Homeರಾಷ್ಟ್ರೀಯಶೇ.100ರಷ್ಟು ಸುಂಕ ವಿಧಿಸುವ ನಿರ್ಧಾರದಿಂದ ಹಿಂದೆ ಸರಿದ ಟ್ರಂಪ್ : ಭಾರತ ನಿರಾಳ

ಶೇ.100ರಷ್ಟು ಸುಂಕ ವಿಧಿಸುವ ನಿರ್ಧಾರದಿಂದ ಹಿಂದೆ ಸರಿದ ಟ್ರಂಪ್ : ಭಾರತ ನಿರಾಳ

ನವದೆಹಲಿ, ಅ. 17- ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಭಾರತದಂತಹ ದೇಶಗಳ ಮೇಲೆ ಶೇ. 100ರವರೆಗೆ ಸುಂಕ ವಿಧಿಸುವ ಕ್ರಮದಿಂದ ಅಮೆರಿಕ ಹಿಂದೆ ಸರಿದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೊಸ ಆದೇಶ ಹೊರಡಿಸಿದ್ದು, ರಷ್ಯಾ ಸಂಬಂಧಿತ ಕೆಲವು ನಿರ್ಬಂಧಗಳು ಮತ್ತು ಸುಂಕಗಳು ಜಾರಿಗೆ ಬರುವ ಮುನ್ನವೇ ವಿನಾಯಿತಿ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ಭಾರತ ಮತ್ತು ಚೀನಾ ಸೇರಿದಂತೆ ರಷ್ಯಾದಿಂದ ತೈಲ ಖರೀದಿಸುವ ಹಲವು ದೇಶಗಳಿಗೆ ತಾತ್ಕಾಲಿಕ ನಿರಾಳತೆ ಸಿಕ್ಕಂತಾಗಿದೆ.

ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಪ್ರಮುಖ ದೇಶಗಳಲ್ಲಿ ಒಂದಾಗಿರುವುದರಿಂದ, ಅಮೆರಿಕದ ಈ ನಿರ್ಧಾರ ವ್ಯಾಪಾರ ವಲಯದ ದೃಷ್ಟಿಯಿಂದ ಮಹತ್ವ ಪಡೆದಿದೆ. ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಭಾರಿ ಸುಂಕ ವಿಧಿಸಿದರೆ, ಅಲ್ಲಿನ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳ ಸ್ಪರ್ಧಾತ್ಮಕತೆ ಮತ್ತು ವ್ಯಾಪಾರದ ಮೇಲೆ ಪರಿಣಾಮ ಬೀರಬಹುದೆಂಬ ಆತಂಕವಿತ್ತು.

ಟ್ರಂಪ್‌ ಕಳೆದ ಸೆಪ್ಟೆಂಬರ್‌ನಲ್ಲಿ ರಷ್ಯಾ ಮತ್ತು ಇರಾನ್‌ ವಿರುದ್ಧದ ನಿರ್ಬಂಧಗಳಿಗೆ ಸಂಬಂಧಿಸಿದ ಕಾನೂನಿಗೆ ಸಹಿ ಹಾಕಿದ್ದರು. ಅದರ ಅನ್ವಯ, ರಷ್ಯಾದಿಂದ ಕಚ್ಚಾ ತೈಲ ಅಥವಾ ನೈಸರ್ಗಿಕ ಅನಿಲ ಖರೀದಿಸುವ ಪ್ರಮುಖ ಐದು ದೇಶಗಳಿಂದ ಅಮೆರಿಕಕ್ಕೆ ಆಮದಾಗುವ ಸರಕುಗಳ ಮೇಲೆ 30 ದಿನಗಳೊಳಗೆ ಶೇ. 100ರವರೆಗೆ ಸುಂಕ ವಿಧಿಸಲು ಅವಕಾಶವಿತ್ತು. ಕಾನೂನು ಜಾರಿಯಾದ 30 ದಿನಗಳ ಬಳಿಕವೂ ಉದ್ದೇಶಪೂರ್ವಕವಾಗಿ ರಷ್ಯಾದಿಂದ ತೈಲ ಅಥವಾ ಅನಿಲ ಖರೀದಿಸುವ ದೇಶಗಳ ವಿರುದ್ಧ ಈ ಕ್ರಮ ಅನ್ವಯಿಸಬಹುದಿತ್ತು.

ರಷ್ಯಾದ ಮೇಲಿನ ನಿರ್ಬಂಧಗಳನ್ನು ತಪ್ಪಿಸಿಕೊಳ್ಳಲು ನೆರವಾಗುವ ಪ್ರಮುಖ ದೇಶಗಳ ವಿರುದ್ಧವೂ ಕ್ರಮ ಕೈಗೊಳ್ಳಲು ಕಾನೂನು ಅವಕಾಶ ಕಲ್ಪಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಹಲವು ದೇಶಗಳು ಆತಂಕ ವ್ಯಕ್ತಪಡಿಸಿದ್ದವು. ಅಮೆರಿಕದ ಮಾರುಕಟ್ಟೆಯು ಭಾರತೀಯ ರಫ್ತಿಗೆ ಪ್ರಮುಖವಾಗಿರುವುದರಿಂದ, ಹೆಚ್ಚಿನ ಸುಂಕ ಜಾರಿಯಾದರೆ ಉಭಯ ದೇಶಗಳ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿತ್ತು.

ಶ್ವೇತಭವನ ಹೊರಡಿಸಿದ ಆದೇಶದಲ್ಲಿ, ಪ್ರಸ್ತುತ ಸಂದರ್ಭದಲ್ಲಿ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ದೇಶಗಳಿಗೆ ವಿನಾಯಿತಿ ನೀಡುವುದು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿದೆ ಎಂದು ಟ್ರಂಪ್‌ ಹೇಳಿದ್ದಾರೆ. ಈ ಕುರಿತು ಅಮೆರಿಕದ ಸಂಸತ್ತಿಗೂ ಪ್ರಮಾಣಪತ್ರ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.

ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸುವ ದೇಶಗಳಲ್ಲಿ ಚೀನಾ ಮತ್ತು ಭಾರತ ಪ್ರಮುಖವಾಗಿವೆ. ಅಜರ್‌ಬೈಜಾನ್‌, ಹಂಗೇರಿ ಮತ್ತು ಸ್ಲೊವಾಕಿಯಾ ಕೂಡ ಈ ಪಟ್ಟಿಯಲ್ಲಿವೆ.

ಟ್ರಂಪ್‌ ಅವರ ನಿರ್ಧಾರದಿಂದ ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದಂತೆ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಸುಂಕದ ಮೂಲಕ ಒತ್ತಡ ಹೇರುವ ಪ್ರಸ್ತಾವಿತ ಕ್ರಮಗಳಿಗೆ ಸದ್ಯಕ್ಕೆ ವಿನಾಯಿತಿ ದೊರೆತಿದೆ. ಆದರೆ, ಯಾವ ನಿರ್ಬಂಧಗಳು ಮತ್ತು ಸುಂಕಗಳಿಗೆ ನಿಖರವಾಗಿ ವಿನಾಯಿತಿ ನೀಡಲಾಗಿದೆ ಎಂಬ ವಿವರ ಆದೇಶದಲ್ಲಿ ಸ್ಪಷ್ಟವಾಗಿಲ್ಲ.

RELATED ARTICLES
spot_img

Latest News