ಕೃಷ್ಣಾನಗರ,ಮಾ.31- ಪಶ್ಚಿಮ ಬಂಗಾಳದ ಕೃಷ್ಣಾನಗರದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ನಡೆಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ 200 ಕ್ಷೇತ್ರಗಳಲ್ಲಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವಿವಾದಿತ ಸಿಎಎ ಮಸೂದೆಯನ್ನು ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿಎಎಗಾಗಿ ಅರ್ಜಿ ಸಲ್ಲಿಸಿದರೆ ನೀವು ವಿದೇಶಿಯರೆಂದು ಪರಿಗಣಿಸಲ್ಪಡುತ್ತೀರಿ. ಹೀಗಾಗಿ ಯಾರೂ ಅರ್ಜಿ ಸಲ್ಲಿಸಬೇಡಿ ಎಂದು ಎಚ್ಚರಿಕೆ ನೀಡಿದರು.
400 ಸ್ಥಾನಗಳನ್ನು ಗೆಲ್ಲುವುದಾಗಿ ಬಿಜೆಪಿಯವರು ಹೇಳಿಕೊಳ್ಳುತ್ತಿದ್ದಾರೆ. 200 ಸ್ಥಾನಗಳನ್ನು ದಾಟಿ ನೋಡಿ. ಕಳೆದ 2021ರ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 200 ಕ್ಷೇತ್ರಗಳನ್ನು ಗೆಲ್ಲುವುದಾಗಿ ಹೇಳಿದ್ದರು, 77 ಕ್ಕೇ ನಿಂತು ಹೋದರು ಎಂದು ಲೇವಡಿ ಮಾಡಿದ್ದಾರೆ.
ಸಿಎಎ ದೇಶದ ಕಾನೂನುಬದ್ಧ ನಾಗರಿಕರನ್ನು ವಿದೇಶಿಗರು ಎಂದು ಬಿಂಬಿಸುವ ವ್ಯೂಹವಾಗಿದೆ. ಹೀಗಾಗಿ ಪಶ್ಚಿಮಬಂಗಾಳದಲ್ಲಿ ಸಿಎಎ ಮತ್ತು ಎನ್‍ಆರ್‍ಸಿಗೆ ಅವಕಾಶ ನೀಡುವುದಿಲ್ಲ ಎಂದು ಸೆಡ್ಡು ಹೊಡೆದಿದ್ದಾರೆ.