ಮಧುಗಿರಿ,ಅ.17- ರಾಜ್ಯದ ಮುಖ್ಯಮಂತ್ರಿ ಸರಿಯಾಗಿ ಆಡಳಿತ ನಡೆಸುತ್ತಿಲ್ಲ. ಅಧಿಕಾರಿಗಳಿಗೆ ಬೆದರಿಕೆ ಹಾಕಿ ಆಡಳಿತ ನಡೆಸುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಆರೋಪಿಸಿದರು. ಪಟ್ಟಣದಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಂ. ಸುರೇಶ್ ಪರವಾಗಿ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದ ಅವರು, ದೇಶದಾದ್ಯಂತ ಎಸ್ಐಆರ್ ಕಾರ್ಯಕ್ರಮ ಸಮರ್ಪಕವಾಗಿ ನಡೆಯುತ್ತಿದೆ ಎಂದರು.
ಎಸ್ಐಆರ್ ವಿಚಾರವಾಗಿ ಕೊಪ್ಪಳದಲ್ಲಿ ವಿಡಿಯೋ ಕಾನ್ಫರ್ಸೆ್ ಮೂಲಕ ಮುಖ್ಯಮಂತ್ರಿಗಳು ಡಿಸಿಯವರನ್ನು ವಿಚಾರಿಸುತ್ತಿದ್ದಾಗ 48 ಸಾವಿರ ಮತಗಳು ಡಿಲೀಟ್ ಆಗಿರುವ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಆಗ ಅಧಿಕಾರಿಗಳು ಹೊರರಾಜ್ಯದಿಂದ ಬಂದು ವಾಪಸ್ ಹೋಗಿರುವವರು, ಮತಪಟ್ಟಿರುವವರು ಹಾಗೂ ಎರಡು ಮೂರು ಕಡೆ ಮತ ಇರುವವರು ಎಲ್ಲರನ್ನು ಡಿಲೀಟ್ ಮಾಡಿರುವ ಬಗ್ಗೆ ಮಾಹಿತಿ ನೀಡಿದಾಗ ಸಿಎಂ ಅಸಮಾಧಾನ ವ್ಯಕ್ತಪಡಿಸಿರುವುದು ಅವರ ಬೆದರಿಕೆಯ ದೋರಣೆಯನ್ನು ತೋರಿಸುತ್ತದೆ ಎಂದು ದೂರಿದರು.
ಮೋದಿ ಇಲ್ಲದ ದೇಶ ಊಹಿಸಲೂ ಸಾಧ್ಯವಿಲ್ಲ:
ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಮಾತನಾಡಿದ ಸೋಮಣ್ಣ, ಮೋದಿ ಇಲ್ಲದ ದೇಶವನ್ನು ಊಹಿಸಲೂ ಸಾಧ್ಯವಿಲ್ಲ. ದೇಶದ 25 ಕೋಟಿ ಅಸಹಾಯಕ ಕುಟುಂಬಗಳನ್ನು ಮೋದಿ ಸಮಾಜದ ಮುಖ್ಯ ವಾಹಿನಿಗೆ ತಂದಿದ್ದಾರೆ. ಗಾಂಭಿರ್ಯ ಇಲ್ಲದ ಓರ್ವ ಮುಖ್ಯಮಂತ್ರಿ ರಾಜ್ಯದ ಚುನಾವಣಾಧಿಕಾರಿ ಕಚೇರಿಗೆ ಹೋಗಿ ಕುಳಿತಿದ್ದಾರೆ. ಎಸ್ಐಆರ್ ಒಂದೇ ಸದ್ಯ ಕಾಂಗ್ರೆಸ್ ಬತ್ತಳಿಕೆಯಲ್ಲಿರುವ ಅಸ್ತ್ರ ಎಂದು ಲೇವಡಿ ಮಾಡಿದರು.
ಮಿಂಚಿನ ಪ್ರಚಾರ : ಮಧುಗಿರಿಯಲ್ಲಿ ಸೋಮಣ್ಣ ಆಗ್ನೇಯ ಪದವೀಧರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಸುರೇಶ್ ಪರ ಮಿಂಚಿನ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ವಿಧಾನ ಪರಿಷತ್ ಸದಸ್ಯ ಚಿದಾನಂದ ಗೌಡ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಶ್ರೀ ಹನುಮಂತ ಜೆಡಿಎಸ್ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಜಿ.ಪಂ ಮಾಜಿ ಅಧ್ಯಕ್ಷ ಹುಚ್ಚಯ್ಯ, ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್, ಪುರಸಭಾ ಮಾಜಿ ಸದಸ್ಯರಾದ ಜಗನ್ನಾಥ್, ಚಂದ್ರಶೇಖರ್ ಬಾಬು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕಷ್ಣಪ್ಪ, ಎಲ್ ಸಿ ನಾಗರಾಜು, ಚಿಕ್ಕ ಒಬ್ಬಳರೆಡ್ಡಿ, ಪಾಂಡುರಂಗ ರೆಡ್ಡಿ ಇತರರಿದ್ದರು.
