ಬೆಂಗಳೂರು, ಅ.17- ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಇಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.ಇಂದು ಸಂಜೆ ವಿಶೇಷ ವಿಮಾನದಲ್ಲಿ ಬೆಳಗಾವಿಗೆ ತಲುಪಲಿರುವ ಡಿ.ಕೆ.ಶಿವಕುಮಾರ್ ಅಲ್ಲಿಂದ ಕಿತ್ತೂರಿಗೆ ತೆರಳಿ ಅಲ್ಲಿ ರೈತರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.
ಪ್ರತಿ ಟನ್ ಕಬ್ಬಿಗೆ 6000 ರೂ. ಎಫ್ಆರ್ಪಿ ದರ ನಿಗದಿ ಮಾಡಬೇಕು. ಪ್ರತಿ ಕೆ.ಜಿ. ಸಕ್ಕರೆಗೆ 60 ರೂ. ಎಂಆರ್ಪಿ ನಿಗದಿ ಮಾಡಬೇಕು. ರಾಜ್ಯದಲ್ಲಿ ಉತ್ಪಾದನೆಯಾಗುವ ಎಥೆನಾಲ್ ಅನ್ನು ಪೂರ್ಣ ಪ್ರಮಾಣದಲ್ಲಿ ಕೇಂದ್ರ ಸರ್ಕಾರ ನೇರವಾಗಿ ಖರೀದಿಸಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ಕಳೆದ ಸೋಮವಾರ ಮಧ್ಯರಾತ್ರಿಯಿಂದ ಹೆದ್ದಾರಿ ತಡೆ ಆರಂಭಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಳಗಾವಿ, ಬಾಗಲಕೋಟೆ, ಹಾವೇರಿ, ರಾಯಚೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಸೇರಿದಂತೆ ವಿವಿಧ ಕಡೆಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಗಾಗಿ ಅಧ್ಯಯನಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಿದೆ.
ಆದರೆ ರೈತರು ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ. ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಡೆಸುವುದಾಗಿ ಪಟ್ಟು ಹಿಡಿದಿದ್ದಾರೆ.ಹೆದ್ದಾರಿ ತಡೆ ಜೊತೆಗೆ ರೈತರ ಪಾದಯಾತ್ರೆ ಕೂಡ ಆರಂಭವಾಗಿದೆ. ಹುಕ್ಕೇರಿಯ ಹತ್ತರಗಿ ಟೋಲ್ನಿಂದ ಆರಂಭವಾಗಿರುವ ಪಾದಯಾತ್ರೆ ಇಂದು ಕಿತ್ತೂರು ತಲುಪಿದೆ. ಪ್ರತಿಭಟನೆಯಲ್ಲಿ ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಭಾಗಿಯಾಗಿದ್ದಾರೆ.
ಬಹುತೇಕ ಬೇಡಿಕೆಗಳು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದಾಗಿವೆ. ರಾಜ್ಯ ಸರ್ಕಾರ ಕಬ್ಬು ಹಾಗೂ ಅದರ ಉತ್ಪನ್ನಗಳಿಂದ ವಸೂಲಿ ಮಾಡುವ ತೆರಿಗೆಯಲ್ಲಿ ಪ್ರತಿ ಟನ್ಗೆ 1 ಸಾವಿರ ರೂ. ಬೆಂಬಲ ಬೆಲೆ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರ ರೈತರ ಬೇಡಿಕೆಗಳ ವಿಚಾರವಾಗಿ ಸಕಾರಾತಕವಾಗಿ ವಿವಿಧ ಹಂತಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ಯಾರೂ ತಾಳೆ ಕಳೆದುಕೊಳ್ಳಬಾರದು, ಸಹನೆಯಿಂದಿರಬೇಕು ಎಂದು ಡಿ.ಕೆ.ಶಿವಕುಮಾರ್ ಕರೆ ನೀಡಿದರು. ಇಂದು ಖುದ್ದು ರೈತರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತಿದ್ದಾರೆ.
