ನವದೆಹಲಿ, ಅ. 17: ಹಾರ್ಮುಜ್ ಜಲಸಂಧಿಯಲ್ಲಿ 15 ಭಾರತೀಯ ನಾವಿಕರನ್ನು ಹೊತ್ತೊಯ್ಯುತ್ತಿದ್ದ ಕಚ್ಚಾ ತೈಲ ಟ್ಯಾಂಕರ್ ಒಂದರ ಮೇಲೆ ಕ್ಷಿಪಣಿ ಅಪ್ಪಳಿಸಿದೆ. ರೊಮೇನಿಯಾದ ಸುಲಿನಾ ಆಂಕೊರೇಜ್ನಲ್ಲಿ ಒಂಬತ್ತು ಭಾರತೀಯ ನಾವಿಕರಿದ್ದ ರಾಸಾಯನಿಕ ಟ್ಯಾಂಕರ್ ಒಂದರ ಮೇಲೆ ಡ್ರೋನ್ ದಾಳಿ ನಡೆದಿದೆ ಎಂದು ಕೇಂದ್ರ ಬಂದರು, ಹಡಗು ಸಾರಿಗೆ ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ತಿಳಿಸಿದ್ದಾರೆ. ಈ ಎರಡೂ ಹಡಗುಗಳಲ್ಲಿದ್ದ ಒಟ್ಟು 24 ಭಾರತೀಯ ನಾವಿಕರು ಸುರಕ್ಷಿತವಾಗಿದ್ದು, ಯಾವುದೇ ಸಾವು-ನೋವು ಅಥವಾ ಗಾಯಗಳಾಗಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 16ರಂದು 15 ಭಾರತೀಯ ನಾವಿಕರಿದ್ದ ಎಂಟಿ ಎಸ್ಟಿ 3 ಎಂಬ ಕಚ್ಚಾ ತೈಲ ಟ್ಯಾಂಕರ್ ಮೇಲೆ ಹಾರ್ಮುಜ್ ಜಲಸಂಧಿಯಲ್ಲಿ ಕ್ಷಿಪಣಿಯಂತಹ ಅಸ್ತ್ರವೊಂದು ಅಪ್ಪಳಿಸಿದೆ. ಇದಲ್ಲದೆ, ಅಕ್ಟೋಬರ್ 14ರಂದು ರೊಮೇನಿಯಾದ ಸುಲಿನಾ ಆಂಕೊರೇಜ್ನಲ್ಲಿ ಒಂಬತ್ತು ಭಾರತೀಯ ನಾವಿಕರಿದ್ದ ಯಾರಾ ಜೆ ಎಂಬ ರಾಸಾಯನಿಕ ಟ್ಯಾಂಕರ್ ಮೇಲೆ ಡ್ರೋನ್ ದಾಳಿ ನಡೆದಿದೆ ಎಂದು ಸಚಿವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಈ ಎರಡೂ ಘಟನೆಗಳನ್ನು ನಾವು ನಿರಂತರವಾಗಿ ಗಮನಿಸುತ್ತಿದ್ದೇವೆ. ನಮ್ಮ ಸಿಬ್ಬಂದಿಯ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಹಡಗು ನಿರ್ವಹಣಾ ಕಂಪನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
