Homeಬೆಂಗಳೂರುಸಾಲುಸಾಲು ರಜೆ : ಊರುಗಳತ್ತ ಹೊರಟ ಜನ, ಬೆಂಗಳೂರಲ್ಲಿ ಭಾರಿ ಟ್ರಾಫಿಕ್ ಜಾಮ್

ಸಾಲುಸಾಲು ರಜೆ : ಊರುಗಳತ್ತ ಹೊರಟ ಜನ, ಬೆಂಗಳೂರಲ್ಲಿ ಭಾರಿ ಟ್ರಾಫಿಕ್ ಜಾಮ್

ಬೆಂಗಳೂರು,ಅ.17- ವಾರಾಂತ್ಯ ಹಾಗೂ ದಸರಾದ ಸಾಲುಸಾಲು ರಜೆಯ ಹಿನ್ನಲೆಯಲ್ಲಿ ಊರಿನತ್ತ ತೆರಳಲು ಜನರು ಬಸ್‌‍ ನಿಲ್ದಾಣಗಳಿಗೆ ಬರುತ್ತಿದ್ದು, ಎಲ್ಲೆಲ್ಲೂ ಜನವೋ ಜನ, ಟ್ರಾಫಿಕ್ಕೋ ಟ್ರಾಫಿಕ್ಕು.

ದಸರಾ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಜನರು ತಮತಮ ಊರುಗಳತ್ತ ಪ್ರಯಾಣ ಬೆಳೆಸಿದ್ದು, ರಾತ್ರಿಯೇ ಮೆಜೆಸ್ಟಿಕ್‌ನ ಕೆಎಸ್‌‍ಆರ್‌ಟಿಸಿ ಬಸ್‌‍ನಿಲ್ದಾಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ್ದು, ಮಳೆಯಿಂದ ಸಂಚಾರದಟ್ಟಣೆ ಉಂಟಾಗಿ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ಘಂಟೆಗಟ್ಟಲೆ ಕಾದುಕಾದು ಹೈರಾಣರಾದ ದೃಶ್ಯ ಮೆಜೆಸ್ಟಿಕ್‌ ಸುತ್ತಮುತ್ತ ಕಂಡುಬಂದಿತು.

ಸಾಮಾನ್ಯ ದಿನಗಳಲ್ಲೇ ಕೆಂಪೇಗೌಡ ಬಸ್‌‍ ನಿಲ್ದಾಣದ ಸುತ್ತಮುತ್ತ ಸಂಚಾರದಟ್ಟಣೆ ಇರುತ್ತದೆ. ಇನ್ನು ಹಬ್ಬದ ಸಂದರ್ಭಗಳಲ್ಲಿ ಕೇಳುವುದೇ ಬೇಡ.. ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.ಮೆಜೆಸ್ಟಿಕ್‌, ಮಲ್ಲೇಶ್ವರಂ, ರಾಜಾಜಿನಗರ, ಪೀಣ್ಯ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಹೆಬ್ಬಾಳ, ಯಶವಂತಪುರ, ಗೊರಗುಂಟೆಪಾಳ್ಯ, ಆನೇಕಲ್‌ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚಾರದಟ್ಟಣೆ ಕಂಡುಬಂದಿತು.

ಇಂದು ಮುಂಜಾನೆಯೂ ಸಹ ಬಸ್‌‍ ನಿಲ್ದಾಣಗಳಿಗೆ ಪ್ರಯಾಣಿಕರು ಬಂದಿದ್ದು, ತಾ ಮುಂದು ನಾ ಮುಂದು ಎಂಬಂತೆ ಸೀಟು ಹಿಡಿಯಲು ಮುಂದಾಗಿದ್ದ ದೃಶ್ಯಗಳು ಮೆಜೆಸ್ಟಿಕ್‌ನಲ್ಲಿ ಕಂಡುಬಂದವು.
ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಬಸ್‌‍ಗಳನ್ನು ಕೆಎಸ್‌‍ಆರ್‌ಟಿಸಿ ಒದಗಿಸಿದ್ದರೂ ಸಹ ಪ್ರಯಾಣಿಕರ ಸಂಖ್ಯೆ ಮಾತ್ರ ಕಡಿಮೆ ಇರಲಿಲ್ಲ. ಸಾರಿಗೆ ಬಸ್‌‍ಗಳ ಜೊತೆಗೆ ಖಾಸಗಿ ಬಸ್‌‍ಗಳಲ್ಲೂ ಮುಂಗಡ ಬುಕ್ಕಿಂಗ್‌ ಮಾಡಿಕೊಂಡಿದ್ದ ಜನರು ಬಸ್‌‍ಗಳನ್ನಿಡಿದು ತೆರಳುತ್ತಿದ್ದರು.

ಸಂಚಾರಿ ಪೊಲೀಸರು ಸಂಚಾರದಟ್ಟಣೆ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಸರ್ಕಾರಿ, ಖಾಸಗಿ ಕಚೇರಿ ಹಾಗೂ ಕೈಗಾರಿಕೆಗಳಲ್ಲಿ ಇಂದು ಪೂಜೆ ಸಲ್ಲಿಸಿದ್ದು, ಪೂಜೆ ಮುಗಿಸಿಕೊಂಡು ಉದ್ಯೋಗಿಗಳು ಇಂದು ಮಧ್ಯಾಹ್ನದಿಂದಲೇ ಸಾಲುಸಾಲು ರಜೆ ಹಾಕಿ ಊರುಗಳತ್ತ ತೆರಳಿದರು.

ಟೋಲ್‌ಗಳಲ್ಲೂ ಜಾಮ್‌ ಜಾಮ್‌ :
ತುಮಕೂರು ರಸ್ತೆಯ ಎಂಟನೇ ಮೈಲಿ ಟೋಲ್‌, ಮಾದಾವರ, ನೆಲಮಂಗಲ, ನೈಸ್‌‍ ರಸ್ತೆ, ಏರ್‌ಪೋರ್ಟ್‌ ರಸ್ತೆ, ಮೈಸೂರು ರಸ್ತೆಯ ಟೋಲ್‌ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

RELATED ARTICLES
spot_img

Latest News