪ್ರವೇಶ ಮಾಡಬೇಕು ಎಂಬುದು ರಾಜ್ಯಸರ್ಕಾರದ ಅಸಹಾಯಕತೆಯ ವಾದ. ಇವರ ವೈಫಲ್ಯವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನೀರು ನಿರ್ವಹಣಾ ಪ್ರಾಧಿಕಾರ ಆದೇಶಗಳೇ ಅಂತಿಮ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಹೀಗಿರುವಾಗ ಪ್ರಧಾನಮಂತ್ರಿಯವರು ಮಧ್ಯಪ್ರವೇಶ ಮಾಡಲು ಹೇಗೆ ಸಾಧ್ಯ. ದೇಶದ ಪ್ರಧಾನಿಯವರು ಯಾವುದೋ ಒಂದು ರಾಜ್ಯದ ಪರವಾಗಿ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಹಿಂದೆ ತಾವು ಪ್ರಧಾನಮಂತ್ರಿ ಮತ್ತು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ವಾಸ್ತವ ಪರಿಸ್ಥಿತಿಯನ್ನು ವಿವರಿಸಿದ್ದೆ. ಆ ವೇಳೆ ಅವರು ತಮಿಳುನಾಡು ಮತ್ತು ಕರ್ನಾಟಕ ರಾಜ್ಯದಲ್ಲಿ ಅಧಿಕಾರದಲ್ಲಿರುವ ಎರಡೂ ಪಕ್ಷಗಳ ನಡುವೆ ಉತ್ತಮ ರಾಜಕೀಯ ಹೊಂದಾಣಿಕೆ ಇದೆ. ಹೀಗಾಗಿ ಅವರು ಕುಳಿತು ಮಾತುಕತೆ ನಡೆಸಿ ಸೌಹಾರ್ದಯುತ ಪರಿಹಾರ ತೆಗೆದುಕೊಳ್ಳುವುದಾದರೆ ನಮ್ಮ ಅಭ್ಯಂತರ ಇಲ್ಲ. ಆದರೆ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ತಮಿಳುನಾಡಿನ ಜೊತೆ ಮಾತುಕತೆಗೆ ಮುಂದಾಗಬೇಕು ಎಂದರು.
BIG NEWS : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆ
ಕಾವೇರಿ ನೀರು ನಿಯಂತ್ರಣಾ ಸಮಿತಿ ಸಭೆ ನಾಳೆ ನಡೆಯಲಿದೆ. ಅಲ್ಲಿ ನೀರು ಬಿಡಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಸಹಜವಾಗಿಯೇ ನೀರು ಬಿಡಿ ಎಂದೇ ಆದೇಶ ಬರುತ್ತದೆ. ರಾಜ್ಯಸರ್ಕಾರ ವಾಸ್ತವಾಂಶಗಳನ್ನು ಪ್ರಬಲವಾಗಿ ಮನವರಿಕೆ ಮಾಡಿಕೊಡುವ ವಾದ ಮಂಡಿಸುವಲ್ಲಿ ವೈಫಲ್ಯ ಅನುಭವಿಸಿವೆ. ಮೊದಲು ಎಲ್ಲಿ ಲೋಪಗಳಾಗಿವೆ ಎಂಬುದನ್ನು ಗುರುತಿಸಿ ಸರಿಪಡಿಸಬೇಕಿದೆ ಎಂದರು.
ಕಾವೇರಿ ವಿಷಯದಲ್ಲಿ ವಿಧಾನಸಭೆ ಅಧಿವೇಶನ ಕರೆದು ನಿರ್ಣಯ ಕೈಗೊಳ್ಳಬೇಕೆಂಬ ದೊಡ್ಡ ದೊಡ್ಡ ವಿಚಾರಗಳ ಬಗ್ಗೆ ತಾವು ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದರು.
ಬಿಜೆಪಿ, ಜೆಡಿಎಸ್ ಮೈತ್ರಿಯ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಬಿಜೆಪಿ ಪಕ್ಷದಿಂದ ಮೈತ್ರಿಯ ಬಗ್ಗೆ ಈವರೆಗೂ ಅಧಿಕೃತವಾಗಿ ನನಗೆ ಯಾವುದೇ ಮಾಹಿತಿ ಬಂದಿಲ್ಲ. ಯಾವ ಕಾರಣಕ್ಕೆ ಮೈತ್ರಿಯಾಗಿದೆ ಎಂಬುದು ತಮಗೆ ಗೊತ್ತಿಲ್ಲ. ಮೈತ್ರಿ ಬಳಿಕ ಸ್ಪರ್ಧೆಯ ಕುರಿತು ನಂತರ ತೀರ್ಮಾನ ತೆಗೆದುಕೊಳ್ಳುತ್ತೇನೆ. ಸದ್ಯಕ್ಕೆ ಯಾವುದೇ ಆತುರವಿಲ್ಲ ಎಂದರು.
ಇಸ್ರೇಲ್‍ನಲ್ಲಿ 18,000 ಭಾರತೀಯರು ಸುರಕ್ಷಿತ
ಬೆಂಗಳೂರು, ಮೈಸೂರು ಎಕ್ಸ್‍ಪ್ರೆಸ್ ಹೆದ್ದಾರಿಯ ಮಾರ್ಗಗಳ ಮಧ್ಯೆ ವಿವಿಧ ನಗರಗಳನ್ನು ಸಂಪರ್ಕಿಸುವ ತಾತ್ಕಾಲಿಕ ದ್ವಾರಗಳನ್ನು ಬಂದ್ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು ಈ ಮೊದಲೇ ಹೇಳಿದಂತೆ ಹೆದ್ದಾರಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಅವುಗಳನ್ನು ತಾತ್ಕಾಲಿಕವಾಗಿ ಮಾತ್ರ ನಿರ್ಮಿಸಲಾಗಿತ್ತು. ಈಗ ಅವನ್ನು ಬಂದ್ ಮಾಡುವುದರಿಂದ ಹೆಚ್ಚಿನ ಪರಿಣಾಮ ಏನೂ ಆಗುವುದಿಲ್ಲ. ಹೆದ್ದಾರಿ ಸಮಸ್ಯೆ ಕುರಿತಂತೆ ತಾವು ಅಧಿಕಾರಿಗಳ ಜೊತೆ ಚರ್ಚಿಸಿ ಸರಿಪಡಿಸುವುದಾಗಿ ಹೇಳಿದರು.