ರಾಮನಗರ, ಅ. 17- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡುವುದಕ್ಕೆ ಅಪಾರ ಪ್ರಮಾಣದ ಹಣ ಖರ್ಚಾಗಿದ್ದು, ಜಾರಿ ನಿರ್ದೇಶನಾಲಯ ಮತ್ತು ತೆರಿಗೆ ಇಲಾಖೆ ತನಿಖೆ ನಡೆಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು ಹೇಳಿದರು.
ಬಿಡದಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ರಾಜ್ಯದಲ್ಲಿ ಸ್ಟಿಂಗ್ ಅಪರೇಷನ್ ದೊಡ್ಡದಾಗಿ ಸದ್ದು ಮಾಡುತ್ತಿದೆ. ಸ್ಟಿಂಗ್ ಮಾಡಲು 10ರಿಂದ 15 ಕೋಟಿ ರೂ.ಖರ್ಚು ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಅದರ ಬಗ್ಗೆ ತನಿಖೆ ಅಗತ್ಯವಿದೆ ಎಂದರು.
ನೀವು ಕೇವಲ ಹಣದ ಬಗ್ಗೆ ಯಾಕೆ ಲೆಕ್ಕ ಹಾಕುತ್ತಿರಾ? ಅದೆಲ್ಲ ಹೊರಗೆ ಬಂದರೆ ನಮ್ಮ ರಾಜ್ಯದ ಮಾನ ಮಾರ್ಯಾದೆ ಮೂರು ಕಾಸಿಗೂ ಇರಲ್ಲ. ಇವತ್ತು ಆ ರೀತಿಯ ವಾತಾವರಣ ನಿರ್ಮಾಣ ಆಗಿದೆ. 15 ಕೋಟಿ ರೂ. ಗಿಂತಲೂ ಹೆಚ್ಚಿನ ವ್ಯವಹಾರ ನಡೆದಿದೆ. ಇಡಿ ಏನಾದರೂ ಪ್ರವೇಶವಾದರೆ ಸತ್ಯ ಹೊರಗೆ ಬರುತ್ತದೆ. ಹಣಕಾಸು ಹೇಗೆಲ್ಲ ಹರಿದಾಡಿದೆ ಎಂಬ ಮಾಹಿತಿ ಸಿಗುತ್ತದೆ ಎಂದು ಅವರು ತಿಳಿಸಿದರು.
