ಚಾಮರಾಜನಗರ,ಏ.1- ಇಲ್ಲಿನ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಪುತ್ರ ಹಾಗೂ ಸಹೋದರರು ಸೇರಿದಂತೆ 30ಕ್ಕೂ ಹೆಚ್ಚು ಪ್ರಮುಖ ನಾಯಕರು ನಾಳೆ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಳ್ಳಲೇಬೇಕು ಎಂದು ಹಠಕ್ಕೆ ಬಿದ್ದಿರುವ ಪಕ್ಷದ ಮುಖಂಡರು ಆಪರೇಷನ್ ಹಸ್ತಕ್ಕೆ ಕೈ ಹಾಕಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ ಅವರ ಆಪ್ತರನ್ನು ಇತ್ತೀಚೆಗೆ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲಾಗಿತ್ತು. ಈಗ ಚಾಮರಾಜನಗರದಲ್ಲೂ ಅದೇ ರೀತಿಯ ಕಾರ್ಯಾಚರಣೆಗಳು ನಡೆದಿದ್ದು, 30ಕ್ಕೂ ಹೆಚ್ಚು ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ-ಜೆಡಿಎಸ್‍ನ ಮೈತ್ರಿ ಅಭ್ಯರ್ಥಿಯಾಗಿ ಎಸ್.ಬಾಲರಾಜ್ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಶ್ರೀನಿವಾಸ್ ಪ್ರಸಾದ್ ವಯೋಸಹಜ ಕಾರಣಗಳಿಗಾಗಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಆದರೆ ತಮ್ಮ ಅಳಿಯನಿಗೆ ಚಾಮರಾಜನಗರ ಕ್ಷೇತ್ರದಿಂದ ಸ್ರ್ಪಧಿಸಲು ಅವಕಾಶ ಮಾಡಿಕೊಡಬೇಕೆಂದು ಬಿಜೆಪಿ ನಾಯಕರಲ್ಲಿ ಮನವಿ ಮಾಡಿದ್ದರು. ಆದರೆ ಹೈಕಮಾಂಡ್ ಅದಕ್ಕೆ ಅವಕಾಶ ನೀಡಲಿಲ್ಲ.
ಈಗಾಗಲೇ ರಾಜಕೀಯ ತಟಸ್ಥತೆಯನ್ನು ಘೋಷಿಸಿರುವ ಶ್ರೀನಿವಾಸ ಪ್ರಸಾದ್ ಅವರು ತಮ್ಮ ಕುಟುಂಬದ ಬಹುತೇಕ ಸದಸ್ಯರು ಹಾಗೂ ಬೆಂಬಲಿಗರನ್ನು ಕಾಂಗ್ರೆಸ್‍ನತ್ತ ರವಾನಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಶ್ರೀನಿವಾಸ ಪ್ರಸಾದ್ ಅವರ ಅಳಿಯಂದಿರು ಕಳೆದ ವಾರ ಕಾಂಗ್ರೆಸ್ ಸೇರಿದರು. ಈಗ ಅವರ ಪುತ್ರ ಮತ್ತು ಸಹೋದರರು ಕಾಂಗ್ರೆಸ್ ಸೇರುತ್ತಿದ್ದಾರೆ.