ಬೆಂಗಳೂರು,ಅ.17- ಸ್ಟಿಂಗ್ ಆಪರೇಷನ್ ಮಾಡಿದ ಆರೋಪ ಹೊತ್ತಿರುವ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿಂದು ಜೆಡಿಎಸ್ ಪಾದಯಾತ್ರೆ ನಡೆಸಿತು.
ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿವರೆಗೆ ಪಾದಯಾತ್ರೆ ನಡೆಸಲಾಯಿತು. ಸ್ಟಿಂಗ್ ಆಪರೇಷನ್ ಮಾಡಿರುವ ಆರೋಪವಿರುವ ವ್ಯಕ್ತಿಯ ವಿರುದ್ದ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದೆ ರಕ್ಷಣೆ ನೀಡುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿದರು. ಇತ್ತೀಚೆಗೆ ನಗರ ಪೊಲೀಸ್ ಆಯುಕ್ತರ ಕಚೇರಿಯ ಮೆಟ್ಟಿಲುಗಳ ಮೇಲೆ ಧರಣಿ ನಡೆಸಿ ರಾಜ್ಯ ಸರ್ಕಾರಕ್ಕೆ ಎರಡು ದಿನಗಳ ಗಡುವು ನೀಡಿದರು.
ಸ್ಟಿಂಗ್ ಆಪರೇಷನ್ ಹಿಂದಿರುವ ವ್ಯಕ್ತಿಯನ್ನು ಬಂಧಿಸಬೇಕು ಹಾಗೂ ಈ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರು ವಶಕ್ಕೆ ಪಡೆದಿರುವುದಕ್ಕೆ ಆಕ್ರೋಶಗೊಂಡಿದ್ದರು.
ಗೃಹಸಚಿವರು ಸಂಶಯ ಬಂದರೆ ಕುಮಾರಸ್ವಾಮಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದಾಗಿ ನೀಡಿದ್ದ ಹೇಳಿಕೆಯಿಂದ ಕೆರಳಿದ್ದ ಕುಮಾರಸ್ವಾಮಿ ಅವರು ನಾನೇ ಪೊಲೀಸ್ ಆಯುಕ್ತರ ಕಚೇರಿಗೆ ಬರುತ್ತೇನೆ. ಸಂಶಯವೇಕೆ ನನ್ನನ್ನೇ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸಿ ದಿಢೀರನೆ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ್ದರು.
ಪೊಲೀಸ್ ಆಯುಕ್ತರನ್ನು ಅಂದು ಭೇಟಿ ಮಾಡಿದ್ದರು. ಧರಣಿನಿರತ ಕುಮಾರಸ್ವಾಮಿ ಹಾಗೂ ಜೆಡಿಎಸ್ ಮುಖಂಡರನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಅವರು ಮನವೊಲಿಸಿ ಧರಣಿ ಅಂತ್ಯಗೊಳಿಸುವಂತೆ ಮನವಿ ಮಾಡಿದ್ದರು. ಮನವಿಯ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸುವ ಭರವಸೆಯ ಹಿನ್ನೆಲೆಯಲ್ಲಿ ಧರಣಿ ಕೈಬಿಟ್ಟಿದ್ದರು. ನಿಗದಿತ ಗಡುವಿನೊಳಗೆ ಸರ್ಕಾರದಿಂದ ಕಾನೂನು ಕ್ರಮವೂ ಆಗಿಲ್ಲ. ತನಿಖೆಗೂ ಆದೇಶವಾಗಿಲ್ಲ ಎಂದು ಆರೋಪಿಸಿ ಪಾದಯಾತ್ರೆ ನಡೆಸಲಾಯಿತು.
