ಬೆಂಗಳೂರು,ಏ.2- ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾರೇ ಆಗಿದ್ದರೂ ಅವರ ಪರವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ತಿಳಿಸಿದರು.
ಅರಮನೆ ಮೈದಾನದಲ್ಲಿಂದು ಹಮ್ಮಿಕೊಂಡಿದ್ದ ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳ ಶಕ್ತಿಕೇಂದ್ರಗಳ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಡೀ ವಿಶ್ವವೇ ಪ್ರಧಾನಿ ನರೇಂದ್ರಮೋದಿ ಅವರ ಕಡೆಗೆ ಅಚ್ಚರಿಯಿಂದ ನೋಡುತ್ತಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಪರವಾಗಿ ಅವಿಶ್ರಾಂತವಾಗಿ ಎಲ್ಲರೂ ದುಡಿಯಬೇಕು. ನನಗೆ ಈಗ 81 ವರ್ಷವಾಗಿದ್ದರೂ ಮನೆಯಲ್ಲಿ ಸುಮ್ಮನೆ ಕೂರುವುದಿಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡಲು ಸಿದ್ದನಿದ್ದೇನೆ. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವುದಷ್ಟೇ ಮುಂದಿರುವ ಗುರಿ ಎಂದು ಅವರು ಹೇಳಿದರು.
ಕಾಂಗ್ರೆಸ್ ಸರ್ಕಾರದಿಂದ ನಾಡಿನ ಜನರಿಗೆ ಅನ್ಯಾಯವಾಗಿದ್ದು, ಅದನ್ನು ಮನವರಿಕೆ ಮಾಡಿಕೊಟ್ಟು ಮತದಾರರ ಮನ ಗೆಲ್ಲಿಸಬೇಕು. ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡುವ ಹಣವನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ಭಾಗ್ಯಲಕ್ಷ್ಮಿ ಬಾಂಡ್ ನೀಡುತ್ತಿಲ್ಲ. ನೀರಾವರಿ ಯೋಜನೆಗಳು ಸ್ಥಗಿತವಾಗಿವೆ.
ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಮ್ಮ ಅಧಿಕಾರ ಅವ ಮುಗಿಯುತ್ತಿದೆ. ಮುಂದೆ ಬಿಜೆಪಿಯವರು ಅಧಿಕಾರ ನಡೆಸುತ್ತಾರೆ ಎಂಬುದರ ಅರಿವಾಗಿ ಮೈಸೂರಿನಲ್ಲಿ ನಿನ್ನೆ ಆ ರೀತಿ ಮಾತನಾಡಿದ್ದಾರೆ ಎಂದು ಹೇಳಿದರು.