ಬೆಂಗಳೂರು, ಅ.17- ನವರಾತ್ರಿ, ಆಯುಧ ಪೂಜೆ, ವಿಜಯದಶಮಿ ಹಾಗೂ ದಸರಾ ರಜೆಗಳ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ ಪ್ರಯಾಣದ ದರ ಆಘಾತ ತೀವ್ರವಾಗಿದೆ.ಹಬ್ಬದ ಸಂಭ್ರಮದಲ್ಲಿ ಊರಿಗೆ ತೆರಳಬೇಕಾದ ಅನಿವಾರ್ಯತೆ ಒಂದೆಡೆಯಾದರೆ, ದುಬಾರಿ ಟಿಕೆಟ್ ಖರೀದಿಸುವ ಸಂಕಷ್ಟ ಮತ್ತೊಂದೆಡೆಯಾಗಿದೆ.
ಆನ್ಲೈನ್ ಟಿಕೆಟ್ ದರಗಳ ಕುರಿತ ಮಾಹಿತಿಯ ಪ್ರಕಾರ, ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ವಿವಿಧ ಬಗೆಯ ಖಾಸಗಿ ಬಸ್ಗಳ ದರಗಳಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬಂದಿದೆ.ಬೆಂಗಳೂರು ಸೇರಿದಂತೆ ದಸರಾ ರಜೆ ಹಿನ್ನೆಲೆಯಲ್ಲಿ ಖಾಸಗಿ ಸ್ಲೀಪರ್ ಬಸ್ಗಳ ದರ 500ರಿಂದ 1,100ಕ್ಕೆ ಏರಿರುವುದಾಗಿ ತಿಳಿದು ಬಂದಿದೆ. ಇದು ಶೇ. 120ರಷ್ಟು ಏರಿಕೆಯಾಗಿದೆ.
ಬೆಂಗಳೂರು-ಮಂಗಳೂರು ಮಾರ್ಗದಲ್ಲಿ 1400 ರೂ. ಬೆಂಗಳೂರು-ಹುಬ್ಬಳ್ಳಿ ಮಾರ್ಗಕ್ಕೆ 1600 ರೂ, ಬೆಂಗಳೂರು-ಹೊಸಪೇಟೆ 1300 ರೂ., ಬೇಂಗಳೂರು-ಶಿವಮೊಗ್ಗ 1000 ರೂ. ಗಳಿಗಿಂತಲೂ ಹೆಚ್ಚಿನ ದರ ನಿಗದಿಯಾಗಿದೆ. ಬೆಂಗಳೂರು ರಾಜ್ಯದ ಪ್ರಮುಖ ಉದ್ಯೋಗ, ಶಿಕ್ಷಣ ಮತ್ತು ವ್ಯಾಪಾರ ಕೇಂದ್ರವಾಗಿರುವುದರಿಂದ ಇಲ್ಲಿಂದ ಮಂಗಳೂರು, ಉಡುಪಿ, ಕುಂದಾಪುರ, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಲಬುರಗಿ, ಬಳ್ಳಾರಿ, ದಾವಣಗೆರೆ, ಮೈಸೂರು ಹಾಗೂ ಇತರ ನಗರಗಳಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ.
ಹಬ್ಬದ ಸಂದರ್ಭದಲ್ಲಿ ಕುಟುಂಬದ ನಾಲ್ಕು ಅಥವಾ ಐದು ಸದಸ್ಯರು ಒಟ್ಟಿಗೆ ಪ್ರಯಾಣಿಸಿದರೆ, ಸಾಮಾನ್ಯ ದಿನಗಳಿಗಿಂತ ಸಾವಿರಾರು ರೂಪಾಯಿ ಹೆಚ್ಚುವರಿ ವೆಚ್ಚವಾಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು, ಕಡಿಮೆ ವೇತನದ ಉದ್ಯೋಗಿಗಳು, ವಯೋವೃದ್ಧರು ಮತ್ತು ಮಕ್ಕಳೊಂದಿಗೆ ಪ್ರಯಾಣಿಸುವ ಕುಟುಂಬಗಳಿಗೆ ಈ ಹೊರೆ ಮತ್ತಷ್ಟು ತೀವ್ರವಾಗುತ್ತದೆ.
ಬಸ್ ನಿರ್ವಾಹಕರು ಬೇಡಿಕೆ, ನಿರ್ವಹಣಾ ವೆಚ್ಚ, ಇಂಧನ, ಸಿಬ್ಬಂದಿ ವೇತನ ಹಾಗೂ ಖಾಲಿಯಾಗಿ ಹಿಂದಿರುಗುವ ಬಸ್ಗಳ ವೆಚ್ಚವನ್ನು ದರ ಏರಿಕೆಗೆ ಸಮರ್ಥನೆ ನೀಡುತ್ತಿದ್ದಾರೆ. ಆದರೆ ಪ್ರಯಾಣಿಕರಿಗೆ ಅಗತ್ಯವಿರುವ ಸಮಯದಲ್ಲೇ ದರವನ್ನು ಹಲವು ಪಟ್ಟು ಹೆಚ್ಚಿಸುವುದು ಎಷ್ಟು ಸಮಂಜಸ ಎಂಬುದು ಚರ್ಚೆಯ ವಿಷಯವಾಗಿದೆ.
ಖಾಸಗಿ ಬಸ್ಗಳ ದರ ಅನಿಯಂತ್ರಿತವಾಗಿ ಏರಿಕೆಯನ್ನು ತಡೆಯುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕಳೆದ ತಿಂಗಳ ಗಣೇಶ ಹಬ್ಬದ ಸಂದರ್ಭದಲ್ಲಿ ಅತಿಯಾದ ದರ ವಸೂಲಿ ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗಳ ವಿರುದ್ಧ ರಾಜ್ಯಾದ್ಯಂತ ಐದು ದಿನಗಳ ವಿಶೇಷ ಕಾರ್ಯಾಚರಣೆಯನ್ನು ಸಾರಿಗೆ ಇಲಾಖೆ ನಡೆಸಿತ್ತು. ಆ ವೇಳೆ 14,987 ಖಾಸಗಿ ಬಸ್ಗಳನ್ನು ತಪಾಸಣೆ ನಡೆಸಿ, 3,756 ಪ್ರಕರಣಗಳನ್ನು ದಾಖಲಿಸಲಾಗಿತ್ತು. 33 ವಾಹನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಒಟ್ಟು 73.6 ಲಕ್ಷ ದಂಡ ಸಂಗ್ರಹಿಸಲಾಗಿತ್ತು. ಬೆಂಗಳೂರು-ಹುಬ್ಬಳ್ಳಿ ಪ್ರಯಾಣಕ್ಕೆ ಒಬ್ಬ ಪ್ರಯಾಣಿಕರಿಂದ 7,000 ವಸೂಲಿ ಮಾಡಿದ ಪ್ರಕರಣವೂ ನಡೆದಿತ್ತು.
ಹಬ್ಬದ ಅವಧಿಯಲ್ಲಿ ದರ ಏರಿಕೆಯ ವಿರುದ್ಧ ಕೇವಲ ತಪಾಸಣೆ ಮತ್ತು ದಂಡ ವಿಧಿಸುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ ಎಂಬ ಆಕ್ಷೇಪಗಳಿವೆ.ಪ್ರತಿಯೊಂದು ಖಾಸಗಿ ಬಸ್ ನಿರ್ವಾಹಕರು ಸಾಮಾನ್ಯ ದಿನದ ದರ, ಹಬ್ಬದ ದಿನದ ದರ ಹಾಗೂ ಹೆಚ್ಚುವರಿ ಶುಲ್ಕಗಳ ವಿವರಗಳನ್ನು ಸ್ಪಷ್ಟವಾಗಿ ಪ್ರಕಟಿಸುವ ವ್ಯವಸ್ಥೆ ರೂಪಿಸಬೇಕಿದೆ.
ಆನ್ಲೈನ್ನಲ್ಲಿ ಹೆಚ್ಚಿನ ದರ ಕಂಡುಬಂದಾಗ ಪ್ರಯಾಣಿಕರು ತಕ್ಷಣ ದೂರು ಸಲ್ಲಿಸಲು ಸರಳ ವ್ಯವಸ್ಥೆ ಕಲ್ಪಿಸುವುದು. ಹಬ್ಬದ ರಜೆ ಆರಂಭವಾಗುವ ಮೊದಲು ಆನ್ಲೈನ್ ಟಿಕೆಟ್ ದರಗಳ ಪರಿಶೀಲನೆ ನಡೆಸುವುದು. ಅನ್ವಯಿಸುವ ಕಾನೂನು ಮತ್ತು ಪರವಾನಗಿ ನಿಯಮಗಳ ಪ್ರಕಾರ ಅತಿಯಾದ ದರ ವಸೂಲಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದು.
ಬೇಡಿಕೆ ಹೆಚ್ಚಿರುವ ಮಾರ್ಗಗಳಲ್ಲಿ ಕೆಎಸ್ಆರ್ಟಿಸಿ ಹೆಚ್ಚುವರಿ ಬಸ್ ಸೇವೆಗಳನ್ನು ಕಲ್ಪಿಸಿ ಖಾಸಗಿ ಬಸ್ಗಳ ಮೇಲಿನ ಒತ್ತಡ ಕಡಿಮೆ ಮಾಡುವ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕಿದೆ.
ದಸರಾ ಆಯುಧಪೂಜೆ ಆಂಗವಾಗಿ ಹೆಚ್ಚುವರಿಯಾಗಿ 3 ಸಾವಿರ ಬಸ್ಗಳ ಸೇವೆಯನ್ನು ಆರಂಭಿಸಿರುವುದಾಗಿ ಸಾರಿಗೆ ನಿಗಮಗಳು ಹೇಳುತ್ತಿವೆ. ದಸರಾ ಅಂಗವಾಗಿ ಮೈಸೂರಿಗೆ 700 ಬಸ್ಗಳನ್ನು ನಿಯೋಜಿಸಲಾಗಿದೆ. ಅದರೂ ಒತ್ತಡ ಕಡಿಮೆಯಾಗಿಲ್ಲ.
ಹಬ್ಬಗಳು ಜನರ ಸಂತೋಷ, ಕುಟುಂಬದ ಒಗ್ಗಟ್ಟು ಮತ್ತು ಸಾಂಸ್ಕೃತಿಕ ಸಂಭ್ರಮದ ಸಂಕೇತ. ಆದರೆ ಆ ಸಂಭ್ರಮಕ್ಕಾಗಿ ಊರಿಗೆ ತೆರಳುವ ಪ್ರಯಾಣಿಕರು ದುಬಾರಿ ಟಿಕೆಟ್ ದರದ ಹೊರೆ ಹೊರುವಂತಾಗುವುದು ವಿಷಾದನೀಯ.ಖಾಸಗಿ ಬಸ್ಗಳ ಕಾರ್ಯಾಚರಣೆಯ ವೆಚ್ಚ ಮತ್ತು ವಾಣಿಜ್ಯ ಹಿತಾಸಕ್ತಿಗಳನ್ನು ಪರಿಗಣಿಸುವುದು ಅಗತ್ಯವಾದರೂ, ಪ್ರಯಾಣಿಕರ ಹಿತಾಸಕ್ತಿಯೂ ಅಷ್ಟೇ ಮುಖ್ಯ ಎಂಬ ವಾದಗಳಿವೆ. ನಿಯಮಬಾಹಿರ ದರ ವಸೂಲಿಯನ್ನು ತಡೆಯಲು ಸರ್ಕಾರದ ಕ್ರಮಗಳು ನಿರಂತರವಾಗಿರಬೇಕು. ದೂರು ಬಂದ ನಂತರವೇ ಕಾರ್ಯಾಚರಣೆ ನಡೆಸುವುದಕ್ಕಿಂತ, ಹಬ್ಬದ ಅವಧಿಯ ಬೇಡಿಕೆಯನ್ನು ಮುಂಚಿತವಾಗಿ ಅಂದಾಜಿಸಿ ನಿಯಂತ್ರಣ ಮತ್ತು ಪರ್ಯಾಯ ಸಾರಿಗೆ ವ್ಯವಸ್ಥೆಗಳನ್ನು ರೂಪಿಸುವುದು ಸೂಕ್ತ.
