Homeರಾಷ್ಟ್ರೀಯ'ಗರ್ಬಾಗೆ ಹಿಂದೂಗಳಲ್ಲದವರು ಬರಬಾರದು' ಎಂದು ನಾನು ಹೇಳಿಲ್ಲ ; ಗಾಯಕ ಆದಿತ್ಯ ಗಢ್ವಿ

‘ಗರ್ಬಾಗೆ ಹಿಂದೂಗಳಲ್ಲದವರು ಬರಬಾರದು’ ಎಂದು ನಾನು ಹೇಳಿಲ್ಲ ; ಗಾಯಕ ಆದಿತ್ಯ ಗಢ್ವಿ

ಅಹಮದಾಬಾದ್‌, ಅ. 16 (ಪಿಟಿಐ)- ನವರಾತ್ರಿ ಹಬ್ಬದ ಸಂದರ್ಭದಲ್ಲಿ ಅಹಮದಾಬಾದ್‌ನಲ್ಲಿ ನಡೆದ ಗರ್ಬಾ ಕಾರ್ಯಕ್ರಮವೊಂದರಲ್ಲಿ, ಹಿಂದೂಯೇತರರು ಮತ್ತು ಮುಸ್ಲಿಮರು ಸ್ಥಳದಿಂದ ಹೊರಹೋಗುವಂತೆ ಸೂಚಿಸಿದ ಘಟನೆಗೆ ಸಂಬಂಧಿಸಿದಂತೆ ಜನಪ್ರಿಯ ಗುಜರಾತಿ ಜಾನಪದ ಗಾಯಕ ಆದಿತ್ಯ ಗಢ್ವಿ ಅವರು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ನಿಲುವನ್ನು ಒಪ್ಪಿಲ್ಲ. ಇದು ತಮ್ಮ ಸಂದೇಶವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಗರದ ಶೇಲಾ ರಸ್ತೆಯಲ್ಲಿರುವ ಸವ್ವಾನಾ ಪಾರ್ಟಿ ಪ್ಲಾಟ್‌ನಲ್ಲಿ ಆಯೋಜಿಸಲಾಗಿದ್ದ ‘ರಂಗ್‌ ಮೊರ್ಲಾ ಫೀಚರಿಂಗ್‌ ಆದಿತ್ಯ ಗಢ್ವಿ’ ಕಾರ್ಯಕ್ರಮದ ವೇಳೆ ನಿರೂಪಕ ಹಾಗೂ ರೇಡಿಯೊ ಜಾಕಿ (ಆರ್‌ಜೆ) ಆಕಾಶ್‌ ತ್ರಿವೇದಿ ಅವರು ವೇದಿಕೆಯಿಂದ ಹಿಂದೂಯೇತರರು ಮತ್ತು ಮುಸ್ಲಿಮರು ಸ್ಥಳದಿಂದ ಹೊರಹೋಗುವಂತೆ ಕೇಳಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಕಾರ್ಯಕ್ರಮದಲ್ಲಿ ಆದಿತ್ಯ ಗಢ್ವಿ ಅವರು ಸಂಗೀತ ಪ್ರದರ್ಶನ ನೀಡುತ್ತಿದ್ದರು.

ವಿಡಿಯೊದಲ್ಲಿ ಮಾತನಾಡಿರುವ ತ್ರಿವೇದಿ, “ಹಿಂದೂಯೇತರರು ಮತ್ತು ಮುಸ್ಲಿಮರಲ್ಲಿ ಒಂದು ವಿನಂತಿ. ದಯವಿಟ್ಟು ಈ ಸ್ಥಳದಿಂದ ಹೊರಹೋಗಿ. ಸನಾತನ ಧರ್ಮವನ್ನು ರಕ್ಷಿಸಲು ವಿಶ್ವ ಹಿಂದೂ ಪರಿಷತ್‌ ಇಲ್ಲಿಗೆ ಬಂದಿದೆ” ಎಂದು ಹೇಳಿದ್ದಾರೆ. ಅಲ್ಲದೆ, ಇಂತಹ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಲು 8735873595 ಸಹಾಯವಾಣಿ ಸಂಖ್ಯೆಯನ್ನೂ ಪ್ರಕಟಿಸಿದ್ದಾರೆ.

“ನಿಮ್ಮ ಸುತ್ತಮುತ್ತ ಗಮನವಿಡಿ. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಸಹಾಯವಾಣಿ ಸಂಖ್ಯೆಗೆ ಮಾಹಿತಿ ನೀಡಿ” ಎಂದು ವಿಎಚ್‌ಪಿ ಮನವಿ ಮಾಡಿದೆ ಎಂದು ಆರ್‌ಜೆ ತಿಳಿಸಿದ್ದಾರೆ.

ಗುಜರಾತ್‌ ವಿಎಚ್‌ಪಿ ವಕ್ತಾರ ಹಿತೇಂದ್ರಸಿಂಹ ರಜಪೂತ್‌ ಈ ಘೋಷಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ರಾಜ್ಯದ ಗರ್ಬಾ ಕಾರ್ಯಕ್ರಮಗಳಲ್ಲಿ ಬಜರಂಗದಳದ ಸ್ವಯಂಸೇವಕರು ಇಂತಹ ಕ್ರಮಗಳನ್ನು ಕೈಗೊಳ್ಳುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದು ಅವರು ಹೇಳಿದ್ದಾರೆ.

ಸಾಮಾನ್ಯವಾಗಿ ವಿಎಚ್‌ಪಿಯ ಯುವ ಘಟಕವಾದ ಬಜರಂಗದಳದ ಕಾರ್ಯಕರ್ತರು ಅಹಮದಾಬಾದ್‌ನ ಗರ್ಬಾ ಕಾರ್ಯಕ್ರಮಗಳಿಗೆ ಭೇಟಿ ನೀಡಿ, ಆಯೋಜಕರನ್ನು ಭೇಟಿಯಾಗುತ್ತಾರೆ. ಹಿಂದೂಯೇತರರು ಕಾರ್ಯಕ್ರಮದ ಸ್ಥಳಕ್ಕೆ ಪ್ರವೇಶಿಸದಂತೆ ನೋಡಿಕೊಳ್ಳುವಂತೆ ಮನವಿ ಮಾಡುತ್ತಾರೆ. ಕೆಲವೊಮ್ಮೆ ಕಾರ್ಯಕ್ರಮಕ್ಕೆ ಆಗಮಿಸುವ ಪುರುಷರ ಹಣೆಗೆ ತಿಲಕವಿಟ್ಟು, ಅನುಮಾನಾಸ್ಪದ ವ್ಯಕ್ತಿಗಳನ್ನು ಸ್ಥಳದಿಂದ ಹೊರಗೆ ಕಳುಹಿಸುತ್ತಾರೆ ಎಂದು ರಜಪೂತ್‌ ಪಿಟಿಐಗೆ ತಿಳಿಸಿದ್ದಾರೆ.

RELATED ARTICLES
spot_img

Latest News