ಬೆಂಗಳೂರು,ಅ.17- ಬಹುನಿರೀಕ್ಷಿತ ನಮ ಮೆಟ್ರೋದ ಗುಲಾಬಿ ಮಾರ್ಗದ ಮೊದಲ ಹಂತದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದ್ದಾರೆ.ಈ ಕುರಿತಂತೆ ಪ್ರಧಾನಿಗಳಿಗೆ ಪತ್ರ ಬರೆದಿರುವ ಸಿಎಂ, ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿಲೋಮೀಟರ್ ಉದ್ದದ ಎತ್ತರಿಸಿದ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲು ದಿನಾಂಕ ನಿಗದಿಪಡಿಸುವಂತೆ ಪ್ರಧಾನಿಯವರಿಗೆ ಮನವಿ ಮಾಡಿಕೊಂಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಈ ತಿಂಗಳ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಗುಲಾಬಿ ಮಾರ್ಗ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮಯಾವಕಾಶದ ಆಧಾರದ ಮೇಲೆ ಉದ್ಘಾಟನಾ ದಿನಾಂಕ ಅಂತಿಮಗೊಳ್ಳುವ ಸಾಧ್ಯತೆಯಿದೆ.
ಒಂದು ವೇಳೆ ಪ್ರಧಾನಿ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗದಿದ್ದರೆ, ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಮಾರ್ಗವನ್ನು ಲೋಕಾರ್ಪಣೆ ಮಾಡುವ ಪರ್ಯಾಯ ಚಿಂತನೆಯೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.
103.6 ಕಿ.ಮೀ.ಗೆ ವಿಸ್ತರಣೆಯಾಗುವ ಮೆಟ್ರೋ ಜಾಲ;
ಗುಲಾಬಿ ಮಾರ್ಗದ ಈ ಎತ್ತರಿಸಿದ ವಿಭಾಗ ಕಾರ್ಯಾರಂಭ ಮಾಡಿದರೆ ಬೆಂಗಳೂರಿನ ನಮ್ಮ ಮೆಟ್ರೋ ಜಾಲದ ಒಟ್ಟು ಉದ್ದ 103.6 ಕಿಲೋಮೀಟರ್ಗೆ ವಿಸ್ತರಣೆಯಾಗಲಿದೆ. ಇದರೊಂದಿಗೆ ಬೆಂಗಳೂರು ದೇಶದಲ್ಲೇ ಎರಡನೇ ಅತಿ ದೊಡ್ಡ ಮೆಟ್ರೋ ಜಾಲ ಹೊಂದಿರುವ ನಗರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಳ್ಳಲಿದೆ.
ನಗರದ ದಕ್ಷಿಣ ಭಾಗದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಈ ಮಾರ್ಗ ಮಹತ್ವದ್ದಾಗಿದೆ. ಕಾಳೇನ ಅಗ್ರಹಾರ, ಬೊಮ್ಮನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ತಾವರೆಕೆರೆ ಭಾಗದ ಪ್ರಯಾಣಿಕರಿಗೆ ಮೆಟ್ರೋ ಸೇವೆ ಅನುಕೂಲ ಕಲ್ಪಿಸಲಿದೆ. ರಸ್ತೆ ಸಂಚಾರದ ಮೇಲಿನ ಅವಲಂಬನೆ ಕಡಿಮೆಯಾಗುವುದರ ಜತೆಗೆ, ಪ್ರಮುಖ ವಾಣಿಜ್ಯ ಮತ್ತು ವಸತಿ ಪ್ರದೇಶಗಳ ನಡುವಿನ ಪ್ರಯಾಣದ ಸಮಯ ಉಳಿತಾಯವಾಗುವ ನಿರೀಕ್ಷೆಯಿದೆ.
ಆರು ನಿಲ್ದಾಣಗಳ ಮಾರ್ಗ:ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಎತ್ತರಿಸಿದ ಮಾರ್ಗದಲ್ಲಿ ಒಟ್ಟು ಆರು ನಿಲ್ದಾಣಗಳಿವೆ. ಈ ಮಾರ್ಗದ ಪ್ರಮುಖ ಆಕರ್ಷಣೆ ಜಯದೇವ ಆಸ್ಪತ್ರೆ ಮೆಟ್ರೋ ನಿಲ್ದಾಣ. ಇದು ಗುಲಾಬಿ ಮಾರ್ಗ ಮತ್ತು ಹಳದಿ ಮಾರ್ಗದ ನಡುವೆ ಪ್ರಯಾಣಿಕರು ರೈಲು ಬದಲಾಯಿಸಲು ಅನುಕೂಲ ಕಲ್ಪಿಸುವ ಪ್ರಮುಖ ಇಂಟರ್ಚೇಂಜ್ ನಿಲ್ದಾಣವಾಗಿದೆ.
ಜಯದೇವ ಆಸ್ಪತ್ರೆ ನಿಲ್ದಾಣವು ನಗರದ ಪ್ರಮುಖ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ವಾಣಿಜ್ಯ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಹಳದಿ ಮಾರ್ಗದೊಂದಿಗೆ ಸಂಪರ್ಕ ಕಲ್ಪಿಸುವುದರಿಂದ ದಕ್ಷಿಣ ಬೆಂಗಳೂರಿನ ವಿವಿಧ ಭಾಗಗಳಿಗೆ ಮೆಟ್ರೋ ಮೂಲಕ ಸಂಚರಿಸುವುದು ಇನ್ನಷ್ಟು ಸುಲಭವಾಗಲಿದೆ.
