Homeಅಂತಾರಾಷ್ಟ್ರೀಯಭಾರತದಲ್ಲಿ ಅತಿವೇಗದ ಇಂಟರ್ನೆಟ್‌ ಸೇವೆ ಒದಗಿಸಲು ಸಿದ್ಧ : ಸ್ಟಾರ್‌ಲಿಂಕ್‌ ಘೋಷಣೆ

ಭಾರತದಲ್ಲಿ ಅತಿವೇಗದ ಇಂಟರ್ನೆಟ್‌ ಸೇವೆ ಒದಗಿಸಲು ಸಿದ್ಧ : ಸ್ಟಾರ್‌ಲಿಂಕ್‌ ಘೋಷಣೆ

ನವದೆಹಲಿ, ಅ. 17 (ಪಿಟಿಐ)- ಭಾರತದಲ್ಲಿ ಅತಿವೇಗದ ಇಂಟರ್ನೆಟ್‌ ಸೇವೆಗಳನ್ನು ಒದಗಿಸಲು ಸಿದ್ಧವಾಗಿರುವುದಾಗಿ ಎಲೋನ್‌ ಮಸ್ಕ್‌ ನೇತೃತ್ವದ ಸ್ಟಾರ್‌ಲಿಂಕ್‌ ಘೋಷಿಸಿದೆ. ಕಳೆದ ಐದು ವರ್ಷಗಳಿಗೂ ಹೆಚ್ಚು ಕಾಲ ಭಾರತೀಯ ನಿಯಂತ್ರಕರು, ಉದ್ಯಮ ವಲಯ ಮತ್ತು ಟೆಲಿಕಾಂ ಆಪರೇಟರ್‌ಗಳೊಂದಿಗೆ ಕೆಲಸ ಮಾಡಿದ್ದು, ಸರ್ಕಾರದ ಅಗತ್ಯ ಅನುಮೋದನೆಗಳೊಂದಿಗೆ ದೇಶದಲ್ಲಿ ಪ್ರತ್ಯೇಕ ಮೂಲಸೌಕರ್ಯವನ್ನು ನಿರ್ಮಿಸಿರುವುದಾಗಿ ಸ್ಟಾರ್‌ಲಿಂಕ್‌ ಎಕ್ಸ್‌ (X) ನಲ್ಲಿ ತಿಳಿಸಿದೆ.

ಸ್ಟಾರ್‌ಲಿಂಕ್‌ ತನ್ನ ಪೋಸ್ಟ್‌ನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ನೀಡಿದ ಹೇಳಿಕೆಯನ್ನೂ ಟ್ಯಾಗ್‌ ಮಾಡಿದೆ. ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಸಂಸ್ಥೆಯು ಉಪಗ್ರಹ ಸಂವಹನ ಕ್ಷೇತ್ರದಲ್ಲಿ ಸ್ಟಾರ್‌ಲಿಂಕ್‌ ಸೇರಿದಂತೆ ಇತರ ಸಂಸ್ಥೆಗಳಿಂದ ಎದುರಾಗುವ ಪೈಪೋಟಿಯನ್ನು ಸ್ವಾಗತಿಸುವುದಾಗಿ ಹೇಳಿದೆ. ಆದರೆ, ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಂಸ್ಥೆಗಳೂ ಭಾರತೀಯ ಕಾನೂನುಗಳನ್ನು ಪಾಲಿಸುವುದು ಕಡ್ಡಾಯ ಎಂದು ಒತ್ತಿಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸ್ಟಾರ್‌ಲಿಂಕ್‌, ಭಾರತೀಯ ಬಳಕೆದಾರರಿಗೆ ಸುರಕ್ಷಿತವಾಗಿ ಮತ್ತು ಭದ್ರವಾಗಿ ಸೇವೆ ಒದಗಿಸುವ ಉದ್ದೇಶದಿಂದ ದೇಶದೊಳಗೇ ಪ್ರತ್ಯೇಕ ವ್ಯವಸ್ಥೆಗಳು, ಗೇಟ್‌ವೇಗಳು ಮತ್ತು ಇತರ ಮೂಲಸೌಕರ್ಯಗಳನ್ನು ನಿರ್ಮಿಸಲಾಗಿದೆ. ಇವೆಲ್ಲವನ್ನೂ ಸರ್ಕಾರದ ಅಗತ್ಯ ಅನುಮೋದನೆಗಳೊಂದಿಗೆ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಭಾರತವನ್ನು ಅತಿವೇಗದ ಇಂಟರ್ನೆಟ್‌ ಸಂಪರ್ಕದೊಂದಿಗೆ ಜೋಡಿಸಲು ತಾವು ಸಿದ್ಧವಾಗಿರುವುದಾಗಿಯೂ ಸ್ಟಾರ್‌ಲಿಂಕ್‌ ಪುನರುಚ್ಚರಿಸಿದೆ. ಭಾರತದ ಉಪಗ್ರಹ ಸಂವಹನ ಮಾರುಕಟ್ಟೆಯಲ್ಲಿ ಪೈಪೋಟಿ ಕುರಿತು ಸಾರ್ವಜನಿಕವಾಗಿ ವಾಗ್ವಾದ ನಡೆಯುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಎಲೋನ್‌ ಮಸ್ಕ್‌ ಅವರು ಭಾರತದ ಉಪಗ್ರಹ ಸಂವಹನ ವಲಯದ ಬಗ್ಗೆ ಟೀಕೆ ವ್ಯಕ್ತಪಡಿಸಿ, ಇಲ್ಲಿನ ಸ್ಪರ್ಧಾತ್ಮಕ ವಾತಾವರಣದ ಕುರಿತು ಪ್ರಶ್ನೆಗಳನ್ನು ಎತ್ತಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಿಲಯನ್ಸ್‌, ಯಾವ ಸಂಸ್ಥೆಯು ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುತ್ತದೆ ಎಂಬುದನ್ನು ನಿರ್ಧರಿಸಲು ಸ್ಪರ್ಧಾತ್ಮಕ ಮಾರುಕಟ್ಟೆಯೇ ಸೂಕ್ತ ವೇದಿಕೆ ಎಂದು ಹೇಳಿತ್ತು. ಅಲ್ಲದೆ, ಭಾರತದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಂದು ಕಂಪನಿಯೂ ದೇಶದ ಕಾನೂನುಗಳನ್ನು ಪಾಲಿಸಲೇಬೇಕು ಎಂದು ಸ್ಪಷ್ಟಪಡಿಸಿತ್ತು.

RELATED ARTICLES
spot_img

Latest News