Homeರಾಜ್ಯಗೂಗಲ್‌ ಮ್ಯಾಪ್‌ ನಂಬಿ ದಟ್ಟ ಕಾಡಿನಲ್ಲಿ ಸಿಲುಕಿದ 9 ಮಂದಿ ಟೆಕ್ಕಿಗಳು

ಗೂಗಲ್‌ ಮ್ಯಾಪ್‌ ನಂಬಿ ದಟ್ಟ ಕಾಡಿನಲ್ಲಿ ಸಿಲುಕಿದ 9 ಮಂದಿ ಟೆಕ್ಕಿಗಳು

ಬೆಂಗಳೂರು, ಅ. 17- ನವರಾತ್ರಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಬೆಂಗಳೂರಿನಿಂದ ಮೈಸೂರಿಗೆ ತೆರಳಿ, ಬಳಿಕ ಚೆನ್ನೈಗೆ ಪ್ರಯಾಣಿಸುತ್ತಿದ್ದ ಒಂಬತ್ತು ಮಂದಿ ಟೆಕ್ಕಿಗಳು ಗೂಗಲ್‌ ಮ್ಯಾಪ್‌ ನಂಬಿ ದಟ್ಟ ಕಾಡಿನೊಳಗೆ ಸಿಲುಕಿಕೊಂಡ ಘಟನೆ ನಡೆದಿದೆ.

ಗೂಗಲ್‌ ಮ್ಯಾಪ್‌ ತೋರಿಸಿದ ಮಾರ್ಗದಲ್ಲಿ ಸಂಚರಿಸಿ ಸೇತುವೆಯಿಂದ ಕಾರು ಕೆಳಗೆ ಬಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ಇಂತಹ ಘಟನೆ ನಡೆದಿರುವುದು, ಗೂಗಲ್‌ ಮ್ಯಾಪ್‌ ಮಾರ್ಗದರ್ಶನವನ್ನು ಎಷ್ಟು ನಂಬಬಹುದು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಬೆಂಗಳೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ಗಳಾದ ರೋಜರ್‌ ಪ್ರಿನ್ಸ್‌, ಮಣಿ, ಪ್ರಿನ್ಸ್‌ ಮಾರ್ಟಿನ್‌, ಅರಿವುಮತಿ, ಗಣ, ಶರ್ಮಿಳಾ, ತ್ರಿಷಾ, ಬೊಪೇಶ್‌ ಹಾಗೂ ಜೋಸಯ್ಯ ಕಾರಿನಲ್ಲಿ ಮೈಸೂರಿಗೆ ಪ್ರಯಾಣಿಸಿದ್ದರು.

ಮೈಸೂರಿನಲ್ಲಿ ನವರಾತ್ರಿ ಉತ್ಸವವನ್ನು ವೀಕ್ಷಿಸಿದ ಬಳಿಕ ಈ ತಂಡ ಚೆನ್ನೈಗೆ ತೆರಳುತ್ತಿತ್ತು. ಚಾಮರಾಜನಗರ ಮಾರ್ಗವಾಗಿ ದಿಂಬಂ ಘಾಟ್‌ ಮೂಲಕ ಚೆನ್ನೈಗೆ ಪ್ರಯಾಣಿಸುತ್ತಿದ್ದಾಗ ರಾತ್ರಿ ಆಗಿದ್ದರಿಂದ ರಸ್ತೆಯನ್ನು ಗುರುತಿಸಲು ಕಷ್ಟವಾಗಿದೆ. ಈ ವೇಳೆ ಅವರು ಗೂಗಲ್‌ ಮ್ಯಾಪ್‌ ಸಹಾಯ ಪಡೆದಿದ್ದಾರೆ.

ಗೂಗಲ್‌ ಮ್ಯಾಪ್‌ ದಟ್ಟ ಕಾಡಿನ ಒಳಭಾಗದ ರಸ್ತೆಯನ್ನು ತೋರಿಸಿದ್ದು, ಅದೇ ಮಾರ್ಗದಲ್ಲಿ ಸಾಗಿದ ಕಾರು ರಸ್ತೆ ಬದಿಯ ಕಂದಕದಲ್ಲಿ ಸಿಲುಕಿಕೊಂಡಿದೆ. ಪರಿಣಾಮ, ರಾತ್ರಿ ಇಡೀ ಕಾಡಿನಲ್ಲೇ ಕಳೆಯುವ ಪರಿಸ್ಥಿತಿ ಎದುರಾಗಿದೆ. ಈ ಸಂದರ್ಭದಲ್ಲಿ ಕಾಡಾನೆಯ ಘೀಳಿಡುವ ಶಬ್ದ ಕೇಳಿಬಂದಿದ್ದರಿಂದ ಆತಂಕಗೊಂಡ ಟೆಕ್ಕಿಗಳು ಕಾರಿನಿಂದ ಕೆಳಗಿಳಿಯದೆ ಅದರೊಳಗೇ ಉಳಿದುಕೊಂಡಿದ್ದಾರೆ.

ಬೆಳಗಾಗುವವರೆಗೂ ದಟ್ಟ ಕಾಡಿನಲ್ಲಿ ಕಾಲ ಕಳೆದ ತಂಡ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದೆ. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಹಾಗೂ ತಮಿಳುನಾಡು ಪೊಲೀಸರು ಸ್ಥಳಕ್ಕೆ ಆಗಮಿಸಿ ಕಂದಕದಲ್ಲಿ ಸಿಲುಕಿದ್ದ ಕಾರನ್ನು ಮೇಲಕ್ಕೆ ಎತ್ತಿದ್ದಾರೆ. ನಂತರ ಪೊಲೀಸರು ಒಂಬತ್ತು ಮಂದಿ ಟೆಕ್ಕಿಗಳನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ.

RELATED ARTICLES
spot_img

Latest News