ನವದೆಹಲಿ,ಮಾ.31- ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುವ ಕನಸು ಕಾಣುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಶಿವಸೇನೆಯ ಠಾಕ್ರೆ ಬಣದ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕರೆ ನೀಡಿದ್ದಾರೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಘಟಬಂಧನ್‍ನ ಸಮಾವೇಶದಲ್ಲಿ ಮಾತನಾಡಿದ ಅವರು, ಸುಳ್ಳು ಆರೋಪದ ಮೇಲೆ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪರವಾಗಿ ಅವರ ಪತ್ನಿ ಸುನೀತಾ, ಜಾರ್ಖಂಡ್‍ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಪತ್ನಿ ಕಲ್ಪನಾ ಅವರು ಹೋರಾಟ ನಡೆಸುತ್ತಿದ್ದಾರೆ. ಅವರ ಬೆಂಬಲಕ್ಕೆ ದೇಶದ ಎಲ್ಲಾ ಸಹೋದರರೂ ಇದ್ದಾರೆ ಎಂದು ಹೇಳಿದರು.
ಈ ಸಮಾವೇಶವನ್ನು ಬಿಜೆಪಿಯವರು ಕೊಲೆಗಡುಕರ ಕಾರ್ಯಕ್ರಮ ಎಂದಿದ್ದಾರೆ. ನೀವೆಲ್ಲಾ ಕೊಲೆಗಡುಕರೇ ಎಂದು ಪ್ರಶ್ನಿಸಿದ ಉದ್ಧವ್ ಠಾಕ್ರೆ, ರೈತರನ್ನು ಭಯೋತ್ಪಾದಕರು ಎಂದು ಭಾವಿಸಿ ದೆಹಲಿಗೆ ಬಾರದಂತೆ ತಡೆಯಲಾಗಿದೆ. ದೇಶಾದ್ಯಂತ ರೈತರು ಬಿಜೆಪಿಯನ್ನು ದೆಹಲಿಗೆ ಬರದಂತೆ ತಡೆಯಬೇಕಿದೆ ಎಂದರು.
ಬಿಜೆಪಿಗೆ ಸೇರಿದರೆ ಎಲ್ಲರೂ ಸ್ವಚ್ಛಗೊಳ್ಳುತ್ತಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿಯವರು ಪ್ರತಿಪಕ್ಷವನ್ನು ಹತ್ತಿಕ್ಕಲು ಮಾತ್ರ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಯ ಜೊತೆಗೆ ಇಡಿ, ಆದಾಯ ತೆರಿಗೆ, ಸಿಬಿಐ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಇದು ಚುನಾವಣೆಯ ಪ್ರಚಾರದ ಸಭೆಯಲ್ಲ. ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುತ್ತಿರುವ ಹೋರಾಟ. ದೇಶಕ್ಕೆ ಇಂದು ಧಕ್ಕೆಯಾಗುತ್ತಿದೆ. ನಾವು ಬಲಿಷ್ಠ ದೇಶಕ್ಕಾಗಿ ಹೋರಾಡುತ್ತಿದ್ದೇವೆ. ಸರ್ವತೋಮುಖ ಅಭಿವೃದ್ಧಿ ಹಾಗೂ ಭಾವೈಕ್ಯತೆಯ ಸರ್ಕಾರ ಬೇಕಿದೆ ಎಂದರು.
ಇದೇ ವೇಳೆಯಲ್ಲಿ ಮಾತನಾಡಿದ ಜಮ್ಮು-ಕಾಶ್ಮೀರದ ಮೆಹಬೂಬಾ ಮುಫ್ತಿ, ಬಿಜೆಪಿ ಸಂವಿಧಾನ ಮತ್ತು ನಿಯಮಾವಳಿಗಳನ್ನು ಬದಿಗಿಟ್ಟು ಪ್ರಶ್ನೆ ಮಾಡುವವರನ್ನು ಜೈಲಿನಲ್ಲಿಡುತ್ತದೆ. ಜಮ್ಮು-ಕಾಶ್ಮೀರವನ್ನು ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದೆ. ಕೇಜ್ರಿವಾಲ್ ಅವರನ್ನು ಜೈಲಿಗೆ ಹಾಕಿದ್ದಾರೆ. ಅವರು ಬಿಜೆಪಿ ಸೇರಿದರೆ ಇದೇ ಮಾಧ್ಯಮಗಳು ಕೇಜ್ರಿವಾಲ್ ಪ್ರಾಮಾಣಿಕ ವ್ಯಕ್ತಿ ಎಂದು ಹೊಗಳಲಾರಂಭಿಸುತ್ತವೆ ಎಂದು ಹೇಳಿದರು.
ಬಿಜೆಪಿ ಚುನಾವಣೆಯ ಬಾಂಡ್ ಹೆಸರಿನಲ್ಲಿ ಭಾರೀ ಭ್ರಷ್ಟಾಚಾರ ಮಾಡಿದೆ. ಆದರೆ ವಿರೋಧಪಕ್ಷಗಳನ್ನು ಭ್ರಷ್ಟರು ಎಂದು ಜನರನ್ನು ದಾರಿ ತಪ್ಪಿಸುತ್ತಿದೆ. ವಂಶಪಾರಂಪರ್ಯದ ಬಗ್ಗೆ ಮಾತನಾಡುವ ಬಿಜೆಪಿಯವರು ತಮ್ಮಲ್ಲಿರುವ ಕುಟುಂಬ ರಾಜಕಾರಣದ ಬಗ್ಗೆ ಸತ್ಯ ಮರೆಮಾಚುತ್ತಿದ್ದಾರೆ ಎಂದು ಆರೋಪಿಸಿದರು.
ಸುನೀತಾ ಕೇಜ್ರಿವಾಲ್ ಮಾತನಾಡಿ, ಅರವಿಂದ್ ಕೇಜ್ರಿವಾಲ್‍ರನ್ನು ಸುಳ್ಳು ಪ್ರಕರಣದಲ್ಲಿ ಜೈಲಿನಲ್ಲಿಡಲಾಗಿದೆ. ಅವರು ಜನರ ಪರವಾಗಿ ಕೆಲಸ ಮಾಡಿದ್ದೇ ತಪ್ಪು ಎಂಬಂತೆ ಬಿಂಬಿಸಲಾಗುತ್ತಿದೆ. ಅವರು ಸಿಂಹವಿದ್ದಂತೆ, ಹೆಚ್ಚು ದಿನ ಜೈಲಿನಲ್ಲಿಡಲು ಸಾಧ್ಯವಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿ ಬಲಿದಾನವಾದಂತೆ ತಮ್ಮ ಪತಿ ಅರವಿಂದ್ ಕೇಜ್ರಿವಾಲ್ ದೇಶಕ್ಕಾಗಿ ಮುಡುಪಾಗಿದ್ದಾರೆ ಎಂದರು.
ಇದೇ ವೇಳೆ ಅರವಿಂದ್ ಕೇಜ್ರಿವಾಲ್ ಜೈಲಿನಿಂದಲೇ ರವಾನಿಸಿದ್ದ ಸಂದೇಶವನ್ನು ಸುನೀತಾ ಕೇಜ್ರಿವಾಲ್ ಓದಿ ಹೇಳಿದರು. ಈ ವೇಳೆ ಅವರು ಭಾವೋದ್ವೇಗಕ್ಕೆ ಒಳಗಾದ ಪ್ರಸಂಗವೂ ನಡೆಯಿತು.ಲೋಕಸಭಾ ಚುನಾವಣೆಯಲ್ಲಿ ಆಮ್‍ಆದ್ಮಿ ಪಕ್ಷ ನೀಡುವ ಭರವಸೆಗಳನ್ನು ಕೇಜ್ರಿವಾಲ್ ಪರವಾಗಿ ಸುನೀತಾ ಓದಿ ಹೇಳಿದರು.ಸಿಪಿಐಎಂಎಲ್‍ನ ದೀಪಂಕರ್ ಭಟ್ಟಾಚಾರ್ಯ ಮಾತನಾಡಿ, ಬಿಜೆಪಿ ಅತ್ಯಂತ ಭ್ರಷ್ಟ ಪಕ್ಷವಾಗಿದೆ ಎಂದು ವಾಗ್ದಾಳಿ ನಡೆಸಿದರು.