Homeಜಿಲ್ಲಾ ಸುದ್ದಿಗಳುಬಸ್‌‍-ಲಾರಿ ನಡುವೆ ಮುಖಾಮುಖಿ ಡಿಕ್ಕಿ : ಭೀಕರ ಅಪಘಾತದಲ್ಲಿ ನಾಲ್ವರ ದುರ್ಮರಣ

ಬಸ್‌‍-ಲಾರಿ ನಡುವೆ ಮುಖಾಮುಖಿ ಡಿಕ್ಕಿ : ಭೀಕರ ಅಪಘಾತದಲ್ಲಿ ನಾಲ್ವರ ದುರ್ಮರಣ

ಪಿರಿಯಾಪಟ್ಟಣ,ಅ.16-ಸ್ಲೀಪರ್‌ಕೋಚ್‌ ಬಸ್‌‍ ಹಾಗೂ ಟಿಂಬರ್‌ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಭೀಕರ ಅಪಘಾತದಲ್ಲಿ ಬಸ್‌‍ ಚಾಲಕ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಇಂದು ಮುಂಜಾನೆ ಕಿರನಲ್ಲಿ ಗೇಟ್‌ ಬಳಿ ನಡೆದಿದೆ.

ಮೃತಪಟ್ಟವರನ್ನು ಮೈಸೂರು ಮೂಲದ ಬಸ್‌‍ ಚಾಲಕ ಸುನೀಲ್‌ ಹಾಗೂ ಕ್ಲೀನರ್‌ ಸಗೇಶ್‌ (36) ಮತ್ತು ಕೇರಳ ಮೂಲದ ಪ್ರಯಾಣಿಕ ಅಫ್ತಾಬ್‌ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಪ್ರಯಾಣಿಕನ ಹೆಸರು ಸದ್ಯಕ್ಕೆ ತಿಳಿದು ಬಂದಿಲ್ಲ. ಕೊಡಗು ಕಡೆಯಿಂದ ಪಿರಿಯಾಪಟ್ಟಣ ಮಾರ್ಗವಾಗಿ ಮೈಸೂರು ಕಡೆಗೆ ಟಿಂಬರ್‌ ಲೋಡ್‌ ಮಾಡಿಕೊಂಡು ಬರುತ್ತಿದ್ದ ಲಾರಿ ಮತ್ತು ಮೈಸೂರಿನಿಂದ ಕೇರಳ ಕಡೆಗೆ ತೆರಳುತ್ತಿದ್ದ ಸ್ಲೀಪರ್‌ ಕೋಚ್‌ ಬಸ್‌‍ ನಡುವೆ ಇಂದು ಮುಂಜಾನೆ 3.30 ರ ಸುಮಾರಿನಲ್ಲಿ ಪಟ್ಟಣದ ಕಿರನಲ್ಲಿ ಗೇಟ್‌ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಪರಿಣಾಮ ಬಸ್‌‍ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಚಾಲಕ, ಕ್ಲೀನರ್‌ ಹಾಗೂ ಇಬ್ಬರು ಪ್ರಯಾಣಿಕರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಾತ್ರಿ ಭಾರೀ ಮಳೆಯಾಗಿದ್ದು, ಈ ಮಾರ್ಗದಲ್ಲಿ ರಸ್ತೆ ನಡುವೆ ಮರ ಬಿದ್ದಿದೆ. ಲಾರಿ ಚಾಲಕ ಅಲ್ಲಿಗೆ ಬಂದಾಗ ಮರ ಬಿದ್ದಿರುವುದು ಗಮನಿಸಿ ನಿಧಾನವಾಗಿ ಲಾರಿಯನ್ನು ಪಕ್ಕಕ್ಕೆ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಅತೀ ವೇಗವಾಗಿ ಬರುತ್ತಿದ್ದ ಖಾಸಗಿ ಸ್ಲೀಪರ್‌ಕೋಚ್‌ ಬಸ್‌‍ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ರಸ್ತೆ ಬಳಿ ಇದ್ದವರು ತಕ್ಷಣ ನೆರವಿಗೆ ದಾವಿಸಿ ಗಾಯಾಳುಗಳನ್ನು ಬಸ್‌‍ನಿಂದ ಹೊರಗೆ ಕರೆತಂದು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ. 18 ಮಂದಿ ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ.ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪಿರಿಯಾಪಟ್ಟಣ ಠಾಣೆ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ದಾವಿಸಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.ಬಸ್‌‍ನೊಳಗೆ ಸಿಲುಕಿಕೊಂಡು ಮೃತಪಟ್ಟಿದ್ದ ನಾಲ್ವರ ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಬಸ್‌‍ನಲ್ಲಿ ಪ್ರಯಾಣಿಕರು ನಿದ್ರಿಸುತ್ತಿದ್ದ ಸಮಯದಲ್ಲಿ ಅಪಘಾತ ನಡೆದಿರುವುದರಿಂದ ಹೆಚ್ಚಿನ ಜನರಿಗೆ ಗಾಯಗಳಾಗಿವೆ. ಸ್ಲೀಪರ್‌ ಕೋಚ್‌ ಬಸ್‌‍ನಲ್ಲಿ ಹಲವು ಪ್ರಯಾಣಿಕರು ಇದ್ದರು. ಲಾರಿ ಚಾಲಕ ಸೇರಿದಂತೆ 18 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಪಘಾತಕ್ಕೊಳಗಾಗಿರುವ ಬಸ್‌‍ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES
spot_img

Latest News