Saturday, April 20, 2024
Homeರಾಷ್ಟ್ರೀಯಮನೆಗೆ ತೆರಳಿ ಎಲ್.ಕೆ.ಅಡ್ವಾಣಿಯವರಿಗೆ ಭಾರತರತ್ನ ಪ್ರದಾನ ಮಾಡಿದ ರಾಷ್ಟ್ರಪತಿ ಮುರ್ಮು

ಮನೆಗೆ ತೆರಳಿ ಎಲ್.ಕೆ.ಅಡ್ವಾಣಿಯವರಿಗೆ ಭಾರತರತ್ನ ಪ್ರದಾನ ಮಾಡಿದ ರಾಷ್ಟ್ರಪತಿ ಮುರ್ಮು

ನವದೆಹಲಿ,ಮಾ.31- ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಯವರಿಗೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತರತ್ನವನ್ನು ಪ್ರದಾನ ಮಾಡಿದರು.ಅಡ್ವಾಣಿಯವರ ಮನೆಗೆ ತೆರಳಿದ ರಾಷ್ಟ್ರಪತಿಯವರು ಹಿರಿಯ ನಾಯಕರಿಗೆ ಗೌರವ ಸಲ್ಲಿಸಿದರು. ಈ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನ್‍ಕರ್, ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹಸಚಿವ ಅಮಿತ್ ಷಾ ಹಾಗೂ ಅಡ್ವಾಣಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ದೇಶದ ರಾಜಕಾರಣದಲ್ಲಿ ಅಡ್ವಾಣಿಯವರು 7 ದಶಕಗಳ ಕಾಲ ಅಚಲವಾದ ಸಮರ್ಪಣೆ ಮತ್ತು ವಿಭಿನ್ನತೆಯಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಇಂದು ರಾಷ್ಟ್ರಪತಿಯವರು ಭಾರತರತ್ನ ಪ್ರದಾನ ಮಾಡಿದ್ದಾರೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.

1927 ರಲ್ಲಿ ಕರಾಚಿಯಲ್ಲಿ ಜನಿಸಿದ ಅಡ್ವಾಣಿಯವರು, 1947 ರಲ್ಲಿ ರಾಷ್ಟ್ರ ವಿಭಜನೆಯ ಹಿನ್ನೆಲೆಯಲ್ಲಿ ಭಾರತಕ್ಕೆ ವಲಸೆ ಬಂದರು. ಸಾಂಸ್ಕøತಿಕ ರಾಷ್ಟ್ರೀಯತೆಯ ದೃಷ್ಟಿಯೊಂದಿಗೆ ಅವರು ದಶಕಗಳ ಕಾಲ ದೇಶದ ಉದ್ದಗಲಕ್ಕೂ ಶ್ರಮಿಸಿದರು.

ಸಾಮಾಜಿಕ-ರಾಜಕೀಯ ಭೂದೃಶ್ಯದಲ್ಲಿ ರೂಪಾಂತರವನ್ನು ತಂದರು. ತುರ್ತು ಪರಿಸ್ಥಿತಿಯಲ್ಲಿ ಭಾರತದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿದಾಗ, ಸರ್ವಾಕಾರಿ ಧೋರಣೆಯ ವಿರುದ್ಧ ಅವಿರತವಾದ ಹೋರಾಟ ನಡೆಸಿದರು ಎಂದು ರಾಷ್ಟ್ರಪತಿ ಭವನ ತಿಳಿಸಿದೆ.

ಸಂಸದರಾಗಿ ಸಂವಾದಕ್ಕೆ ಅವರು ನೀಡಿದ ಒತ್ತು ಸಂಸದೀಯ ಸಂಪ್ರದಾಯಗಳನ್ನು ಪುಷ್ಟೀಕರಿಸಿದೆ. ಗೃಹ ಸಚಿವರಾಗಿರಲಿ ಅಥವಾ ಉಪಪ್ರಧಾನಿಯಾಗಿರಲಿ, ಅವರು ಯಾವಾಗಲೂ ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡಿದರು, ಪಕ್ಷಾತೀತವಾಗಿ ಗೌರವ ಮತ್ತು ಮೆಚ್ಚುಗೆಯನ್ನು ಗಳಿಸಿದರು. ಭಾರತದ ಸಾಂಸ್ಕøತಿಕ ಪುನರುತ್ಥಾನಕ್ಕಾಗಿ ಅವರ ಸುದೀರ್ಘ ಮತ್ತು ದಣಿವರಿಯದ ಹೋರಾಟವು ಸೂರ್ತಿದಾಯಕ ಎಂದಿದ್ದಾರೆ.

ಅಡ್ವಾಣಿಯವರ ಹೋರಾಟದ ಪ್ರತಿಫಲವಾಗಿಯೇ 2024 ರಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಪುನರ್‍ನಿರ್ಮಾಣವಾಗಿದೆ ಎಂದು ತಿಳಿಸಲಾಗಿದ್ದು, ರಾಷ್ಟ್ರೀಯ ಕಾರ್ಯಸೂಚಿಯನ್ನು ಮರುರೂಪಿಸುವಲ್ಲಿ ಮತ್ತು ಅದನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವಲ್ಲಿ ಯಶಸ್ವಿಯಾದ ಬೆರಳೆಣಿಕೆಯ ನಾಯಕರಲ್ಲಿ ಅಡ್ವಾಣಿ ಪ್ರಮುಖರು.ಸ್ವಾತಂತ್ರ್ಯೋತ್ತರದ ರಾಜಕೀಯ ನಾಯಕತ್ವದಲ್ಲಿ ಅವರ ಸಾಧನೆಗಳು ಭಾರತದ ಪ್ರತಿಭೆ ಮತ್ತು ಅದರ ಅಂತರ್ಗತ ಸಂಪ್ರದಾಯಗಳ ಅತ್ಯುತ್ತಮ ಅಭಿವ್ಯಕ್ತಿಯಾಗಿವೆ ಎಂದು ವಿವರಿಸಲಾಗಿದೆ.

RELATED ARTICLES

Latest News